Parappana Agrahara Jail ಶಿವಮೊಗ್ಗ : ಜೈಲುಗಳೆಂದರೆ ಅಪರಾಧಿಗಳಲ್ಲಿ ಭಯ ಹುಟ್ಟಬೇಕು, ಮತ್ತು ಅಲ್ಲಿಗೆ ಹೋದವರು ಇನ್ನು ಮುಂದೆ ಅಪರಾಧ ಮಾಡುವುದಿಲ್ಲ ಎಂಬ ಸಂಕಲ್ಪ ಮಾಡಬೇಕು. ಆದರೆ, ಪ್ರಸ್ತುತ ರಾಜ್ಯದ ಪ್ರಮುಖ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಧಾರಣಾ ಕೇಂದ್ರಗಳಾಗಿ ಇರಬೇಕಾದ ಜೈಲುಗಳು, ಇಂದು ಉಗ್ರರನ್ನು ಹುಟ್ಟುಹಾಕುವ ಕೇಂದ್ರಗಳಾಗಿ ಮಾರ್ಪಡುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.ಇತ್ತೀಚೆಗೆ ಜೈಲಿನಲ್ಲಿರುವ ಉಗ್ರನ ಕೈಯಲ್ಲಿ ಮೊಬೈಲ್ ಕಾಣುವ ದೃಶ್ಯಗಳು ಪತ್ತೆಯಾಗಿವೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಆರೋಪಿಯ ಕೊಠಡಿಯಲ್ಲಿ ಕಲರ್ ಟಿವಿಗಳು ಕಾಣಸಿಕ್ಕಿವೆ. ಸಿನಿಮಾ ನಟನಿಗೆ ಹಾಸಿಗೆ-ದಿಂಬುಗಳಿಗಾಗಿ ಕೋರ್ಟ್‌ಗೆ ಹೋಗಬೇಕಾಗುತ್ತದೆ, ಆದರೆ ಇಲ್ಲಿನ ವಿಚಾರಣಾಧೀನ ಮತ್ತು ಸಜಾಬಂಧಿಗಳ ಕೈಯಲ್ಲಿ ಕೂತಲ್ಲಿಯೇ ಎಲ್ಲವೂ ಸಿಗುತ್ತಿದೆ ಎಂದು ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
Parappana Agrahara Jail ಕೈದಿಗಳಿಗೆ ರಾಜ್ಯಾತಿಥ್ಯ ನೀಡಿದ್ದಕ್ಕೆ ಅವರು ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. “ಮೀಡಿಯಾಗಳಿಗೆ ಸಿಗುವ ವಿಡಿಯೋ ಹೋಮ್ ಮಿನಿಸ್ಟರ್‌ಗೆ ಏಕೆ ಸಿಗಲ್ಲ? ಇಂತಹ ಘಟನೆಗಳಿಂದ ಜನರಲ್ಲಿ ಹೊರಗಡೆಗಿಂತ ಜೈಲೇ ಸರಿಯಾದ ಜಾಗ ಎಂಬಭಾವನೆ ಮೂಡಿದರೆ, ಕಾನೂನು ಮತ್ತು ಸುವ್ಯವಸ್ಥೆಯ ಕಥೆ ಏನಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಹಾಗೆಯೇ ತಮ್ಮ ಅವಧಿಯಲ್ಲಿ ಜೈಲಿಗೆ ಜ್ಯಾಮರ್ ಹಾಕಿದ್ದಾಗ ವಸತಿ ನಿವಾಸಿಗಳಿಂದ ಆಕ್ಷೇಪ ಬಂದಿತ್ತು. ಅದನ್ನು ಸರಿಪಡಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈಗ ಅದು ಸರಿಪಡಿಸದೆ ಇರುವುದರಿಂದ ಜ್ಯಾಮರ್‌ನಿಂದ ಅನಾನುಕೂಲವಾಗುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ನಾನು ಗೃಹಸಚಿವನಾಗಿದ್ದಾಗ 20 ವರ್ಷಗಳಿಂದ ಅಲ್ಲೇ ಇದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿತ್ತು. ಈಗ ಆ ಅಧಿಕಾರಿಗಳು ವಾಪಸ್ ಆಗಿದ್ದಾರೆ ಎಂದು ಕಾಣಿಸುತ್ತದೆ. ಮಂಗಳೂರು, ಬೆಳಗಾವಿ ಮತ್ತು ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಿಗೆ ಸವಲತ್ತುಗಳು, ಮೊಬೈಲ್‌ಗಳು ಸಿಗುವಂತಾಗಿದೆ. ಇದು ಬದಲಾಗಬೇಕು. ಸೆರೆಮನೆಗಳು ಕೆಲ ಖೈದಿಗಳ ಪಾಲಿಗೆ ಅರಮನೆಗಳಾಗಿವೆ. ಕಾರಾಗೃಹದ ಸಿಬ್ಬಂದಿಗಳ ನೇಮಕಾತಿಯೂ ಆಗುತ್ತಿಲ್ಲ. ಖೈದಿಗಳ ಕೈಯಲ್ಲಿ ಮೊಬೈಲ್ ಮೊದಲಾದ ವಸ್ತುಗಳು ಪತ್ತೆಯಾಗುವುದಾದರೆ ಜೈಲುಗಳನ್ನೇ ಬಂದ್ ಮಾಡಬೇಕಾಗುತ್ತದೆ ಎಂದರು
ತಮ್ಮ ಸರ್ಕಾರ ನೆಮ್ಮದಿಯ ವಾತಾವರಣಕ್ಕಾಗಿ ಅನೇಕ ಸುಧಾರಣೆಗಳನ್ನು ಮಾಡಿತ್ತು. ಖೈದಿಗಳ ಕೈಗೆ ಸದಾಕಾಲ ಕೆಲಸ ಕೊಟ್ಟು, ಕೆಲಸ ಹೆಚ್ಚಿಸುವ ಮೂಲಕ ಜೈಲಿನ ಉತ್ಪಾದನೆಯನ್ನು ಸಹ ಹೆಚ್ಚಿಸಿತ್ತು. ತಮ್ಮ ಅವಧಿಯಲ್ಲಿ ಖೈದಿಗಳ ಸಂಬಳವನ್ನೂ ಹೆಚ್ಚಿಸಲಾಗಿತ್ತು. ಆದರೆ, ಈಗಿನ ಸರ್ಕಾರ ಜೈಲಿನ ಬಗ್ಗೆ ಏನೂ ಕ್ರಮ ಕೈಗೊಳ್ಳದ ಕಾರಣ ಈ ಕೃತ್ಯಗಳು ಹೆಚ್ಚು ನಡೆಯುತ್ತಿವೆ. ಕೂಡಲೇ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
Parappana Agrahara Jail ಸಾವರ್ಕರ್ ಡಿಪಿ ಪ್ರಕರಣದ ಬಗ್ಗೆ ಆಕ್ಷೇಪ
ಇದೇ ಸಂದರ್ಭದಲ್ಲಿ, ಸಾವರ್ಕರ್ ಡಿಪಿ ಹಾಕಿಕೊಂಡ ವ್ಯಕ್ತಿಯೊಬ್ಬರಿಗೆ ಜೀವಬೆದರಿಕೆ ಹಾಕಿರುವ ಘಟನೆಯನ್ನು ಖಂಡಿಸಿದ ಅವರು, ಸಾವರ್ಕರ್ ಡಿಪಿ ಹಾಕಿಕೊಂಡರೆ ಇವನಿಗೇನು ಕಡಿಯುತ್ತೆ? ಎಂದು ಪ್ರಶ್ನಿಸಿದರು. ನಟಿ ರಮ್ಯಾ ಅವರಿಗೆ ಅಶ್ಲೀಲ ಮೆಸೇಜ್ ಬಂದ ಪ್ರಕರಣದಲ್ಲಿ ಸುಮೊಟೊ ಪ್ರಕರಣ ದಾಖಲಾಗಿತ್ತು. ಇಂತಹ ಪ್ರಕರಣದಲ್ಲಿ ಸುಮೊಟೊ ಪ್ರಕರಣ ದಾಖಲಿಸಲು ಏನು ಅಡ್ಡಿ? ಎಂದು ಪ್ರಶ್ನಿಸಿದ ಮಾಜಿ ಗೃಹ ಸಚಿವ, ಈ ಪ್ರಕರಣದ ಬಗ್ಗೆ ಈಗಾಗಲೇ ಎಸ್‌ಪಿ ಬಳಿ ಮಾತನಾಡಿದ್ದೇನೆ ಎಂದು ತಿಳಿಸಿದರು.
Parappana Agrahara Jail

