Viral Reels Couple ಪ್ರೀತಿ ಎಂದರೆ ಅದೊಂದು ನಶೆ ಇದ್ದಂತೆ, ಅದನ್ನು ಹಚ್ಚಿಕೊಂಡರೆ ಬಿಡುವುದು ಬಹಳಾ ಕಷ್ಟ. ಕೆಲವರು ಎಲ್ಲರೂ ಮಾಡ್ತಾರಲ್ಲ ನಾವು ಪ್ರೀತಿ ಮಾಡೋಣ ಅಂತ ಟೈಂ ಪಾಸ್ಗೆ ಪ್ರೀತಿಸಿದರೆ ಇನ್ನೂ ಕೆಲವರು, ಪ್ರೀತಿಯೇ ಸರ್ವಸ್ವ ಇದ್ದರೂ ನಿನ್ನ ಜೊತೆ ಸತ್ತರೂ ನಿನ್ನ ಜೊತೆ ಎಂಬಂತೆ ಪ್ರೀತಿ ಮಾಡುತ್ತಾರೆ. ಅದಕ್ಕೆ ನಿದರ್ಶನ ಮಹಾರಾಷ್ಟ್ರದ ಸೊಲ್ಲಾಪುರದ ಯುವದಂಪತಿ ಆಕಾಶ್ ನಾರಾಯಣ್ಕರ್ ಮತ್ತು ಅಂಜಲಿ ಭಾಯ್ ಶಿಂಧೆ ಅವರ ಜೀವನ ಕಥೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೃದಯಸ್ಪರ್ಶಿ ರೀಲ್ಸ್‌ಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಈ ರೀಲ್ಸ್ ಜೋಡಿಯ ಕಥೆ ಇದೀಗ ಕನ್ನಡದಲ್ಲಿ ಸಿನಿಮಾವಾಗ್ತಿದೆ.
ಹೌದು ಕೆಮಿಸ್ಟ್ರಿ ಆಫ್ ಕರಿಯಪ್ಪ ಮತ್ತು ಕ್ರಿಟಿಕಲ್ ಕೀರ್ತನೆಗಳು ಚಿತ್ರಗಳ ಮೂಲಕ ಹೆಸರುವಾಸಿಯಾದ ಖ್ಯಾತ ಚಲನಚಿತ್ರ ನಿರ್ದೇಶಕ ಕುಮಾರ್ ಅವರು ಈ ಜೋಡಿಯ ನೈಜ ಜೀವನದಿಂದ ಪ್ರೇರಿತರಾಗಿ ‘ಲವ್ ಯೂ ಮುದ್ದು’ ಎಂಬ ಹೆಸರಿನ ಮೂಲಕ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವು ಇದೇ ನವೆಂಬರ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
Viral Reels Couple ಆಕಾಶ್ ಮತ್ತು ಅಂಜಲಿಯ ಹಿನ್ನೆಲೆ ಏನು
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೃದಯಸ್ಪರ್ಶಿ ರೀಲ್ಸ್‌ಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಮಹಾರಾಷ್ಟ್ರದ ಸೊಲ್ಲಾಪುರದ ಆಕಾಶ್ ಮತ್ತು ಅಂಜಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುವಾಗ ಅಂಜಲಿಗೆ ಸಂಭವಿಸಿದ ಅಪಘಾತವು ಅವರ ಬದುಕಿನ ಗತಿಯನ್ನೇ ಬದಲಿಸಿತು.
ಚಿಕಿತ್ಸೆ ವೇಳೆ, ಅಂಜಲಿ ಬಾಲ್ಯದಿಂದಲೂ ಮೆದುಳಿನ ಗೆಡ್ಡೆ (Brain Tumour) ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂತು. ಯಶಸ್ವಿ ಶಸ್ತ್ರಚಿಕಿತ್ಸೆ ನಂತರವೂ, ದುರದೃಷ್ಟವಶಾತ್ ಆಕೆಯ ದೇಹದ ಬಲಭಾಗ ಪಾರ್ಶ್ವವಾಯುಗೆ (Paralysis) ತುತ್ತಾಯಿತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಆಕೆಯ ಪತಿ ಆಕಾಶ್, ಆಕೆಯನ್ನು ಪ್ರೋತ್ಸಾಹಿಸಲು ಮತ್ತು ಆಕೆಯ ಚೇತರಿಕೆಗೆ ಉತ್ಸಾಹ ತುಂಬಲು ನಿರಂತರವಾಗಿ ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಪರದೆಯ ಮೇಲಿನ ಪ್ರೀತಿಗಿಂತ ನೈಜ ಪ್ರೀತಿಯ ಶಕ್ತಿ ದೊಡ್ಡದು ಎಂದು ಈ ಜೋಡಿ ಇಡೀ ಸಮಾಜಕ್ಕೆ ತೋರಿಸಿಕೊಟ್ಟಿದೆ.
ಈ ಭಾವನಾತ್ಮಕ ಪಯಣದಿಂದ ಪ್ರೇರಿತರಾದ ನಿರ್ದೇಶಕ ಕುಮಾರ್ ಅವರು, ದಂಪತಿಗಳ ಪ್ರೀತಿ ಹಾಗೂ ಜೀವನದ ಕಥೆಯನ್ನು ‘ಲವ್ ಯೂ ಮುದ್ದು’ ಚಿತ್ರದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ. ಇದು ಪ್ರೇಕ್ಷಕರಿಗೆ ಸ್ಪರ್ಶಿಸುವ ಸಿನಿಮೀಯ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ.
ಚಿತ್ರದಲ್ಲಿ ಆಕಾಶ್ ಮತ್ತು ಅಂಜಲಿ ಪಾತ್ರಗಳಲ್ಲಿ ನಟ ಸಿದ್ದು ಮೂಲಿಮನಿ ಮತ್ತು ಯುವ ನಟಿ ರೇಷ್ಮಾ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ, ತಬಲ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ಮುಂತಾದ ಅನುಭವಿ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

Viral Reels Couple


