Gummamakki Jathre ಅಯ್ಯೋ ದೇವರು ಬರೋದು 3 ಗಂಟೆ ಮೇಲೆ ಕಂಡ್ರಾ, ಎಂತಕ್, ಗಡಿಬಿಡಿ ಮಾಡ್ತೀರೋ , ಅಂಗ್ಡಿ ಗಿಂಗ್ಡಿ ಹಾಕೋದು ಎಂತಾದ್ರು ಅಂದಾಜ್ ಉಂಟಾನ್ರ. ದುಡ್ ಮಾತ್ರ ಅಪ್ಪನ್ ಹತ್ರ ಕೇಳಿ.. ಕೊಟ್ರೆ ತಗಳಿ… ಅಡಿಗೆ ಮನೆಯಿಂದ ಅಮ್ಮಾ ಒಂದೇ ಸಮ್ನೆ ಒದರ್ತಾನೆ ಇದ್ರೆ, ಇತ್ತ ಮಕ್ಕಳ ಮಂಡಿಯೊಳೆಗೆ ಬೇರೆಯದ್ದೆ ವಿಚಾರ ಓಡ್ತಾ ಇರುತ್ತೆ. ಹೋಯ್ ಬರ್ರಾ, ರಪ್ಪಾ ಹೋಗನ, ಆರೆ, ಆಟದ್ ಸಾಮನ್ ತಗಣಕ್ಕೆ ಕಡಿಗೆ ಹೋಗ್ವಾ.. ವ್ಯಾಪಾರ ಆಗ್ಲಾ ಅಂತ ಕಮ್ಮಿ ರೇಟಿಗೆ ಕೊಡ್ತಾರೆ ಇದು ಮಕ್ಳ ಯೋಚನೆ..ಒಟ್ಟಾರೆ, ವರ್ಷಕ್ಕೆ ಒಂದ್ಸಲ ನಮ್ ಬದಿಯಲ್ಲಿನ ಪ್ರತಿ ಕುಟುಂಬದಲ್ಲಿ ಇಷ್ಟೆಲ್ಲ ವಿಷ್ಯ ಡಿಸ್ಕಶನ್ ನಡೀತಿದೆ ಅಂದರೆ, ನಮ್ಮೂರಿನ ಜಾತ್ರೆ ಹತ್ತಿರಾನೇ ಇದೆ ಎಂದರ್ಥ.

ನಮ್ಮೂರಿನ ಗುಮ್ಮನಮಕ್ಕಿ ಜಾತ್ರೆ | ಭಾರಿ ಜೋರು |
ಇವತ್ ನಾನ್ ಹೇಳುಕೆ ಹೋರಟಿರೋದು ಎಂಥದ್ರೆ. ನಮ್ಮೂರಲ್ ಈ ವರ್ಷ ಕಳೆದ ಸಲಕ್ಕಿಂತ ಜೋರಾಗಿ ನಡೆಸೋಕೆ ರೆಡಿಯಾಗಿರವು ಗುಮ್ಮನ್ಮಕ್ಕಿ ಜಾತ್ರೆ ಬಗ್ಗೆ. ಹೋದ ಸತಿನು ಇದ್ರು ಬಗ್ಗೆ ಬರ್ದಿದ್ದೆ ಅದು ಮರ್ತ್ ಹೋಗಿತ್ ಅಂದ್ರೆ ಈಗ ಓದಿ
Gummamakki Jathre ಎಲ್ ನಡಿಯೋದ್ ಜಾತ್ರೆ ವಿಶೇಷ ಎಂಥ
ಈ ಜಾತ್ರೆ ನಡಿಯೋ ಜಾಗ ಹೆಚ್ ದೂರೇನ್ ಇಲ್ಲ ಇಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಹತ್ರ ಇರೋ ಪರ್ಸಾಮಕ್ಕಿ ಅನ್ನೋ ಒಂದ್ ಜಾಗದಲ್ಲಿ. ಪ್ರತಿ ವರ್ಷ ಎಳ್ಳಮಾಸ್ಯೆ ದಿನ ನಡೆಯುವ ಗುಮ್ಮನ ಮಕ್ಕಿ ಜಾತ್ರೆ ಇಸರ್ತಿ ಡಿಸೆಂಬರ್ 19 ಕ್ಕೆ ಬಂದದೆ. ಇದ್ರಲ್ಲಿ ಸ್ಪೆಷಲ್ ಎಂಥ ಅಂತೀರಾ, 5 ಊರಿನ ಗ್ರಾಮ ದೇವತೆಗಳು ಒಂದ್ ಕಡೆ ಸೇರೋದು ನಮ್ಮೂರ ಜಾತ್ರೆ ವಿಶೇಷ. ವಾಲಗದ ಶಬ್ದಕ್ಕೆ ದೇವತೆಗಳ ಕುಣಿತ ನೀವು ನೋಡಬೇಕು ಕಣ್ರಿ..ಅದೊಂಥರಾ, ಕಾಂತಾರಾ ದೈವ ದೃಶ್ಯದ ವೈಭವಕ್ಕಿಂತಲೂ ಹೆಚ್ಚೆ ಕಾಣ್ತದೆ. ಈ ಜಾತ್ರೆ ಸುತ್ ಮುತ್ತ ಊರಿನ 5 ದೇವತೆಗಳ ಸಮಾಗಮಕ್ಕೆ ಸಾಕ್ಷಿ ಆಗ್ತದೆ. .ಅಮ್ಮನವರ ಸಮಾಗಮ ನೋಡಕ್ಕಂತನೆ ಬೇರೆ ಬ್ಯಾರೆ ಊರಿಂದ ಸಾವಿರಾರು ಜನ ಬರ್ತಾರೆ ಕಂಡ್ರಿ.
ಮಾಳೂರು ಸೀಮೆ ಗುತ್ಯಮ್ಮ ಎಡೆಹಳ್ಳಿ, ಸೋಮವಾರ ಸಂತೆ ಗುತ್ಯಮ್ಮ ಹೊಸಳ್ಳಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಸಮಕಾನಿ, ಗಾಳಿಮಾರಮ್ಮನವರು ಮಾಳೂರು ಹಂಗೆ ತಲಬಿ ಅಮ್ಮನವರು ಗುಮ್ಮನಮಕ್ಕಿಯಲ್ಲಿ ಸೇರೋ ಐದೂರು ದೇವರುಗಳು. ಅದರಲ್ಲಿ ನಾಲ್ಕು ಊರಿನ ದೇವತೆಗಳು ಅಕ್ಕತಂಗಿಯರು ಎಂಬ ಮಾತು ಮೊದಲಿನಿಂದಲೂ ಇದೆ. ಜಾತ್ರೆಯ ದಿನ ಮದ್ಯಾಹ್ನದ ನಂತರ ದೇವರುಗಳು ಜಾತ್ರಾ ಬಯಲಿಗೆ ಆಗಮಿಸುತ್ತವೆ. ಆ ಟೈಮಿಗೆ ಅಲ್ಲಿ ಕಾಲ್ ಹಾಕಕ್ ಜಾಗ್ ಇರಲ್ಲ ನೋಡಿ ಅಷ್ಟೂ ಜನ ತುಂಬ್ ಹೋಗ್ತಾರೆ. ಏನೇ ಆಗ್ಲಿ ಅದ್ನ ನೋಡೋಕೆ ಬಾರಿ ಸಂತೋಷ ಆತದೆ.
ಅಂದಹಾಗೆ, ಅಮ್ಮನವರನ್ನೆಲ್ಲಾ ಒಟ್ಟು ಸೇರ್ಸೊ ಈ ಜಾತ್ರೆಗೊಂದು ಹಿನ್ನೆಲೆ ಉಂಟು. ಊರಿನ್ ಹಿರಿಯರ್ ಹೇಳ್ದಂಗೆ. ಜಾತ್ರೆಗೆ ಬರೋ ದೇವ್ರಲ್ಲಿ ಹಿರಿಯ ಅಕ್ಕ ಮಾಳೂರು ಸೀಮೆ ಗುತ್ಯಮ್ಮ ಎಡೆಹಳ್ಳಿ. ಎರಡನೇಯವರು ಸೋಮವಾರ ಸಂತೆ ಗುತ್ಯಮ್ಮ ಹೊಸಳ್ಳಿ , ಮೂರನೆಯವರು ಗಾಳಿಮಾರಿ ಅಮ್ಮನವರು, ನಾಲ್ಕನೆಯವರು ಸಮಕಾನಿ ಶ್ರೀ ದುರ್ಗ ಪರಮೇಶ್ವರಿ ಅಮ್ಮನವರು ಸಮಕಾನಿ,. ಇವರೆಲ್ಲಾ ಅಕ್ಕತಂಗಿ ಒಂದು ದಿನ ಒಟ್ಟು ಸೇರುವ ಸಂಭ್ರಮವನ್ನು ಜಾತ್ರೆ ರೂಪದಲ್ಲಿ ಆಚರಿಸ್ತಾರೆ ನೊಡಿ. ಈ ಜಾತ್ರೆಲಿ ಜಾತ್ರಾ ಸಮಿತಿಯವ್ರು ಸಹ ಬಂದಿದ್ ಜನಕ್ಕೆಲ್ಲ ಮದ್ಯಾಹ್ನದ್ ಹೊತ್ತಿಗೆ ಊಟದ್ ವ್ಯವಸ್ತೆ ಎಲ್ಲಾ ಮಾಡಿರ್ತಾರೆ, 12:30 ವರೆ ಊಟ ಕೊಡಕ್ ಸುರು ಮಾಡ್ತಾರೆ ನೋಡಿ,
Gummamakki Jathre ಹೆದ್ದೂರು ತೆಪ್ಪೋತ್ಸವ ಮತ್ತು ಗೌಜು ಗಮ್ಮತ್ತು
ತೀರ್ಥಹಳ್ಳಿ ತೆಪೋತ್ಸವದಂಗೆ ಇಲ್ಲೂ ಸಹ ತೆಪ್ಪೋತ್ಸವ ಬಾರಿ ಗೌಜು ಗಮ್ಮತ್ತು ಮಾಡ್ತಾರೆ. ಜಾತ್ರೆ ಮುಗುದ್ರು ಮೇಲೆ ಹೊಸಳ್ಳಿ ಗುತ್ಯಮ್ಮ ದೇವ್ರುನ್ನ ಗುಡಿ ಸೇರ್ಸೊ ಟೈಮ್ ಅಲ್ಲಿ ಅಲ್ ಹೊಡೆಯೋ ಪಟಾಕಿ ನೋಡ್ಬೇಕೆ ನೀವು ಚಳಿ ಎಲ್ಲಾ ಹಾರ್ ಹೋಗ್ತದೆ ಒಂದ್ ಸರ್ತಿ. ಇದ್ರು ಬಗ್ಗೆ ನಮ್ಗೆ ತಿಳ್ಕೊಣನ ಅಂತ ಬಾರಿ ಮನ್ಸಾಯ್ತ್ ಅದ್ಕೆ ಅದ್ನ ಆಯೋಜನೆ ಮಾಡೋ ಗುತ್ತಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರಿಗೆ ಗಡಿಬಿಡಿಲಿ ಫೋನ್ ಮಾಡಿದ್ವಿ ನೋಡಿ ಫೋನ್ ಮಾಡಿದ್ದೆ ತಡ ಅವ್ರು ಖುಷಿ ಇಂತ ಪಟ ಪಟ ಪಟ ಅಂತ ಎಲ್ಲ ವಿಷ್ಯನು ಹೇಳ್ಬಿಟ್ರು.

ಒಂದ್ 05 ವರ್ಷದಿಂದ ಬಾಳ ಗ್ರಾಂಡ್ ಆಗಿ ತೆಪ್ಪೋತ್ಸವ ಮಾಡ್ತಾ ಅದಿವಿ . ಈ ಸತಿ 6 ನೇ ವರ್ಷದ್ ತೆಪ್ಪೋತ್ಸವ. ಅವತ್ತಿನ್ ದಿನ ರಾತ್ರಿ ಅಂದ್ರೆ 19 ನೆ ತಾರೀಕು 6-00 ಗಂಟೆಯಿಂದ 10-00 ಗಂಟೆ ತಂಕ ತುಂಗಾ ನದಿ ಹತ್ರ ಇರೋ ಹೆದ್ದೂರು ಸೇತುವೆ ಪಕ್ಕಾ ಪಲ್ಲಕ್ಕಿ ದೇವ್ರನ್ನ .ಕೂರಿಸ್ತಿವಿ ಭಕ್ತರಿಗೆ ಹಣ್ಣ-ಕಾಯಿ, ತೀರ್ಥಪ್ರಸಾದ ವ್ಯವಸ್ಥೆ ಎಲ್ಲಾ ಮಾಡ್ತೀವಿ . ಅವತ್ತಿನ ದಿನ ಯಕ್ಷ ಮಾಣಿಕ್ಯ ಕು॥ ಚಿಂತನ ಹೆಗಡೆಯವರ ಯಕ್ಷಗಾನ ಪ್ರಸಂ ಪದ್ಯ ಹಾಡುಗಾರಿಕೆ ಕೂಡ ಉಂಟು ಅಂತಾ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ್ ತಿಳಿಸಿದ್ರು.
ಸಂಜೆ 7-00 ರಿಂದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಸೇತ್ವೆ ಹತ್ರ ತೆಪ್ಪೋತ್ಸವ ಕಾರ್ಯಕ್ರಮ ಹಾಗೂ ವಿಶೇಷ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ಶುರು ಆಗ್ತದೆ. ಸರಿ ಸುಮಾರು ಅವತ್ ಒಂದೇ ದಿನ 1 ಲಕ್ಷದ್ ಗರ್ನಲ್ ಢಂ ಅನಿಸುವ ಯೋಚನೆ ಉಂಟು ಎಂದ ನಾಗರಾಜ್ರವರು ಜಾತ್ರೆಯಲ್ಲಿ ಎಲ್ಲಿಯು ಭಕ್ತರಿಗೆ ತಾಪತ್ರಯ ಆಗದಂತೆ ವ್ಯವಸ್ಥೆ ಮಾಡಿವಿ ಅಂತಾ ಇನ್ನಷ್ಟು ಮಾಹಿತಿ ನೀಡಿದ್ರು.

Gummamakki Jathre celebration in 2025
ಇದ್ರು ಮದ್ಯ ಸೇತುವೆಗೆ ಸಿಂಗಾರ, ದೇವ್ರು ದಾಟಕ್ಕೆ ವ್ಯವಸ್ಥೆ ಸೇರಿದಂತೆ , ಚಳಿ ಬಿದ್ದ ಹೊತ್ತಲ್ಲಿ ದುಡಿಯುವ ಕೈಗಳನ್ನ ನೆನಪಿಸ್ಕೊಬೇಕು. ಇಲ್ಲಿನ ಸುತ್ ಮುತ್ಲಿನ್ ಊರಿನ್ ಹುಡ್ಗೂರೆಲ್ಲ ಸೇರಿ ಒಂದ್ ವಾರದ್ ಹಿಂದೆನೆ ಕೆಲ್ಸ ಸುರು ಹಚ್ಕೊತರೆ. ಸೇತುವೆಗೆ ಬಣ್ಣ ಹೊಡ್ದು ಅದ್ನ ಕ್ಲೀನ್ ಮಾಡಿ ಹೊಳೆ ದಾಟಕ್ಕೆ ಅಡ್ಕೆಕಂಬದ್ ಸೇತ್ವೆ ಮಾಡಿ ಜನ ಖುಷಿ. ಪಡ್ಲಿ ಅಂತ ಅಷ್ಟೆಲ್ಲ ಕೆಲ್ಸ ಮಾಡ್ತಾರಲ್ಲ ಮೆಚ್ಬೆಕ್ ಅವ್ರ ಶ್ರಮನ್ನ. ಒಟ್ಟಾರೆ, ಇಡೀ ದಿನ ಜಾತ್ರೆ, ಉತ್ಸವ ನಮ್ಮೂರಿನ ವಿಶೇಷಕ್ಕೊಂದು ಹೊಸ ಗರಿ ಮೂಡಿಸುತ್ತದೆ.


ವರದಿ ಪ್ರತಾಪ್ ತೀರ್ಥಹಳ್ಳಿ, ಮಲೆನಾಡು ಟುಡೆ ಕಂಟೆಂಟ್ ಪ್ರೊಡ್ಯೂಸರ್