Nidhi Scam Arrest ಚಳ್ಳಕೆರೆ : ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುವಾಗ ನಿಧಿ ಸಿಕ್ಕಿದೆ ಎಂದು ನಂಬಿಸಿ, ನಕಲಿ ಚಿನ್ನವನ್ನು ಮಾರಾಟ ಮಾಡಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 30 ಲಕ್ಷ ನಗದು ದೋಚಿದ್ದ ಪ್ರಕರಣವನ್ನು ತಳಕು ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, ವಂಚನೆಗೆ ಬಳಸಿದ್ದ ಹಣ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಲತಃ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದವರಾದ ಮತ್ತು ಪ್ರಸ್ತುತ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಸಿ. ಅರವಿಂದಕುಮಾರ್ (30) ಮತ್ತು ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ನಿವಾಸಿ ನಾಗಪ್ಪ (39) ಎಂದು ಗುರುತಿಸಲಾಗಿದೆ.
Nidhi Scam Arrest ಘಟನೆ ವಿವರ
ಅಕ್ಟೋಬರ್ 7 ರಂದು ಆರೋಪಿಗಳ ತಂಡ ತಮಿಳುನಾಡು ರಾಜ್ಯದ ವೆಲ್ಡನ್ ಎಂಬುವವರಿಗೆ ಮೊಬೈಲ್ ಕರೆ ಮಾಡಿ, ನಮ್ಮ ಮನೆ ಬುನಾದಿ ತೆಗೆಯುವಾಗ ನಿಧಿ ಸಿಕ್ಕಿದೆ, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ನಂಬಿಸಿದ್ದಾರೆ. ಈ ವ್ಯಕ್ತಿಯ ವಿಶ್ವಾಸ ಗಳಿಸಲು, ಆರೋಪಿಗಳು ಅವರಿಗೆ ಅಸಲಿ ಚಿನ್ನದ ನಾಣ್ಯದ ಮಾದರಿಯನ್ನು ಸಹ ನೀಡಿದ್ದರು.
ನಂತರ, ಏಳರಿಂದ ಎಂಟು ಜನರಿದ್ದ ತಂಡವು ವೆಲ್ಡನ್‌ರನ್ನು ತಳಕು ಠಾಣೆ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದ ಚಿಕ್ಕಹಳ್ಳಿ ಗೇಟ್‌ಗೆ ಕರೆಸಿಕೊಂಡಿದೆ. ಅಲ್ಲಿ, ಅಸಲಿ ಚಿನ್ನ ನೀಡುವುದಾಗಿ ಹೇಳಿ, ನಕಲಿ ಚಿನ್ನ ನೀಡಿ ಅವರಿಂದ 30 ಲಕ್ಷ ನಗದು ಪಡೆದು ವಂಚಿಸಿ ಪರಾರಿಯಾಗಿದ್ದರು.
ಅಕ್ಟೋಬರ್ 18 ರಂದು ವಿದ್ಯುತ್ ವ್ಯತ್ಯಯ
ವಂಚನೆಗೊಳಗಾದ ವೆಲ್ಡನ್ ಅವರು ತಳಕು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಂಜಿತ್ ಕುಮಾರ್ ಭಂಡಾರು ಹಾಗೂ ಹೆಚ್ಚುವರಿ ಎಸ್ಪಿ ಡಾ. ಆರ್. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ವಿಶೇಷ ತಂಡವು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ ಪೊಲೀಸರು 27.77 ಲಕ್ಷ ನಗದು ಮತ್ತು ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.


