Arecanut news : ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಕಷ್ಟ ಹೇಳತೀರದು. ಕಳೆದ ಎರಡು ವರ್ಷಗಳಿಂದ ಅಡಿಕೆ ಒಣಗಿಸಲು ಬಿಡದ ಮಳೆ, ಹಾವು ಏಣಿ ಆಟ ಆಡುತ್ತಿರುವ ಅಡಿಕೆ ಬೆಲೆ, ಹಾಗೆಯೇ ವಿಪರೀತ ಮಳೆಯಿಂದಾಗಿ ಕಾಡುತ್ತಿರುವ ಕೊಳೆರೋಗ – ಇವೆಲ್ಲವೂ ಅಡಿಕೆ ಬೆಳೆಗಾರರನ್ನು ನಷ್ಟಕ್ಕೆ ದೂಡಿವೆ. ಈ ಬಾರಿಯೂ ಅದಕ್ಕೆ ಹೊರತಾಗಿಲ್ಲ.
Arecanut news : ಅಡಿಕೆ ಬೆಳೆಗೆ ಮತ್ತೆ ಕಾಡುತ್ತಿದೆ ಕೊಳೆರೋಗ
ಈ ಬಾರಿಯೂ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಇದರ ನಡುವೆ ಆಗಾಗ ಬರುವ ಸೂರ್ಯನ ಬೆಳಕು, ಅಡಿಕೆ ತೋಟದಲ್ಲಿ ಕೊಳೆರೋಗಕ್ಕೆ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಅಡಿಕೆಯಲ್ಲಿ ಬೂದು ಕೊಳೆ ಮತ್ತು ನೀರು ಕೊಳೆ ಎಂಬ ಎರಡು ರೀತಿಯ ಕೊಳೆ ರೋಗಗಳು ಕಂಡುಬರುತ್ತವೆ. ಮಳೆ ಹೆಚ್ಚಾಗಿ ಅದರ ನಡುವೆ ಬಿಸಿಲು ಬಂದಾಗ ಈ ಕೊಳೆರೋಗಗಳು ಪ್ರಾರಂಭವಾಗುತ್ತವೆ.ನೀರು ಕೊಳೆಯು ಸಾಮಾನ್ಯವಾಗಿ ವರ್ಷಕ್ಕೆ ಒಂದೆರಡು ಮರಗಳಿಗೆ ತಗಲುತ್ತದೆ. ಅದನ್ನು ಹಾಗೆಯೇ ಬಿಟ್ಟರೆ, ಅದು ತೋಟದ ಎಲ್ಲಾ ಮರಗಳಿಗೂ ಹರಡಿ, ಹಸಿ ಅಡಿಕೆ ಪೂರ್ಣವಾಗಿ ಹಾಳಾಗಿ ನಷ್ಟ ಉಂಟಾಗುತ್ತದೆ. ಬೂದು ಕೊಳೆಯು ಬಹಳ ಅಪಾಯಕಾರಿ. ಇದು ಒಮ್ಮೆ ಬಂದರೆ, ಇಡೀ ತೋಟಕ್ಕೆ ಹರಡಿ ಸಂಪೂರ್ಣ ಬೆಳೆಯನ್ನು ಹಾಳು ಮಾಡುತ್ತದೆ.
ಈ ಬಾರಿ ನೀರು ಕೊಳೆ ಹೆಚ್ಚಾಗಿ ಆವರಿಸಿದೆ. ಕಳೆದ ವರ್ಷವೂ ಇದೇ ಕೊಳೆಯಿಂದಾಗಿ ಅಡಿಕೆ ಬೆಳೆಗಾರರು ಮತ್ತು ಚೇಣಿದಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಬಾರಿಯೂ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾವ ಸ್ಥಿತಿ ಕಾಡುತ್ತಿದೆ. ಒಂದು ತೋಟಕ್ಕೆ ರೋಗ ಬಂದು ಅದನ್ನು ಗಮನಿಸದೆ ಬಿಟ್ಟರೆ, ಅದು ಪಕ್ಕದ ತೋಟಗಳಿಗೂ ಹರಡಿ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ, ರೈತರು ಕೊಳೆರೋಗ ತಡೆಗಟ್ಟಲು 40 ದಿನಗಳಿಗೊಮ್ಮೆ ಮೈಲುತುತ್ತ ಎಂಬ ಔಷಧಿಯನ್ನು ಎರಡು ಬಾರಿ ಸಿಂಪಡಿಸುತ್ತಾರೆ. ಆದರೆ, ಕಳೆದ ವರ್ಷ ಐದಕ್ಕಿಂತ ಹೆಚ್ಚು ಬಾರಿ ಸಿಂಪಡಿಸಿದ್ದರೂ ರೋಗ ನಿಯಂತ್ರಣಕ್ಕೆ ಬಂದಿರಲಿಲ್ಲ. ಅದೇ ರೀತಿ ಈ ಬಾರಿಯೂ ಕೆಲವರು ಈಗಾಗಲೇ 3 ಬಾರಿ ಔಷಧಿ ಯನ್ನು ಸಿಂಪಡಿಸಿದ್ದಾರೆ.
Arecanut news : ಬೆಳೆಗಾರರು ಮತ್ತು ಚೇಣಿದಾರರಿಗೆ ನಷ್ಟ
ಒಂದು ಎಕರೆ ತೋಟದಲ್ಲಿ ತೀರ್ಥೈಹಳ್ಳಿ ಭಾಗದಲ್ಲಿ ಸರಿಸುಂಆರು 10 ಕ್ವಿಂಟಾಲ್ ವರೆಗೂ ಅಡಿಕೆ ಇಳುವರಿ ಬರುತ್ತದೆ ,ಆದರೆ ಕಳೆದ ಬಾರಿಯಿಂದ ಈ ಕೊಳೆರೋಗ ಹೆಚ್ಚಾಗಿದ್ದರಿಂದ ಅರ್ಧಕ್ಕೆ ಅರ್ಧದಷ್ಟು ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ಚೇಣಿದಾರರು ಮತ್ತು ರೈತರಿಬ್ಬರೂ ನಷ್ಟ ಅನುಭವಿಸುವಂತಾಗಿದೆ. ಅನೇಕ ಕಡೆ ಕಳೆದ ಬಾರಿ ಆದ ನಷ್ಟದಿಂದಾಗಿ, ಈ ಬಾರಿ ಚೇಣಿದಾರರು ಅಡಿಕೆ ಚೇಣಿ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ ಬಾರಿಯೂ ಕೊಳೆರೋಗ ಉಲ್ಬಣಿಸಿರುವುದು ಅವರಿಗೆ ಮತ್ತಷ್ಟು ಭಯ ಮೂಡಿಸಿದೆ.ಚೇಣಿದಾರರು ಚೇಣಿ ಪಡೆಯಲು ಹಿಂಜರಿಯುತ್ತಿರುವುದರಿಂದ, ಬೆಳೆಗಾರರು ಅಡಿಕೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ. ಇದರಿಂದಾಗಿ ಇಬ್ಬರಿಗೂ ನಷ್ಟವಾಗುತ್ತಿದೆ.
ಇಷ್ಟೇ ಅಲ್ಲದೆ, ಮಳೆ ಬಿಡದೆ ಸುರಿಯುತ್ತಿರುವ ಕಾರಣ, ಅಡಿಕೆ ಕೊನೆ ತೆಗೆಯುವುದು ವಿಳಂಬವಾಗುತ್ತಿದೆ. ಇದರಿಂದ ಅಡಿಕೆ ಹಣ್ಣಾಗಿ ಉದುರುವುದು ಹೆಚ್ಚಾಗುತ್ತಿದೆ. ಉದುರಿದ ಅಡಿಕೆಗೆ (ಗೋರಬಲು ಅಡಿಕೆ) ಬೆಲೆ ಕಡಿಮೆ ಇರುವುದರಿಂದ ಇದು ಕೂಡ ನಷ್ಟಕ್ಕೆ ಕಾರಣವಾಗಿದೆ.ಒಟ್ಟಾರೆಯಾಗಿ, ಅಡಿಕೆ ಬೆಲೆಯ ಏರಿಳಿತ, ಅಕಾಲಿಕ ಮಳೆ ಮತ್ತು ಕೊಳೆರೋಗದಿಂದಾಗಿ ಅಡಿಕೆ ಬೆಳೆಗಾರರು ಮತ್ತು ಚೇಣಿದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವರದಿ : ಪ್ರತಾಪ್ ತೀರ್ಥಹಳ್ಳಿ


