ಪ್ರಧಾನಿ ಮೋದಿ ಹುಟ್ಟುಹಬ್ಬ , ಶಿವಮೊಗ್ಗ ಶಾಸಕರ ಭಾವುಕ ಪತ್ರ

Modi birthday today : ದೇಶದ ಪ್ರಧಾನಿ ನರೇಂದ್ರ ಮೋದಿ ಇಂದು ತನ್ನ 75 ನೇ ವಸಂತಕ್ಕೆ  ಕಾಲಿಡುತ್ತಿದ್ದಾರೆ. ಈ ಸಂಭ್ರಮಾಚರಣೆಯನ್ನು ದೇಶದ ಎಲ್ಲೆಡೆ ಕಾರ್ಯಕರ್ತರು ಆಚರಿಸುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧೆಡೆ ಶುಭಾಶಯವನ್ನು ಕೋರುತ್ತಿದ್ದಾರೆ. ಇತ್ತ ಶಿವಮೊಗ್ಗ ನಗರ ಶಾಸಕ ಎಸ್​ ಎನ್​ ಚನ್ನಬಸಪ್ಪರವರು  ಕಾರ್ಯಕರ್ತನ ಕಣ್ಣಲ್ಲಿ ಪ್ರಧಾನ ಸೇವಕ ಎಂಬ ಪತ್ರದ ಮೂಲಕ ಪ್ರಧಾನಿ  ನರೇಂದ್ರ ಮೋದಿಯವರಿಗೆ ಶುಭಾಶಯವನ್ನು ಕೋರಿದ್ದಾರೆ. ಅದರಲ್ಲಿ ಅವರ ಹಾಗೂ ಮೊದಿಯವರ ಮೊದಲ ಭೇಟಿ ಸೇರಿದಂತೆ ಇನ್ನಿತರೇ ವಿಚಾರವನ್ನು ಹಂಚಿಕೊಂಡಿದ್ದು, ಮೊದಲ ಭೇಟಿಯ  ಫೋಟೋವೊಂದನ್ನು ಸಹ ಹಂಚಿಕೊಂಡಿದ್ದಾರೆ.

Modi birthday today :  ಪತ್ರದಲ್ಲಿ ಏನಿದೆ

ಭಾರತವೆಂದರೆ ಒಂದು ದಿವ್ಯ ಅನುಭೂತಿ – ಪರಮಾತ್ಮನು ತನ್ನ ದಶಾವತಾರಗಳಿಗೆ ಆಯ್ದುಕೊಂಡ ಪುಣ್ಯಧಾಮ, ಜಗತ್ತೇ ಕೊಂಡಾಡುವ ಮುಕ್ತಿಧಾಮ, ನಮ್ಮ ಹೆಮ್ಮೆಯ ಭಾರತ.ನಮ್ಮ ದೇಶದ ಅಸ್ಮಿತೆ, ಸಂಸ್ಕಾರ, ಸಹಿಷ್ಣುತೆಯನ್ನು ದೇಶವ್ಯಾಪಿಯಾಗಿ ಪಸರಿಸಲು ಮತ್ತು ಜಗತ್ತಿನಾದ್ಯಂತ ಭಾರತವನ್ನು ಪ್ರತಿನಿಧಿಸಲು ಭಾರತಾಂಬೆ ತನ್ನ ತಪೋಶಕ್ತಿಯಿಂದ ಕಾಲಕಾಲಕ್ಕೆ ಮಹಾನ್ ಪುತ್ರರತ್ನಗಳನ್ನು ದೇಶಸೇವೆಗೆ ಕಳಿಸುತ್ತಾಳೆ. ಅಂತಹ ಭಾರತಾಂಬೆಯ ಹೆಮ್ಮೆಯ ಪುತ್ರರತ್ನರಾದ ನಮ್ಮೆಲ್ಲರ ಮೆಚ್ಚಿನ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ, ಒಬ್ಬ ಕಾರ್ಯಕರ್ತನಾಗಿ ನಾನು ಶುಭಾಶಯಗಳನ್ನು ಕೋರಲು ಹೆಮ್ಮೆ ಪಡುತ್ತೇನೆ.

ನರೇಂದ್ರ ಮೋದಿಯವರುಜಗತ್ತೇ ಕೊಂಡಾಡುತ್ತಿರುವ, ಭಾರತಾಂಬೆಯ ಹೆಮ್ಮೆಯ ಪುತ್ರ, ಭಾರತದ ಪ್ರಧಾನ ಸೇವಕ.

ನಾನು ಅವರನ್ನು ಮೊದಲ ಬಾರಿ ಕಂಡದ್ದು 1991ರ ಏಕತಾ ಯಾತ್ರೆಯ ಸಮಯದಲ್ಲಿ. ಭಯೋತ್ಪಾದಕರ ರಕ್ಕಸರು ಭಾರತೀಯರನ್ನು ಕೆಣಕಲೆಂದೆ “ತಾಯಿಯ ಎದೆಹಾಲನ್ನು ಕುಡಿದ ಭಾರತೀಯನಿದ್ದರೆ, ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ” ಎಂದು ಬಹಿರಂಗವಾಗಿ ಸವಾಲನ್ನು ದೇಶದ ಮುಂದೆ ಮಂಡಿಸಿದಾಗ, ಆ ಸವಾಲಿಗೆ ಪ್ರತ್ಯುತ್ತರವಾಗಿ, ಭಾರತದ ವಿವಿಧ ಭಾಗಗಳಿಂದ ಕಾಶ್ಮೀರಕ್ಕೆ ತೆರಳಿ ಧೈರ್ಯವಾಗಿ ನಿಂತು, ಭಯೋತ್ಪಾದಕರ ಗುಂಡಿಗೆ ಎದೆ ಕೊಡಲು ಸಿದ್ದರಾಗಿ, ಬೆದರದೆ, ಜಗ್ಗದೆ, ಆಳುಕದೆ ಒಂದೇ ಧ್ವನಿಯಿಂದ “ರಾಷ್ಟ್ರವೇ ಮೊದಲು” ಎಂದು ಸಾರಿದ, ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಹೋರಾಟ. ಭಾರತವನ್ನು ಅಣಕಿಸುವ ದುರುಳರ ಮೆಟ್ಟಿ ಶ್ರೀನಗರದ ಲಾಲ್ ಚೌಕಿನಲ್ಲಿ ಧೈರ್ಯವಾಗಿ ಭಾರತದ ಧ್ವಜವನ್ನು ಹಾರಿಸಿದ ದಿವ್ಯ ಯಾತ್ರೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಅಸಂಖ್ಯಾತ ಕಾರ್ಯಕರ್ತರ ನಡುವೆ, ಶಿವಮೊಗ್ಗದಿಂದ ಸಾಗಿದ್ದ ಸಾವಿರಾರು ಕಾರ್ಯಕರ್ತರಲ್ಲಿ ನಾನು ಒಬ್ಬನಾಗಿದ್ದೆ ಎನ್ನುವುದು ನನ್ನ ಬದುಕಿನ ಅತಿ ದೊಡ್ಡ ಗರ್ವದ ಸಂಗತಿ.ತಾಯಿ ಭಾರತಿಯ ಮಕ್ಕಳ ಧೈರ್ಯವನ್ನು ಜಗತ್ತಿಗೆ ತಿಳಿಸಿದ ಯಾತ್ರೆ. ಇಂತಹ ದಿವ್ಯ ಸಂಕಲ್ಪ ಹೊತ್ತ ಯಾತ್ರೆಯು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚಾರ ಮಾಡಿದ್ದು, ಅದರ ಭಾಗವಾಗಿ ಶಿವಮೊಗ್ಗಕ್ಕೂ ಬರುವ ನಿರ್ಧಾರವಾಗಿತ್ತು.

Modi birthday today ಭಾಜಪದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಡಾ. ಮುರಳಿ ಮನೋಹರ್ ಜೋಶಿ ಅವರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಏಕತಾ ಯಾತ್ರೆ ಶಿವಮೊಗ್ಗಕ್ಕೆ ಬಂದಾಗ, ನಮ್ಮಂತಹ ಯುವ ಕಾರ್ಯಕರ್ತರಿಗೆ ಅದು ಹಬ್ಬದ ಸಂಭ್ರಮವಾಗಿತ್ತು. ನಾವು ಕಾರ್ಯಕ್ರಮದ ಯಶಸ್ಸಿಗಾಗಿ ಹಗಲು–ರಾತ್ರಿ ದುಡಿಯಲು ಸಿದ್ದರಾದೇವು. ಯಾತ್ರೆಯ ಪ್ರತಿಯೊಂದು ರೂಪುರೇಷೆಯನ್ನು ನರೇಂದ್ರ ಮೋದಿಯವರು ಸ್ವತಃ ಗಮನಿಸುತ್ತಿದ್ದರು. ಕಾರ್ಯಕರ್ತರ ಮೇಲಿನ ಪ್ರೀತಿ, ಜನರ ಮೇಲಿನ ಅನುರಾಗ, ದಿವ್ಯ ದೇಶಭಕ್ತಿ, ಸಂಘಟನೆಯ ಮೇಲಿನ ಅಭಿಮಾನವನ್ನು ನಾವು ಹತ್ತಿರದಿಂದಲೇ ಕಾಣುವ ಅವಕಾಶ ದೊರೆತಿದ್ದು ನಮ್ಮ ಸುಕೃತ.

ಶಿವಮೊಗ್ಗ ಸಂಘಟನೆಯ ಶಕ್ತಿ ಕೇಂದ್ರ… ಯಾತ್ರೆಗೆ ಬರುವ ಪ್ರತಿಯೊಬ್ಬರಿಗೂ ಉಪಹಾರದ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು. ದುಂದು ವೆಚ್ಚವಿಲ್ಲದೆ ಮನೆಮನೆಗಳಿಂದ 10–20, ಹೆಚ್ಚೆಂದರೆ 25 ಚಪಾತಿಗಳನ್ನು ಸಂಗ್ರಹಿಸಲಾಯಿತು. ಹೆಚ್ಚಿನ ಮನೆಗಳನ್ನು ಜೋಡಿಸಲು, ಒಂದೇ ಮನೆಯಿಂದ ಹೆಚ್ಚಾಗಿ ತರಿಸದೆ ಎಲ್ಲರನ್ನೂ ತೊಡಗಿಸಿಕೊಳ್ಳಲಾಯಿತು. ಸಂಘಟನೆಯ ಶಕ್ತಿಯ ಫಲವಾಗಿ ಲಕ್ಷಾಂತರ ಚಪಾತಿಗಳು ಸಾವಿರಾರು ಮನೆಗಳಿಂದ ನಮಗೆ ದೊರೆತವು. ಈ ಚಪಾತಿಗಳನ್ನು ನಗರದ ವಾಸವಿ ಶಾಲೆಯಲ್ಲಿ ಜೋಡಿಸಲಾಯಿತು. ಆ ಚಪಾತಿಯ ಪರಿಮಳ ಇಂದಿಗೂ ಮನಸ್ಸಿನಲ್ಲಿ ಮೂಡುತ್ತದೆ.

ಕಾರ್ಯಕ್ರಮದ ಬಳಿಕ ಡಾ. ಮುರಳಿ ಮನೋಹರ್ ಜೋಶಿ ಹಾಗೂ ನರೇಂದ್ರ ಮೋದಿಯವರೂ ಸಹ ನಮ್ಮ ಕಾರ್ಯಕರ್ತರ ಮನೆಯಿಂದ ಬಂದ ಚಪಾತಿಗಳನ್ನು ಸೇವಿಸಿ ನಮ್ಮ ಬೆನ್ನು ತಟ್ಟಿದರು. ಅದು ನಮ್ಮ ಬದುಕಿನ ದೊಡ್ಡ ಪಾಠ – ಸರಳತೆ, ಜನಸೇವೆ, ಸಂಘಟನೆಯ ಶ್ರೇಷ್ಠತೆ. ಒಬ್ಬ ಕಾರ್ಯಕರ್ತನಾಗಿ ಅಂದಿನ ದಿನಗಳನ್ನು ನೆನೆಯುವಾಗ, ನಮ್ಮ ಬೆನ್ನಿಗಿದ್ದು ನಮ್ಮನ್ನು ತಿದ್ದುತಿದ್ದ, ನಮಗೆ ಕೆಲಸ ಮಾಡಲು ಪ್ರೋತ್ಸಾಹಿಸುತ್ತಿದ್ದ ಶಿವಮೊಗ್ಗದ ಎಲ್ಲಾ ಹಿರಿಯರು, ಸಂಘಟನೆಯ ಪ್ರಮುಖರು ಕಲಿಸಿದ್ದು – ರಾಜಕೀಯದ ಪಾಠವಲ್ಲ, ಸಂಸ್ಕಾರದ ಪಾಠ; ಮತ ಕದಿಯುವ ಪಾಠವಲ್ಲ, ಜನರೊಂದಿಗೆ ಬೆರೆವ ಪಾಠ; ಎಲ್ಲರೊಳಗೆ ಒಂದಾಗಿ ಮನಗೆಲ್ಲುವ ಪಾಠ.ಮೋದಿಯವರನ್ನು ಮತ್ತೆ ಹತ್ತಿರದಿಂದ ಕಂಡದ್ದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ. ಶಿವಮೊಗ್ಗದ ಚುನಾವಣೆಯ ಪ್ರಚಾರಕ್ಕೆ ಮೋದಿಯವರು ಮುಖ್ಯ ಭಾಷಣಕಾರರಾಗಿದ್ದರು. ವೇದಿಕೆ ನಿರ್ವಹಣೆಯ ಜವಾಬ್ದಾರಿ ನನಗೆ ಮತ್ತು ಸ್ವರ್ಗೀಯ ಶ್ರೀ ಭಾನುಪ್ರಕಾಶ್ ರವರಿಗೆ ನೀಡಲಾಗಿತ್ತು. ಮೋದಿಯವರನ್ನು ಹತ್ತಿರದಿಂದ ಕಂಡಾಗ ಅವರ ಸರಳತೆ, ಒಬ್ಬ ದಿವ್ಯ ಅವದೂತನಂತೆ ಕಂಡರು ಅವರ ಆಕರ್ಷಕ ವ್ಯಕ್ತಿತ್ವ ಮನಸ್ಸಿನಲ್ಲಿ ಈಗಲೂ ಚಿರಸ್ಥಾಯಿಯಾಗಿ ಉಳಿದಿದೆ. ಅವರಿಗೆ ಅಭಿನಂದಿಸುವ ಅವಕಾಶ ದೊರೆತ ಕ್ಷಣದ ಹೆಮ್ಮೆ ವರ್ಣನಾತೀತ. 

ಭಾರತದ ಸನಾತನ ಧರ್ಮದ ಶ್ರೇಷ್ಠ ಹೆಗ್ಗುರುತಾದ ಕೇಸರಿ ಶಾಲನ್ನು ಅವರಿಗೆ ಹೊದಿಸಿದಾಗ ನನ್ನ ಹೃದಯದಲ್ಲಿ ನಿಜಕ್ಕೂ ವಿದ್ಯುತ್ ಸಂಚಲನವಾದ ಅನುಭವ. ಮೋದಿಯವರ ಕಾಲನ್ನು ಮುಟ್ಟಿ ನಮಸ್ಕರಿಸಲು ಮುಂದಾದ ನನಗೆ, ಪ್ರೀತಿಯಿಂದ ನಿರಾಕರಿಸಿ ಮೋದಿಯವರು – “ದೇವರು ಮತ್ತು ತಾಯಿಗೆ ಮಾತ್ರ ನಮಸ್ಕರಿಸು” ಎಂದು ತಬ್ಬಿಕೊಂಡರು. ಅಬ್ಬಾ! ಒಬ್ಬ ಕಾರ್ಯಕರ್ತನಿಗೆ ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕಾಗಿದೆ? ಅವರ ತಬ್ಬುಗೆ ನನ್ನಂತ ಅಸಂಖ್ಯಾತ ಕಾರ್ಯಕರ್ತರ ಪರವಾಗಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಸಿಕ್ಕ ಗೌರವ. ಈ ಅವಕಾಶ ನೀಡಿದ ನನ್ನ ಪಕ್ಷಕ್ಕೆ, ನನ್ನ ಸಂಘಟನೆಗೆ, ಅದರ ಪರಂಪರೆಗೆ ನಾನು ಚಿರಋಣಿ.

Modi birthday today ಪ್ರಚಾರಕರಾಗಿ ಜೀವನ ಆರಂಭಿಸಿದ ನರೇಂದ್ರ ಮೋದಿ ಯವರು ಸಂಘಟನೆಯು ಹೇಳಿದಂತೆ, ಸಂಘಟನೆಯ ಹಿರಿಯರು ತೆಗೆದುಕೊಳ್ಳುವ ನಿರ್ಧಾರವನ್ನು ಸರ್ವತಾ ಪಾಲಿಸುವ ಗುಣವು ಆದರ್ಶನೀಯ. ಒಬ್ಬ ಕಾರ್ಯಕರ್ತನು ಸೇವೆಯ ಅಪೇಕ್ಷೆಯನ್ನು ಮಾತ್ರ ಹೊಂದಬೇಕು ಅಧಿಕಾರದ ಅಪೇಕ್ಷೆಯನ್ನು ಹೊಂದಬಾರದೆಂಬ ವಿಚಾರವನ್ನು ತಾವು ಅಳವಡಿಸಿಕೊಂಡು ಸಂಘಟನೆಯು ಸೂಚಿಸಿದಾಗ ಸಂಘಟನಾ ಕಾರ್ಯದರ್ಶಿಯಾಗಿ, ರಥಯಾತ್ರೆಗಳ ಉಸ್ತುವಾರಿಯಾಗಿ, ನಂತರ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಪಕ್ಷದ ಸಂಘಟನೆಯು ಕೈಗೊಳ್ಳುವ ಪ್ರತಿಯೊಂದು ನಿರ್ಧಾರಗಳನ್ನು ಚಾಚು ತಪ್ಪದೆ ಪಾಲಿಸುತ್ತಾ, ಕಾರ್ಯಕರ್ತನಿಗೆ ಪಕ್ಷಕ್ಕಿಂತ ಹೆಚ್ಚಿನದು ಬೇರೇನೂ ಇಲ್ಲವೆಂದು ತಿಳಿಸಿಕೊಡುವ ಅವರ ಜೀವನವು ನಮ್ಮಂಥ ಅನೇಕ ಕಾರ್ಯಕರ್ತರಿಗೆ ಪ್ರೇರಣೆ. ಅಮೆರಿಕವು ವೀಸಾ ನಿರಾಕರಿಸಿದ ದಿನಗಳಿಂದ ಹಿಡಿದು, ಅದೇ ರಾಷ್ಟ್ರ ಕೆಂಪುಹಾಸಿನ ಸ್ವಾಗತ ನೀಡುವವರೆಗೆ ಬೆಳೆದ ಅವರ ಪಯಣ ಒಬ್ಬ ನಿಜವಾದ ಧ್ಯೇಯನಿಷ್ಟ ಕಾರ್ಯಕರ್ತನ ಅಂತಸ್ವತ್ವಕ್ಕೆ ಹಿಡಿದ ಕೈಗನ್ನಡಿ. ಅವರ ಮಾತು, ನಡೆನುಡಿ, ಸರಳತೆ, ಹಿರಿಯರಂತೆ ತಿದ್ದುವ ಪ್ರೀತಿ,ನಮ್ಮಂತಹ ಕಾರ್ಯಕರ್ತರಿಗೆ ಅವರ ಬದುಕು ಸಂಸ್ಕಾರದ ಅನುಭವಾಮೃತ.

ಪ್ರಚಂಡ ಬಹುಮತದೊಂದಿಗೆ ಪ್ರಧಾನ ಮಂತ್ರಿಯಾಗಿ, ಪ್ರಜಾಪ್ರಭುತ್ವದ ದೇಗುಲಕ್ಕೆ ಮೊದಲ ಬಾರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದ ದೃಶ್ಯ ಎಲ್ಲ ಕಾರ್ಯಕರ್ತರನ್ನು ಭಾವುಕಗೊಳಿಸಿತು. “ಅದೆಷ್ಟೋ ವರ್ಷಗಳಿಂದ ನಾವು ಸಂಸತ್ತಿಗೆ ಬಂದರು, ಸಂಸತ್ತಿನಲ್ಲಿ ಅಧಿಕಾರ ಚಲಾಯಿಸಿದರು; ಆದರೆ ಸಂಸತ್ತನ್ನು ಹೀಗೆ ಗೌರವಿಸಬೇಕೆಂದು ಅರಿವಾಗಲಿಲ್ಲ”ವೆಂದು ಹಿರಿಯರೊಬ್ಬರ ಬಳಿ ಬೇರೆ ಪಕ್ಷದ ಸದಸ್ಯರೊಬ್ಬರು ಹೇಳಿದ್ದರಂತೆ. ಸಂಸ್ಕಾರದ ಸಾಂಗತ್ಯವಿದ್ದರೆ, ವಿರೋಧಿಸುವವರು ಕೂಡ ಗೌರವ ಸೂಚಿಸುತ್ತಾರೆ ಎಂಬುದನ್ನು ಕಲಿಸಿದ್ದು ಮೋದಿಯವರ ನಾಯಕತ್ವ.

ಗೆಲುವು ನನ್ನದು ಅಲ್ಲ, ಗೆಲುವು ಸಂಘಟನೆಯದು. ನಾನು ಜನಸೇವಕ.” – ಎನ್ನುವ ಅವರ ಮಾತು ನಮ್ಮೆಲ್ಲರ ಹೃದಯದಲ್ಲಿ ಸದಾ ಪ್ರತಿದ್ವನಿಸುತ್ತಿರುತ್ತದೆ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವವೆಂಬ ಮಂತ್ರವನ್ನು ಹಗಲಿರುಳು ಅನುಷ್ಠಾನಕ್ಕೆ ತರುವ, ಭಾರತವನ್ನು ವಿಶ್ವದ ಶಕ್ತಿ ಕೇಂದ್ರವಾಗಿಸಲು ಅಭಿವೃದ್ಧಿಯಲ್ಲಿ ಅಸಂಖ್ಯಾತ ಸಾಧನೆಗಳನ್ನು ಮಾಡಿ, ಭ್ರಷ್ಟಾಚಾರದ ನೆರಳು ಕೂಡ ಹತ್ತಿರ ಸುಳಿಯದಂತೆ ದಶಕಗಳಿಂದ ಸ್ವಚ್ಛ ಆಡಳಿತವನ್ನು ನೀಡುತ್ತಿರುವ, ಎಲ್ಲರೊಳಗೂ ಒಂದಾಗಿ ಭಾರತದ ಅಭಿವೃದ್ಧಿಯ ರಥದ ಅಗ್ರೇಸರನಾಗಿರುವ ಮೋದಿಯವರು, ನಡುವಳಿಕೆ ಸಾರ್ವಜನಿಕ ಜೀವನದಲ್ಲಿರುವ ನಮ್ಮಂತವರಿಗೆ ಅಗ್ರಪಂಕ್ತಿ ಹಾಕಿಕೊಟ್ಟಿದ್ದಾರೆ.

Modi birthday today ರಾಷ್ಟ್ರಸೇವೆಯಲ್ಲಿ ಒಬ್ಬ ಕಾರ್ಯಕರ್ತನು ಹೇಗೆ ತೊಡಗಿಸಿಕೊಳ್ಳಬೇಕೆಂದು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಮೋದಿಯವರು ತಮ್ಮ ನಡೆನುಡಿಗಳಿಂದ ತೋರಿಸುತ್ತಿದ್ದಾರೆ. ಮೋದಿ ಎಂಬ ಸ್ವಾರ್ಥರಹಿತ ನಾಯಕನಿರುವ ಸಂಘಟನೆಯ ಭಾಗವಾಗಿರುವುದು ನನ್ನ ಜೀವನದ ಅತಿ ದೊಡ್ಡ ಆಸ್ತಿ.

ಎಪ್ಪತೈದು ವಸಂತಗಳನ್ನು ಪೂರೈಸಿದ ನರೇಂದ್ರ ಮೋದಿಯವರ ನಾಯಕತ್ವ ಭಾರತಕ್ಕೆ ಅತ್ಯಗತ್ಯ. ಭಾರತವನ್ನು ಜಗತ್ತಿನ ಅತಿ ದೊಡ್ಡ ಶಕ್ತಿಯಾಗಿ ನಿರ್ಮಿಸಲು, ನನ್ನಂತಹ ಕೋಟ್ಯಂತರ ಕಾರ್ಯಕರ್ತರು ಅವರೊಂದಿಗೆ ಹೆಜ್ಜೆ ಹಾಕುತ್ತೇವೆ. ಸಂಘಟನೆಯ ಏಕತಾಮಂತ್ರವನ್ನು ಮನೆಮನೆಗೂ ತಲುಪಿಸುತ್ತೇವೆ. 

ಒಬ್ಬ ಕಾರ್ಯಕರ್ತನಾಗಿ, ಕಾರ್ಯಕರ್ತರ ಹೃದಯಸಿಂಹಾಸನದಲ್ಲಿ ವಿರಾಜಮಾನರಾದ ಪ್ರಧಾನ ಸೇವಕ ಶ್ರೀ ನರೇಂದ್ರ ಮೋದಿಯವರಿಗೆ, ಅವರ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಮತ್ತೊಮ್ಮೆ ಕೋರುತ್ತೇನೆ. ಅವರು ನಡೆದ ಆದರ್ಶನೀಯ ಹಾದಿಯಲ್ಲಿ ಸಂಘಟನೆಯು ಕಲಿಸಿದ ಸಂಸ್ಕಾರವೆಂಬ ಶಕ್ತಿಯಿಂದ, ಸಮಾಜದ ಕಾರ್ಯವನ್ನು,ಸನಾತನ ಧರ್ಮದ ಒಗ್ಗಟ್ಟಿನ ಸಾರವನ್ನು ಸಾಗುತ್ತಾ ಕರ್ತವ್ಯ ಪಥದಲ್ಲಿ ನಿಷ್ಟೆಯಿಂದ ನಡೆಯುತ್ತೇನೆ. ಎಂದು ಬರೆದುಕೊಂಡಿದ್ದಾರೆ.

Modi birthday today ಎಸ್​ ಎನ್​ ಚನ್ನಬಸಪ್ಪರವರು ಪ್ರಧಾನಿ ಮೋದಿರವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭದಲ್ಲಿನ ಫೋಟೋ
Modi birthday today ಎಸ್​ ಎನ್​ ಚನ್ನಬಸಪ್ಪರವರು ಪ್ರಧಾನಿ ಮೋದಿರವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭದಲ್ಲಿನ ಫೋಟೋ

 

Leave a Comment