Shivamogga Mar 6, 2024 5,8,9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಹೈಕೋರ್ಟ್ ಉತ್ತಮ ಸುದ್ದಿಯೊಂದನ್ನ ನೀಡಿದೆ. ಈ ಮೊದಲು ರಾಜ್ಯ ಸರ್ಕಾರ ನಿರ್ಧರಿಸಿದ ಪಬ್ಲಿಕ್ ಪರೀಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಸಂಬಂಧ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರ ಜಂಟಿಯಾಗಿ ಹೊರಡಿಸಿದ್ದ ಬೋರ್ಡ್ ಎಕ್ಸಾಂ ಸುತ್ತೋಲೆಯನ್ನು ರದ್ದು ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.
ಈ ಸಂಬಂಧ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್ ಮೊರೆಹೋಗಿತ್ತು. ಸರ್ಕಾರ ಬೋರ್ಡ್ ಪರೀಕ್ಷೆ ನಡೆಸುವ ಸಲುವಾಗಿ ಬೋರ್ಡ್ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಸಿದ್ದಪಡಿಸಲಾಗುತ್ತದೆ ಎಂದು ಹೇಳಿತ್ತು. ಆದರೆ ಖಾಸಗಿ ಶಾಲೆಗಳ ಪಠ್ಯಕ್ರಮ ಹಾಗೂ ಕಲಿಕಾ ಚೇತರಿಕೆಯ ಪಠ್ಯಕ್ರಮ ಬೇರೆಯಾಗಿದ್ದು ಬೋರ್ಡ್ ಎಕ್ಸಾಮ್ ಸೂಕ್ತವಲ್ಲ ಎಂದು ವಾದಿಸಿತ್ತು.
ಇದೇ ವಿಚಾರವಾಗಿ ಸರ್ಕಾರದ ಪರವಾಗಿ ಸಾಮಾನ್ಯ ಪಠ್ಯಕ್ರಮದಿಂದಲೇ ಕಲಿಕಾ ಚೇತರಿಕೆ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳು ಇದರಲ್ಲಿ ಇರೋದಿಲ್ಲ ಎಂದು ವಾದಿಸಲಾಗಿತ್ತು.
ಎರಡು ವಾದಗಳನ್ನ ಕೇಳಿದ ಹೈಕೋರ್ಟ್ ರಾಜ್ಯ ಶಿಕ್ಷಣ ಇಲಾಖೆ ಶಿಕ್ಷಣ ಕಾಯಿದೆಯಡಿ 2023ರ ಅಕ್ಟೋಬರ್ 6 ಮತ್ತು 9ರಂದು ರಾಜ್ಯ ಮಟ್ಟದ ಮಂಡಳಿ ಅಥವಾ, ಬೋರ್ಡ್ ಮಟ್ಟದ ಪರೀಕ್ಷೆ ನಡೆಸಲು ಹೊರಡಿಸಿದ್ದ ಸುತ್ತೋಲೆಗಳಿಗೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಮಾರ್ಚ್ 11 ರಿಂದ ನಿಗದಿಯಾಗಿದ್ದ ಬೋರ್ಡ್ ಪರೀಕ್ಷೆಗಳು ರದ್ದಾದಂತಾಗಿದೆ.
