Shivamogga news :ಶಿವಮೊಗ್ಗ: ಸೆಪ್ಟೆಂಬರ್ 10, 2024: ಕಳೆದ ವರ್ಷ ಈದ್ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ ತಿಪ್ಲಾಪುರ ಕ್ಯಾಂಪ್‌ನಲ್ಲಿ ನಡೆದ ಶಾಂತಿ ಸಭೆಯ ವೇಳೆ, ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಓಡಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕಾಗಿ ಯುವಕನ ಮೇಲೆ ಹಲ್ಲೆ ನಡೆದಿದೆ. ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಳೆದ ವರ್ಷದ ಶಾಂತಿ ಸಭೆಯ ಸಂದರ್ಭದಲ್ಲಿ ಮೂವರು ಯುವಕರು ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಓಡಾಡಿಸುತ್ತಿದ್ದರು. ಈ ಬಗ್ಗೆ ಜಯನಗರ ಗ್ರಾಮದ ಚಂದನ್ (22) ಎಂಬ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಇದರಿಂದ ದ್ವೇಷ ಸಾಧಿಸಿದ ಈ ಮೂವರು ಯುವಕರು, ಸೆಪ್ಟೆಂಬರ್ 8 ರಂದು ಚಂದನ್ ಅವರ ಮನೆಗೆ ಬಂದು ಹೊರಗೆ ಕರೆದು ಪಂಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಗನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಹೊರಗೆ ಬಂದ ಚಂದನ್ ಅವರ ತಂದೆಗೂ ಆ ಮೂವರು ಅವಾಚ್ಯ ಶಬ್ದಗಳಿಂದ ನಿಂದಿಸಿ, “ಇನ್ನೊಮ್ಮೆ ಪೊಲೀಸರಿಗೆ ಮಾಹಿತಿ ನೀಡಿದರೆ ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಹೋಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

