ಶಿವಮೊಗ್ಗ : ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವುದನ್ನು ಕೇವಲ ಜಾತಿಗಣತಿ ಎಂದು ಭಾವಿಸಬಾರದು; ಬದಲಿಗೆ ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಇಂದು ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ನಾಗರಿಕರಿಗೂ ಸಮಾನತೆ ಒದಗಿಸುವ ದೃಷ್ಟಿಯಿಂದ ಈ ಮಹತ್ವದ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಈ ಸಮೀಕ್ಷೆಗೆ ಎಲ್ಲಾ ಶಿಕ್ಷಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಸಮೀಕ್ಷೆಗಾಗಿ ಕೆಲವು ಕಡೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಪ್ರತಿ ಶಿಕ್ಷಕರಿಗೆ ದಿನಕ್ಕೆ ಹತ್ತು (10) ಮನೆಗಳ ಗುರಿ (ಟಾರ್ಗೆಟ್) ನೀಡಲಾಗಿದ್ದು, ನಿಗದಿತ ಸಮಯದೊಳಗೆ ಸಮೀಕ್ಷೆಯನ್ನು ಸಂಪೂರ್ಣಗೊಳಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಬಗ್ಗೆ ಅಲ್ಲಿನ ನಾಗರಿಕರು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರವಾಗಿಸುವ ಕುರಿತು ಹೋರಾಟ ಮಾಡುವುದು ತಪ್ಪಲ್ಲ. ಈ ನಿಟ್ಟಿನಲ್ಲಿ ನಾವು ಕೂಡ ಜನರ ಹೋರಾಟದ ಜೊತೆಗಿರುತ್ತೇವೆ ಎಂದು ಮಧು ಬಂಗಾರಪ್ಪ ಅವರು ಸಾಗರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

