Sharavathi Valley : ಕಾರ್ಗಲ್ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಕರ್ನಾಟಕದ ಪ್ರಮುಖ ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಅತ್ಯಂತ ಬಿಗಿಯಾದ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಭಾಗದಲ್ಲಿರುವ ಎಲ್ಲಾ ಸೂಕ್ಷ್ಮ ಜಲವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ಅಣೆಕಟ್ಟೆಗಳ ಪ್ರದೇಶಗಳಿಗೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ
ಕೆಪಿಸಿಭದ್ರತಾ ವಿಭಾಗದ ಮುಖ್ಯ ಎಂಜಿನಿಯರ್ ಮಂಜುನಾಥ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಲಿಂಗನಮಕ್ಕಿ ತಳಕಳಲೆ ಮತ್ತು ಗೇರುಸೊಪ್ಪ ಅಣೆಕಟ್ಟೆಗಳು ಸೇರಿದಂತೆ ಗೇರುಸೊಪ್ಪ, ಲಿಂಗನಮಕ್ಕಿ, ಮಹಾತ್ಮ ಗಾಂಧಿ ಮತ್ತು ಎ.ಬಿ. ಸೈಟ್ ಜಲವಿದ್ಯುದಾಗರಗಳಂತಹ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಹಾಗೂ ಇತರೆ ಸಂದರ್ಶಕರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಶರಾವತಿ ಕಣಿವೆಯಲ್ಲಿರುವ ಈ ಪ್ರಮುಖ ವಿದ್ಯುತ್ ಉತ್ಪಾದನಾ ಮೂಲಗಳ ರಕ್ಷಣೆಗಾಗಿ ಈ ನಿಷೇಧವು ಮುಂದಿನ ಆದೇಶದವರೆಗೂ ಜಾರಿಯಲ್ಲಿರಲಿದೆ.
ಯೋಜನಾ ಘಟಕಗಳ ಉದ್ಯೋಗಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಸಹ ಈ ಜಲವಿದ್ಯುತ್ ಉತ್ಪಾದನಾ ಪ್ರದೇಶಗಳಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಮಂಜುನಾಥ್ ಅವರು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಯೋಧರು (Karnataka State Industrial Security Force) ನಿರಂತರವಾಗಿ 24 ಗಂಟೆಗಳ ಕಾಲ ಎಲ್ಲಾ ನಿರ್ಬಂಧಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಗಸ್ತು ನಡೆಸುತ್ತಾ ಭದ್ರತೆಯ ಮೇಲ್ವಿಚಾರಣೆಯನ್ನು ಮಾಡುತ್ತಿದ್ದಾರೆ.
ಇದಲ್ಲದೆ, ಯೋಜನಾ ಪ್ರದೇಶದ ಸುತ್ತಮುತ್ತ ಅನುಮಾನಾಸ್ಪದ ಚಲನವಲನಗಳು ಅಥವಾ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಕಾರ್ಗಲ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಾಗರಾಜ್ ಅವರು ಮಾತನಾಡಿ, ವಿಶ್ವವಿಖ್ಯಾತ ಜೋಗ ಜಲಪಾತ ಮತ್ತು ಧಾರ್ಮಿಕ ಕೇಂದ್ರಗಳಾದ ವಡನ್ ಬೈಲು ಪದ್ಮಾವತಿಮತ್ತು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರವಾಸಿ ತಾಣಗಳ ಪ್ರದೇಶಗಳಲ್ಲೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.
Sharavathi Valley Security Tightened


