KARNATAKA NEWS/ ONLINE / Malenadu today/ Nov 8, 2023 SHIVAMOGGA NEWS
Shivamogga | ರೈಲ್ವೆ ಟರ್ಮಿನಲ್ ನಿರ್ಮಾಣ ಕಾಮಗಾರಿ ಸ್ಥಳದ ಬಳಿ ರಸ್ತೆ ಮಧ್ಯೆದಲ್ಲಿಯೇ ತೆಗೆದಿದ್ದ ಗುಂಡಿಗೆ ಬಿದ್ದು 5ನೇ ತರಗತಿಯ ಬಾಲಕಿ ಮೃತಪಟ್ಟ ಘಟನೆ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಚೈತ್ರಾ ಸಾವನ್ನಪ್ಪಿದ ದುರ್ದೈವಿ.
ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಬೇರೆ ಊರಿನ ಸಂಪರ್ಕ ಹಾಗೂ ತೋಟ, ಹೊಲಕ್ಕೆ ಹೋಗುವ ಮಾರ್ಗವಿದೆ. ಅಲ್ಲಿಯೇ ಆಳವಾದ ಗುಂಡಿಯನ್ನು ತೆಗೆಯಲಾಗಿದೆ. ಕೋಟೆಂಗೂರಿನಲ್ಲಿ ಐದನೇ ತರಗತಿ ಓದುತ್ತಿದ್ದ ಚೈತ್ರಾ ಶಾಲೆಯಿಂದ ಮನೆಗೆ ಬಂದು ಮನೆ ಕೀ ತೆಗೆದುಕೊಂಡು ಬರಲು ತಂದೆ-ತಾಯಿ ಕೆಲಸ ಮಾಡುತ್ತಿದ್ದ ಹೊಲಕ್ಕೆ ಹೋಗಿದ್ದಳು.
ಅಲ್ಲಿ ಕೀ ಪಡೆದುಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಹೇಗೋ ಗುಂಡಿಗೆ ಬಿದ್ದಿದ್ದಾಳೆ. ಯಾರಿಗೂ ತಿಳಿಯದ ಕಾರಣ ಆಕೆಯ ಮೇಲಕ್ಕೆ ಬರಲಾಗದೇ ಅಲ್ಲಿಯೇ ಸಾವನ್ನಪ್ಪಿದ್ದಾಳೆ. ಎಷ್ಟೊತ್ತಾದರೂ ಚೈತ್ರಾ ಬಾರದ ಕಾರಣ ತಂದೆ ಶ್ರೀನಿವಾಸ್ ಅಕ್ಕಪಕ್ಕಾ ಹುಡುಕಾಡುತ್ತಾ ಗುಂಡಿಯ ಬಳಿ ಬಂದು ನೋಡಿದಾಗ ಚೈತ್ರಾಳ ಶವ ಸಿಕ್ಕಿದೆ.
ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಗುಂಡಿಯ ಕಲ್ಲು ಕಳಚಿದ್ದು, ಮಣ್ಣು ಕುಸಿದಿತ್ತು. ಹೀಗಾಗಿ ಕಾಮಗಾರಿಗಾಗಿ ಅಗೆದಿದ್ದ ಜಾಗದಲ್ಲಿ ಬಾರೀ ಪ್ರಮಾಣದ ನೀರು ಸಂಗ್ರಹವಾಗಿತ್ತು. ಇನ್ನೂ ಮಾರ್ಗ ಮಧ್ಯೆ ಗುಂಡಿ ತೆಗೆದರೂ ಗುತ್ತಿಗೆದಾರರು ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗುತ್ತಿಗೆದಾರರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ
