Tuesday, 26 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಮರಣ ದಂಡನೆಗೆ ಗುರಿಯಾದ ಅಂತರ್ಧಮೀಯ ಪ್ರೇಮ ವಿವಾಹ ಪ್ರಕರಣ, ಸುಖ ಸಂಸಾರದ ದಾಂಪತ್ಯ ಬದುಕಿನಲ್ಲಿ ನಡೆದದ್ದೇನು? ಜೆಪಿ ಬರೆಯುತ್ತಾರೆ.

prathapa thirthahalli
Last updated: August 25, 2025 6:06 pm
Prathapa thirthahalli - content producer
Share
SHARE

Jp story : ಅವರಿಬ್ಬರದ್ದು ಅಂತರ್ಧಮೀಯ ಪ್ರೇಮ ವಿವಾಹ. ಯೌವ್ವನದ ಹೊಳೆಯಲ್ಲಿ ಪ್ರೀತಿಯಿಂದ ಈಜು ಹೊಡೆದ ಆ ಪ್ರೇಮಿಗಳಿಬ್ಬರೂ, ಮದುವೆ ಎಂಬ ದಡವನ್ನು ಸೇರುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅವರಿಬ್ಬರೂ ಬೇರೆಡೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾದಾಗ, ಅವರ ಬದುಕಿನಲ್ಲಿ ಬಿರುಗಾಳಿಯಾಗಿ ಬಂದುಬಿಟ್ಟನು ಆಕೆಯ ಬಾಲ್ಯದ ಗೆಳೆಯ. ಸುಂದರ ಸಂಸಾರದಲ್ಲಿ ಅನೈತಿಕತೆಯ ಕಮಟು ಬೀಸಿದಾಗ, ಮುಂದೆ ಹೆಂಡತಿ ಏನು ಮಾಡಿದಳು ಗೊತ್ತೇ? ಪ್ರೀತಿಸಿ ಮದುವೆಯಾದವಳೇ ಮುಂದೊಂದು ದಿನ ತನಗೆ ಮೃತ್ಯುವಾಗಿ ಎದುರಾಗುತ್ತಾಳೆಂದು ಆ ಅಮಾಯಕ ಗಂಡ ಭಾವಿಸಿರಲಿಲ್ಲ. ದುರಂತದಲ್ಲಿ ಅಂತ್ಯಕಂಡ ಈ ಪ್ರೇಮಕಥೆಯಲ್ಲಿ ಮರಣ ದಂಡನೆಗೆ ಗುರಿಯಾದವರು ಯಾರು?

ಪ್ರೀಯ ಓದುಗರೇ, ಭದ್ರಾವತಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅನೈತಿಕ ಸಂಬಂಧದಲ್ಲಿ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಕೊಲೆಗೈದ ಪತ್ನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ತೀರ್ಪಿನ ಪ್ರಕರಣದ ಹಿನ್ನೋಟ ಇಲ್ಲಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಗೆ ಅದೆಷ್ಟು ಪದಗಳಿಂದ ವರ್ಣಿಸಿದರೂ, ಅದರ ಅಘಾಧತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವುದು ನಮಗೂ ನಿಮಗೂ ಗೊತ್ತಿರುವ ವಾಸ್ತವ ಸಂಗತಿ. ಅದು ಅಳೆದಷ್ಟು ಉದ್ದ, ಬಗೆದಷ್ಟು ಆಳ. ಪ್ರೀತಿಯನ್ನು ಅಕ್ಷರ ಪದಪುಂಜಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲ. “ಪ್ರೀತಿ ಅಂದ್ರೆ ದೇವರು” ಎನ್ನುವ ಪದದಿಂದ ಹಿಡಿದು “ಪ್ರೀತಿ ಮಧುರ, ತ್ಯಾಗ ಅಮರ” ಎನ್ನುವ ಪದಗಳವರೆಗೆ ಪದಗಳ ಸಾಲುಗಳು ಮನ್ನಣೆ ಪಡೆದುಬಿಡುತ್ತವೆ. ಹಿಂದಿನ ಕಾಲದ ಪ್ರೀತಿ-ಪ್ರೇಮವನ್ನು ಇಂದಿನ ಕಾಲಕ್ಕೆ ಹೋಲಿಸಿ ನೋಡಲು ಸಾಧ್ಯವಿಲ್ಲ. ಆ ಪ್ರೀತಿಯಲ್ಲಿ ಕಾಮದಷ್ಟೇ ಮಹತ್ವ ಸಂಬಂಧ ಮತ್ತು ಭಾವನೆಗಳಿಗಿತ್ತು. ಆದರೆ ಈಗೇನಾಗಿದೆ? ಪ್ರೀತಿಸಿ ಮದುವೆಯಾಗುವ ನಮ್ಮ ಹುಡುಗರಿಗೆ ಪ್ರೀತಿ ಅಂದರೆ ಏನು ಎನ್ನುವುದೇ ಗೊತ್ತಾಗುತ್ತಿಲ್ಲ. ಬೆಳಿಗ್ಗೆ ಲವ್ ಆದರೆ, ಮಧ್ಯಾಹ್ನ ಪಾರ್ಕ್, ನಂತರ ಮದುವೆ, ಅದೇ ರಾತ್ರಿ ಫಸ್ಟ್ ನೈಟ್, ಬೆಳಿಗ್ಗೆ ಹೊತ್ತಿಗೆ ಡೈವೋರ್ಸ್ ಎನ್ನುವ ರೀತಿಯಲ್ಲಿ “ಒನ್-ಡೇ ಮ್ಯಾರೇಜ್” ರೀತಿ ಫಿಕ್ಸ್ ಆಗಿದೆ. “ಪ್ರೀತಿ ಅಂದರೆ ಹಂಗೆ, ಹಿಂಗೆ” ಅಂತ ಪುಂಖಾನುಪುಂಖವಾಗಿ ಮಾತನಾಡುವ ಪ್ರೇಮಿಗಳಲ್ಲಿ ಯಾರಾದರೂ ಒಬ್ಬರೂ ತಮ್ಮ ಕೀಳು ಬುದ್ಧಿ ತೋರಿಸಿದರೆ, ಅಂತಹ ಸಂಸಾರಗಳು ಚೆನ್ನಾಗಿ ಇರುವುದಕ್ಕೆ ಸಾಧ್ಯವಿಲ್ಲ.

ಅಂತಹ ಘಟನೆಯೊಂದು 2016 ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜನ್ನಾಪುರ ಬಡಾವಣೆಯಲ್ಲಿ ನಡೆದು ಹೋಗಿದೆ. ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ನಡುವಿನ ಪ್ರೇಮ ಅಂದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದರೂ, ಇಂದು ಮತ್ತದೇ ಅನೈತಿಕತೆ ಎಂಬ ಪ್ರೇತ ಆಕೆಯನ್ನು ಆವರಿಸಿದ್ದರಿಂದ ನಂದನವಾಗಿದ್ದ ಬಾಳೊಂದು ವಿರೂಪಗೊಂಡಿದೆ. ಐದು ವರ್ಷಗಳ ಅವರ ಸುಂದರ ಬದುಕನ್ನು ಸರ್ವನಾಶ ಮಾಡಿದೆ. ಅವರ ಪ್ರೇಮದ ಕಾಣಿಕೆಯಾಗಿರುವ ಆ ಮುಗ್ದ ಕಂದಮ್ಮ ಅನಾಥವಾಗಿದೆ. ಪ್ರೀತಿಸಿ ಮದುವೆಯಾದ ಗಂಡ ನೀರು ಪಾಲಾದರೆ, ಹೆಂಡತಿ ಜೈಲು ಪಾಲಾಗಿದ್ದಾಳೆ. ಈಗ ಮರಣ ದಂಡನೆಗೆ ಗುರಿಯಾಗಿದ್ದಾಳೆ.

Jp story ವೃತ್ತಿಯಲ್ಲಿ ಅವರಿಬ್ಬರೂ ಶಿಕ್ಷಕರು. ಹಿಂದೂ ಮತ್ತು ಮುಸ್ಲಿಂ ಆದರೂ ಪ್ರೀತಿಸಿ ವಿವಾಹವಾದರು.

2016 ರ ಮಳೆಗಾಲದ ಆ ಸಂಜೆಯಲ್ಲಿ ಎರಡನೇ ಅಂತಸ್ತಿನಲ್ಲಿರುವ ಮಹಡಿ ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದುಹೋಯಿತು. ಪ್ರೀತಿಸಿ ಮದುವೆಯಾದ ಶಿಕ್ಷಕಿಯೊಬ್ಬಳು ತನ್ನ ಗಂಡನನ್ನೇ ರಾಡಿನಿಂದ ಹಲ್ಲೆ ಮಾಡಿ ಕೊಲೆ ಮಾಡಿಬಿಟ್ಟಳು. ಅದು ಹಣಕಾಸಿನ ವಿಷಯಕ್ಕೆ ಗಂಡ-ಹೆಂಡಿರ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ನಂತರ ಅಚಾತುರ್ಯ ಆಗಿರಬೇಕು ಅಂತ ಪೊಲೀಸರು ಕೂಡ ಭಾವಿಸಿದ್ದರು. ಯಾಕೆಂದರೆ, ಕೊಲೆ ಮಾಡಿದವಳೇ ಹಾಗೆಂದು ಪೊಲೀಸರ ಹತ್ತಿರ ಕೂಡ ಹೇಳಿದ್ದಳು. “ನಾನು ಕೊಲೆ ಮಾಡಬೇಕು ಎನ್ನುವ ಉದ್ದೇಶ ಹೊಂದಿರಲಿಲ್ಲ. ಕೋಪದಿಂದ ಬಲವಾಗಿ ರಾಡನ್ನು ಬೀಸಿದಾಗ ಗಂಡ ಕೆಳಕ್ಕೆ ಬಿದ್ದ. ನಾನು ಪ್ರಜ್ಞೆ ತಪ್ಪಿರಬೇಕು ಅಂದುಕೊಂಡೆ. ಆದರೆ ಆತ ಸತ್ತೇ ಹೋಗಿದ್ದ. ಕೊಲೆ ಆರೋಪವನ್ನು ಮುಚ್ಚಿಹಾಕುವುದಕ್ಕೆ ಗಂಡನ ಶವವನ್ನು ಭದ್ರಾ ನದಿಗೆ ಎಸೆದುಬಿಟ್ಟೆ” ಅಂತಾ “ಸೆಲ್ಫ್ ಸ್ಟೇಟ್‌ಮೆಂಟ್” ಕೊಟ್ಟುಬಿಟ್ಟಳು. ಪೊಲೀಸರೂ ಕೂಡ ಹೆಂಡತಿಯೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡ ಮೇಲೆ ನಮ್ದೇನು ಅಂತಾ ಆಕೆಯನ್ನು ಅರೆಸ್ಟ್ ಮಾಡಿ ಸುಮ್ಮನಾಗಿದ್ದರು. ಆದರೆ ಅಲ್ಲಿ ಒಂದು ಅನುಮಾನ ಮಾತ್ರ ಭದ್ರಾವತಿ ನ್ಯೂಟೌನ್ ಪೊಲೀಸರನ್ನು ಕಾಡುತ್ತಿತ್ತು. ಎರಡನೇ ಫ್ಲೋರ್‌ನಲ್ಲಿರುವ ಮನೆಯಲ್ಲಿ ಕೊಲೆ ಏನೋ ಆಯಿತು, ಒಪ್ಪಿಕೊಳ್ಳೋಣ. ಆದರೆ, ಶವವನ್ನು ನಾಲ್ಕು ಕಿಲೋಮೀಟರ್ ದೂರವಿರುವ ಭದ್ರಾ ನದಿವರೆಗೆ ಒಬ್ಬಳೇ ಹೇಗೆ ಸಾಗಿಸುವುದಕ್ಕೆ ಸಾಧ್ಯವಾಯಿತು? ಇದರಲ್ಲಿ ಬೇರೆಯವರ ಪಾತ್ರ ಕೂಡ ಇರಬೇಕಲ್ಲ ಅಂತಾ… ತನಿಖೆಗೆ ಚುರುಕು ಮುಟ್ಟಿಸಿದರು. ಆಗ ಕೊಲೆ ಮಾಡಿದ ಹೆಂಡತಿ ಬಳಿ ಸಿಕ್ಕ ಮೊಬೈಲ್ ಮತ್ತೊಬ್ಬ ಪ್ರಿಯಕರನ ಸುಳಿವು ನೀಡಿಬಿಟ್ಟಿತು. “ಅರೇ! ಜಾತಿ, ಧರ್ಮದ ಎಲ್ಲೆ ಮೀರಿ ಮದುವೆಯಾದ ಸಂಸಾರದಲ್ಲೂ ಅನೈತಿಕ ಸಂಬಂಧ ಮನೆ ಮಾಡಿಬಿಡ್ತಾ?” ಅಂತ ಪೊಲೀಸರು ಕೂಡ ತಲೆಕೆಡಿಸಿಕೊಂಡುಬಿಟ್ಟರು. ಭದ್ರಾವತಿ ಜನರು ಕೂಡ ದಂಗಾಗಿಬಿಟ್ಟರು. “ನಮ್ಮ ಟೀಚರ್ ಗಂಡನನ್ನು ಕೊಲೆ ಮಾಡಿಬಿಟ್ಳು” ಅಂತ ಊರೆಲ್ಲಾ ಸುದ್ದಿಯಾಯಿತು. ಆ ಘಟನೆ ಅವರ ಫ್ಲಾಶ್‌ಬ್ಯಾಕ್ ಇತಿಹಾಸ ಹೇಳುವುದಕ್ಕೆ ಅಣಿಯಾಯಿತು.

ಇಮ್ತಿಯಾಜ್ ಎನ್ನುವ 31 ರ ಹರೆಯದ ಯುವಕ ಮತ್ತು ಲಕ್ಷ್ಮಿ ಎನ್ನುವ 30 ರ ಹರೆಯದ ಯುವತಿ ಈ ಕಥೆಯ ದುರಂತ ಕಥಾನಾಯಕರು. ಇಮ್ತಿಯಾಜ್ ಸೊರಬ ತಾಲೂಕಿನ ಆನವಟ್ಟಿ ಗ್ರಾಮದವನು. ಲಕ್ಷ್ಮಿ ಭದ್ರಾವತಿ ನಗರದವಳು. ಇವರಿಬ್ಬರೂ ಗುಲ್ಬರ್ಗದಲ್ಲಿ 2008 ರಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದಾಗ ಇಮ್ತಿಯಾಜ್ ಮತ್ತು ಲಕ್ಷ್ಮಿ ನಡುವೆ ಪ್ರೇಮಾಂಕುರವಾಯಿತು. “ಶಿಕ್ಷಕರಾಗಿರುವ ನಾವು ಸಮಾಜ ಸುಧಾರಣೆ ಮಾಡಬೇಕು, ಸಮಾಜಕ್ಕೆ ಒಳ್ಳೆಯ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಬೇಕು. ನಾವು ಜಾತಿ, ಧರ್ಮ ಅಂತಾ ಕಂದಾಚಾರಕ್ಕೆ ಬಿದ್ದರೆ ಹೇಗೆ? ಪ್ರೀತಿಗೆ ಯಾವ ಜಾತಿ, ಧರ್ಮದ ಸಂಕೋಲೆಯಿಲ್ಲ. ನಮ್ಮಿಬ್ಬರ ಪ್ರೀತಿ ಪವಿತ್ರವಾದದ್ದು, ನಿಸ್ವಾರ್ಥದಿಂದ ಕೂಡಿದ್ದು. ಪ್ರಾಮಾಣಿಕ ಮನಸ್ಸುಳ್ಳವರಾದ ನಾವು ಎಲ್ಲರನ್ನೂ, ಎಲ್ಲವನ್ನೂ ಎದುರಿಸಿಯೇ ಮದುವೆಯಾಗೋಣ” ಅಂತಾ ಆದರ್ಶ ಮೆರೆದ ಪ್ರೇಮಿಗಳು ಇವರು.

ಅವರು ಅಂದುಕೊಂಡ ಹಾಗೆ ಮೊದಲು ತಮ್ಮ-ತಮ್ಮ ಪೋಷಕರನ್ನು ಮನವೊಲಿಸಿದ್ದಾರೆ. ಆದರೆ, ಎರಡು ಕುಟುಂಬದವರ ಕಡೆಯಿಂದಲೂ ಇವರ ಪ್ರೀತಿಗೆ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಕಾರಣವಾಗಿದ್ದು ಮತ್ತದೇ ಧರ್ಮ. “ನೀನು ಮುಸ್ಲಿಂ ಆಗಿ ಕನ್ವರ್ಟ್ ಆಗ್ತೀಯಾ ಅಥವಾ ಹಿಂದೂಗೆ ಕನ್ವರ್ಟ್ ಆಗ್ತೀಯಾ” ಎನ್ನುವ ಪ್ರಶ್ನೆಯಿಂದಲೇ ಪೋಷಕರಿಂದ ಪ್ರಾರಂಭವಾದ ಪ್ರಶ್ನೆಗಳು ಲಕ್ಷ್ಮಿ ಮತ್ತು ಇಮ್ತಿಯಾಜ್ ಪ್ರೀತಿಗೆ ಅಡ್ಡವಾದವು. “ಪೋಷಕರು ನಮ್ಮ ಮದುವೆಗೆ ಒಪ್ಪದಿದ್ದರೆ ಏನಂತೆ? ನಾವೇ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗೋಣ” ಅಂತಾ ಲಕ್ಷ್ಮಿ ಮತ್ತು ಇಮ್ತಿಯಾಜ್ 2011 ರಲ್ಲಿ ಮದುವೆಯಾದರು. ಪೋಷಕರು ಇವರಿಬ್ಬರ ಮದುವೆಗೆ ವಿರೋಧ ಒಡ್ಡಿದರೂ, ಎರಡು ಕುಟುಂಬದವರು ಸಭ್ಯಸ್ಥರಾಗಿದ್ದರಿಂದಲೇ ಇದಕ್ಕೆ ಕೋಮಿನ ಬಣ್ಣ ಕಟ್ಟುವುದಕ್ಕೆ ಹೋಗಲಿಲ್ಲ.

ಇಬ್ಬರೂ ಸರ್ಕಾರಿ ನೌಕರಿ ಹೊಂದಿರುವ ಶಿಕ್ಷಕರಾಗಿದ್ದಾರೆ. ಇವರು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿಂದ ಸುಮ್ಮನಾಗಿಬಿಟ್ಟರು. ಮದುವೆಗೆ ವಿರೋಧವಿದ್ದರೂ, ಇವರ ಸುಂದರ ಸಂಸಾರವನ್ನು ಹಾಳು ಮಾಡುವ ಕೆಲಸ ಎರಡು ಕುಟುಂಬಗಳಿಂದ ಆಗಲೇ ಇಲ್ಲ. “ಇನ್ನೇನಾಗಬೇಕು ವೀಕ್ಷಕರೆ? ಅಂತರ್ಧಮೀಯ ವಿವಾಹವೊಂದು ಯಾವುದೇ ತೊಂದರೆ-ತಕರಾರು ಇಲ್ಲದೆ ಇಷ್ಟೊಂದು ಸುಗಮವಾಗಿ ನಡೆದುಹೋಗುತ್ತೆ ಎಂದರೆ ಇಮ್ತಿಯಾಜ್ ಮತ್ತು ಲಕ್ಷ್ಮಿ ದಂಪತಿ ಅದೃಷ್ಟ ಮಾಡಿದ ಪ್ರೇಮಿಗಳೇ” ಎಂದು ಎಲ್ಲರೂ ಭಾವಿಸಿದ್ದರು.

ಇವರಿಬ್ಬರ ಪ್ರೀತಿಯ ದಾಂಪತ್ಯದಲ್ಲಿ ಪ್ರೇಮದ ಕಾಣಿಕೆಯಾಗಿ ಒಂದು ಗಂಡು ಮಗು ಕೂಡ ಹುಟ್ಟಿತು. ಆಗ ಎರಡು ಕಡೆಯ ಕುಟುಂಬಸ್ಥರ ಮುನಿಸು ಇನ್ನಷ್ಟು ಕಡಿಮೆಯಾಯಿತು. ಮದುವೆಯಾದ ನಂತರ ಲಕ್ಷ್ಮಿ ಮುಸ್ಲಿಂ ಆಗಿ ಮತಾಂತರಗೊಂಡಳು. ಲಕ್ಷ್ಮಿ, ಆಯಿಷಾ ಆಗಿ ಬದಲಾದಳು. ಆಕೆಯ ಹೆಸರು ಮಾತ್ರ ಬದಲಾಯಿತೇ ಹೊರತು ಇಮ್ತಿಯಾಜ್ ಮೇಲಿನ ಪ್ರೀತಿಯೇನು ಬದಲಾಗಿರಲಿಲ್ಲ. ಎರಡು ಕುಟುಂಬಗಳ ಪೋಷಕರು ಕೂಡ ಮನೆಗೆ ಬಂದು ಹೋಗುವ ಮೂಲಕ ಸಂಬಂಧ ಮತ್ತಷ್ಟು ಗಟ್ಟಿ ಮಾಡಿಕೊಂಡರು. ಇವರಿಬ್ಬರ ಬಾಳನೌಕೆ ತಂಗಾಳಿಯಲ್ಲೇ ಸಾಗುತ್ತಿರಬೇಕಾದಾಗಲೇ ವರ್ಗಾವಣೆ ಎಂಬ ಬಿರುಗಾಳಿ ಇಮ್ತಿಯಾಜ್ ಮತ್ತು ಲಕ್ಷ್ಮಿ ದಂಪತಿಯ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ಅದು ದಡವನ್ನು ಸೇರಿಸಲೇ ಇಲ್ಲ.

Jp story ಗುಲ್ಬರ್ಗದಿಂದ ಶಿವಮೊಗ್ಗ ಜಿಲ್ಲೆಗೆ ವರ್ಗವಾಯಿತು ದಂಪತಿಗೆ. ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಬೇಕಾಯಿತು.

Jp story ಇಮ್ತಿಯಾಜ್ ಮತ್ತು ಲಕ್ಷ್ಮಿ ಬಾಳು ಸುಂದರವಾಗಿರಬೇಕಾದ ಸಂದರ್ಭದಲ್ಲಿಯೇ, ಅವರು ಅಂದುಕೊಂಡಂತೆ, ಪತಿ-ಪತ್ನಿಯರಿಗೆ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಯಿತು. ಆದರೆ ವಿಧಿಯ ಮೊದಲ ಕೈಚಳಕ ಇಲ್ಲಿಂದಲೇ ಶುರುವಾಯಿತು ನೋಡಿ. 2012 ರಲ್ಲಿ ಲಕ್ಷ್ಮಿಗೆ ಸ್ವಂತ ಊರಾದ ಭದ್ರಾವತಿ ನಗರದ ಅಂತರಗಂಗೆ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಯಿತು. ಗುಲ್ಬರ್ಗದಿಂದ ಗಂಡನನ್ನು ಬಿಟ್ಟು ಭದ್ರಾವತಿಗೆ ಬಂದ ಲಕ್ಷ್ಮಿ, ಸ್ವಂತ ಊರಿನಲ್ಲಿ ಶಿಕ್ಷಕಿ ಕೆಲಸ ಅಂತ ತುಂಬಾ ಲವಲವಿಕೆಯಿಂದ ಇದ್ದಳು. ಗಂಡನನ್ನೂ ಸಹ ಶಿವಮೊಗ್ಗ ಜಿಲ್ಲೆಗೆ ವರ್ಗ ಮಾಡಿಸಿಕೊಳ್ಳುವಂತೆ ದುಂಬಾಲು ಬಿದ್ದಳು ಲಕ್ಷ್ಮಿ.

ಪತಿ-ಪತ್ನಿ ಪ್ರಕರಣದಲ್ಲಿ ಇಮ್ತಿಯಾಜ್ ಕೂಡ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಯಿತು. ಆದರೆ ಆತನಿಗೆ ಸೊರಬ ತಾಲೂಕಿನ ಸ್ವಂತ ಊರಾದ ಆನವಟ್ಟಿಯ ತಲಗುಂದ ಗ್ರಾಮದ ಸರ್ಕಾರಿ ಶಾಲೆಗೆ ವರ್ಗವಾಯಿತು. ಗಂಡ-ಹೆಂಡತಿ ದೂರದೂರಿನಿಂದ ಶಿವಮೊಗ್ಗಕ್ಕೆ ಬಂದರೂ, ಒಂದಾಗಿ ಸಂಸಾರ ಮಾಡುವ ಭಾಗ್ಯ ಸಿಗಲಿಲ್ಲ. ಎಲ್ಲಿಯ ಆನವಟ್ಟಿ, ಎಲ್ಲಿಯ ಭದ್ರಾವತಿ? ಸರಿಸುಮಾರು 100 ಕಿಲೋಮೀಟರ್‌ಗೂ ಅಧಿಕ ಅಂತರವಿದ್ದ ಕಾರಣಕ್ಕೆ ಇಮ್ತಿಯಾಜ್ ಮತ್ತು ಲಕ್ಷ್ಮಿ ದಂಪತಿ ಬೇರೆ ಬೇರೆ ಮನೆ ಮಾಡಬೇಕಾಯಿತು.

ಇಮ್ತಿಯಾಜ್ ತನ್ನ ಊರಾದ ಆನವಟ್ಟಿಯಿಂದಲೇ ತಲಗುಂದ ಶಾಲೆಗೆ ಓಡಾಡುತ್ತಿದ್ದ. ಇತ್ತ ಲಕ್ಷ್ಮಿ ಭದ್ರಾವತಿ ಟೌನ್‌ನ ಜನ್ನಾಪುರದಲ್ಲಿ ಮನೆ ಮಾಡಿಕೊಂಡು ಅಂತರಗಂಗೆ ಶಾಲೆಗೆ ಹೋಗುತ್ತಿದ್ದಳು. ಪ್ರೀತಿಸಿ ಮದುವೆಯಾದ ಇಬ್ಬರು ಅನಿವಾರ್ಯವಾಗಿ ಬೇರೆ ಬೇರೆ ಊರಿನಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿಯನ್ನು ಒಪ್ಪಿಕೊಂಡು ಮುಂದೆ ಸಾಗಿದರು. ದಸರಾ ರಜೆ, ಬೇಸಿಗೆ ರಜೆ, ವಾರದ ರಜೆಯಲ್ಲಿ ಮಾತ್ರ ದಂಪತಿ ಪರಸ್ಪರ ಭೇಟಿಯಾಗುತ್ತಿದ್ದರು. ಮುದ್ದಿನ ಮಗಳು ತಾಯಿಯ ಜೊತೆಗೆ ಭದ್ರಾವತಿಯಲ್ಲಿ ಇದ್ದಳು. ಗಂಡ ಆನವಟ್ಟಿ, ಹೆಂಡತಿ ಭದ್ರಾವತಿಯಲ್ಲಿದ್ದು ಬದುಕನ್ನು ಸಾಗಿಸುವ ಹೊತ್ತಲ್ಲಿ, ಭದ್ರಾವತಿಯಲ್ಲಿದ್ದ ಲಕ್ಷ್ಮಿ ಬದುಕಿನಲ್ಲಿ ಮತ್ತೊಬ್ಬ ಬಾಲ್ಯದ ಗೆಳೆಯನ ಎಂಟ್ರಿಯಾಯಿತು. ಇದು ಬರೀ ಬಾಲ್ಯದ ಗೆಳೆತನಕ್ಕೆ ಸೀಮಿತವಾಗಿದ್ದರೆ ಪರವಾಗಿರಲಿಲ್ಲ. ಆದರೆ, ಇವರ ಸ್ನೇಹ ಪ್ರೀತಿಗೆ, ನಂತರ ಕಾಮಕ್ಕೆ ತಿರುಗಿದೆ. ಅದು ಮುಂದೆ ಅನೈತಿಕ ಸಂಸಾರಕ್ಕೂ ಕೂಡ ಎಡೆಮಾಡಿಕೊಟ್ಟಿತು.

Jp story ಬಾಲ್ಯದ ಗೆಳೆಯನ ಎಂಟ್ರಿ.

ಹೌದು, ಇಮ್ತಿಯಾಜ್-ಲಕ್ಷ್ಮಿ ಬದುಕು ಸುಖವಾಗಿ ಸಾಗುತ್ತಿದ್ದಾಗ, ಲಕ್ಷ್ಮಿಗೆ ಭದ್ರಾವತಿಯಲ್ಲಿ ತನ್ನ ಬಾಲ್ಯದ ಗೆಳೆಯ ಕೃಷ್ಣಮೂರ್ತಿ ಯಾವಾಗ ಎಂಟ್ರಿಯಾದನೋ, ಲಕ್ಷ್ಮಿಗೆ ಆಗ ಸ್ನೇಹ ಬೆಳೆಸುವ ಆಸೆಯಾಗಿದೆ. ಗಂಡ ಇಲ್ಲದ ಸಂದರ್ಭದಲ್ಲಿ ಸ್ನೇಹಿತನ ಜೊತೆ ಮಾತನಾಡೋದಕ್ಕೆ ಶುರುಮಾಡಿದಳು. ಕೃಷ್ಣಮೂರ್ತಿ ತನ್ನ ಬಾಲ್ಯದ ಗೆಳತಿ ಮದುವೆಯಾಗಿ ಸುಖವಾಗಿದ್ದಾಳೆಂದು ಸುಮ್ಮನಿರಲಿಲ್ಲ. ಅವಳನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದ. ಕೃಷ್ಣಮೂರ್ತಿ 108 ಅಂಬುಲೆನ್ಸ್ ಚಾಲಕನಾಗಿದ್ದ. ಬಿಡುವಿದ್ದಾಗ ಬಾಡಿಗೆ ವಾಹನ ಚಲಾಯಿಸುತ್ತಿದ್ದ. ಲಕ್ಷ್ಮಿ ಜನ್ನಾಪುರದಲ್ಲಿರುವ ಮನೆ ಪಕ್ಕದಲ್ಲೇ ಕೃಷ್ಣಮೂರ್ತಿ ಕೂಡ ಮನೆ ಮಾಡಿಬಿಟ್ಟ. ಆಕೆಯನ್ನು ಶಾಲೆಗೆ ಡ್ರಾಪ್ ಮಾಡುವ ಮತ್ತು ಮನೆಯಲ್ಲಿರುವ ಹೊತ್ತಿಗೆ ಮನೆಗೆ ಬಂದು ಹೋಗುತ್ತಿದ್ದ. ಇವರಿಬ್ಬರ ಸ್ನೇಹವನ್ನು ಅಕ್ಕಪಕ್ಕದವರು ಕೂಡ ಅಪಾರ್ಥ ಮಾಡಿಕೊಳ್ಳಲಿಲ್ಲ. ಆನಟ್ಟಿಯಿಂದ ಬಂದುಹೋಗುತ್ತಿದ್ದ ಗಂಡನಿಗೂ ಕೂಡ ಲಕ್ಷ್ಮಿಯ ಹೊಸ ಅನೈತಿಕ ಸಂಸಾರದ ಬಗ್ಗೆ ಗೊತ್ತಾಗಲಿಲ್ಲ. ಗಂಡನ ಜೊತೆ ಅದೇ ಪ್ರೀತಿ, ಪ್ರೇಮವನ್ನು ತೋರಿದ ಲಕ್ಷ್ಮಿ ಬಾಲ್ಯದ ಗೆಳೆಯ ಕೃಷ್ಣಮೂರ್ತಿಗೂ ಹಳೆಯ ಪ್ರೀತಿಗೆ ಹೊಸ ಲೇಪನ ಕೊಡೋದಕ್ಕೆ ಶುರುಮಾಡಿಕೊಂಡಳು.

ಇತ್ತ, ಯಾವಾಗಲೋ ಸಿಗುವ ಗಂಡ, ಒಂಟಿ ಜೀವನ ನಡೆಸುತ್ತಿದ್ದ ಲಕ್ಷ್ಮಿ, ಅದ್ಯಾವಾಗ ಕೃಷ್ಣಮೂರ್ತಿಗೆ ಒಲಿದಳೋ ಯಾರಿಗೂ ಗೊತ್ತಾಗಲೇ ಇಲ್ಲ. ಇತ್ತ ಪತಿ ಇಮ್ತಿಯಾಜ್‌ಗೆ ಪತ್ನಿಯ ಮೇಲೆ ಅಪಾರ ನಂಬಿಕೆ. ಒಂದು ದಿನವೂ ಆಕೆಯನ್ನು ಶಂಕಿಸಲಿಲ್ಲ. ಎಂದಿನಂತೆ ಭದ್ರಾವತಿಯ ಜನ್ನಾಪುರದಲ್ಲಿರುವ ಮನೆಗೆ ಹೋಗಿ ಪತ್ನಿ ಮತ್ತು ಮಗುವನ್ನು ನೋಡಿ, ಮಾತನಾಡಿಸಿ ಖುಷಿಪಟ್ಟು ಬರುತ್ತಿದ್ದ. ಪತಿಗೆ ಅನುಮಾನ ಬಾರದ ಕಾರಣ ಇತ್ತ ಲಕ್ಷ್ಮಿಯ ನೈತಿಕ ಹಾಗು ಅನೈತಿಕ ಸಂಸಾರಗಳೆರಡೂ ಒಟ್ಟೊಟ್ಟಿಗೆ ಸಾಗೋದಕ್ಕೆ ಶುರುವಾಯಿತು. ಆದರೆ, ಅತ್ತಿಗೆಯನ್ನು ನೋಡೋದಕ್ಕೆ ಆಗಾಗ ಆನವಟ್ಟಿಯಿಂದ ಭದ್ರಾವತಿಗೆ ಬರುತ್ತಿದ್ದ ಇಮ್ತಿಯಾಜ್ ತಮ್ಮ ಇಜಾಝ್‌ಗೆ ಅತ್ತಿಗೆ ಮೇಲೆ ಒಂದು ಅನುಮಾನವಿತ್ತು. ಆತ ಹೋದಾಗಲೆಲ್ಲಾ ಒಬ್ಬ ಗಂಡಸು ಮನೆಯಲ್ಲಿರುತ್ತಿದ್ದ. ಆದರೆ, ಇಜಾಝ್ ತನ್ನ ಅಣ್ಣನಿಗೆ ವಿಷಯ ಮುಟ್ಟಿಸುವ ಗೋಜಿಗೆ ಹೋಗಲಿಲ್ಲ. ಇಂದಲ್ಲ ನಾಳೆ ಸಂಸಾರ ಸರಿಯಾಗಬಹುದು ಅಂತಾ ಅತ್ತಿಗೆಗೆ ಬುದ್ಧಿ ಹೇಳಿದ್ದ. ಆದರೆ, ಅತ್ತಿಗೆ ಮಾತ್ರ ಮೈದುನನ ಬುದ್ಧಿ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.

Jp story  ಮನೆಗೆ ಬಂದ ಗಂಡನಿಗೆ ಲೋನ್ ಮಾಡಿಸಿಕೊಡು ಎಂದಳು ಪತ್ನಿ.ನಾನೇ ಕಮಿಟ್‍ಮೆಂಟ್‌ನಲ್ಲಿದ್ದೇನೆ, ಸಾಧ್ಯವಿಲ್ಲ ಎಂದ ಗಂಡ.

ಆದರೆ, 2016 ಜುಲೈ ಮೊದಲ ವಾರ ಇಂತಹದೊಂದು ದುರ್ಘಟನೆ ಘಟಿಸಬಹುದೆಂದು ಪತಿ-ಪತ್ನಿಯಾಗಲಿ, ಲಕ್ಷ್ಮಿಯ ಪ್ರಿಯಕರನಾಗಲಿ ಯಾರೂ ನಿರೀಕ್ಷಿಸಿರಲಿಲ್ಲವೇನೋ. ಜುಲೈ 2 ನೇ ತಾರೀಖಿನಂದೇ ಇಮ್ತಿಯಾಜ್ ಶಾಲೆಗೆ ಸುದೀರ್ಘ ರಜೆ ಹಾಕಿ ಪತ್ನಿ ಮತ್ತು ಮಗುವಿನೊಂದಿಗೆ ಇರಬೇಕೆಂದು ಭದ್ರಾವತಿಯ ಜನ್ನಾಪುರಕ್ಕೆ ಬಂದ. ನಾಲ್ಕೈದು ದಿನ ಹೆಂಡತಿ-ಮಕ್ಕಳೊಂದಿಗೆ ಸುಖವಾಗಿಯೇ ಇದ್ದ. ಆದರೆ ಅವನಿಗೆ ಯಾವ ಹಣಕಾಸಿನ ತೊಂದರೆ ಇತ್ತೋ ಏನೋ, ಜುಲೈ ಏಳನೇ ತಾರೀಖು ಸಂಜೆ 7:30 ರ ಹೊತ್ತಿನಲ್ಲಿ, ಲಕ್ಷ್ಮಿ ತನಗೆ ಹಣ ಬೇಕು, ನೀನು ಸ್ಯಾಲರಿ ಲೋನ್ ಮಾಡಿಸಿಕೊಡು ಎಂದು ದುಂಬಾಲು ಬಿದ್ದಿದ್ದಾಳೆ. ಅದಕ್ಕೆ ಇಮ್ತಿಯಾಜ್ ಒಪ್ಪಿಲ್ಲ. ತನ್ನ ಕಮಿಟ್‌ಮೆಂಟ್‍ಗಳನ್ನು ಅವಳಿಗೆ ವಿವರಿಸಿದ್ದಾನೆ.

ಆದರೆ, ಪಟ್ಟು ಬಿಡದ ಲಕ್ಷ್ಮಿ ಹಣ ಬೇಕೇ ಬೇಕೆಂದು ಒತ್ತಡ ಹೇರಿದ್ದಾಳೆ. ವಿವಿಧ ರೀತಿಯಲ್ಲಿ ಒಪ್ಪಿಸಲು ಪ್ರಯತ್ನಿಸಿದ್ದಾಳೆ. ತನ್ನ ಮಾತಿಗೆ ಗಂಡ ಇಮ್ತಿಯಾಜ್ ಮಣಿಯುವುದಿಲ್ಲ ಎನ್ನುವುದು ಆಕೆಗೆ ಖಾತರಿಯಾಗಿದೆ. ಆಗ ಅವಳು ಅಂತಿಮವಾಗಿ ತನ್ನ ಪ್ರಿಯಕರ ಕೃಷ್ಣಮೂರ್ತಿಯ ಸಹಕಾರ ಪಡೆಯಬೇಕೆಂದು ನಿರ್ಧರಿಸಿದ್ದಾಳೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಪ್ರಿಯಕರ ಕೃಷ್ಣಮೂರ್ತಿಗೆ ಲಕ್ಷ್ಮಿಯ ಕರೆ ಬರುತ್ತಿದ್ದಂತೆ, ಜನ್ನಾಪುರದ ನನ್ನ ಹೆಂಡತಿ ಮನೆಗೆ ಬಂದವನು ಯಾರು” ಎಂದು ಇಮ್ತಿಯಾಜ್‍ಗೆ ಗೊತ್ತಾಗಲಿಲ್ಲ. ಯಾರೋ ನಮ್ಮ ಹಿತೈಷಿ ಇರಬೇಕೆಂದು ಆತ ಮಾಮೂಲಿನಂತೆ ಮಾತನಾಡಿದ್ದಾನೆ. ಸಾಲ ಪಡೆದು ಹಣ ನೀಡಲಾಗದ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಆದರೆ ಲಕ್ಷ್ಮಿ ಅದ್ಯಾವುದನ್ನೂ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ.ಆದರೆ, ಅಂತಿಮವಾಗಿ ಕಬ್ಬಿಣದ ಸರಳಿನಿಂದ ಲಕ್ಷ್ಮಿ ಇಮ್ತಿಯಾಜ್ ಮೇಲೆ ಹಲ್ಲೆ ಮಾಡಿದ್ದಾಳೆ. ತಾನು ಪ್ರಪಂಚದ ವಿರೋಧ ಎದುರಿಸಿ, ಮದುವೆಯಾಗಿದ್ದ ಪತ್ನಿಯೇ ತನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಶಾಕ್ ಒಂದೆಡೆಯಾದರೆ, ಪರಿಚಿತನಲ್ಲದ ಮತ್ತೊಬ್ಬ ವ್ಯಕ್ತಿ…

Jp story ಶವಕ್ಕೆ ಮೂಟೆ ಕಟ್ಟಿದರು, ಭದ್ರಾ ನದಿಗೆ ಎಸೆದರು.

ಲಕ್ಷ್ಮಿ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡ ಇಮ್ತಿಯಾಜ್‍ನನ್ನು ಕೊಲೆ ಮಾಡಿದ ನಂತರ, ಇಬ್ಬರೂ ಶವವನ್ನು ಚಾಪೆಯಿಂದ ಸುತ್ತಿದ್ದಾರೆ. ಕೈ-ಕಾಲು, ಮುಖವನ್ನು ಬೆಡ್ ಶೀಟ್‍ನಿಂದ ಮುಚ್ಚಿ, ಕೊರಿಯರ್ ಪಾರ್ಸೆಲ್ ತರಹ ಶವವನ್ನು ಪ್ಯಾಕ್ ಮಾಡಿದ್ದಾರೆ. ಆದರೆ, ಮನೆ ಎರಡನೇ ಮಹಡಿಯಲ್ಲಿದ್ದ ಕಾರಣಕ್ಕೆ ಸಂಜೆಯೇ ಬಾಡಿ ಸಾಗಿಸುವುದಕ್ಕೆ ಸಾಧ್ಯವಾಗಲಿಲ್ಲ. “ಏನೋ ಮಾಡಲಿ ಹೋಗಿ ಮತ್ತಿನ್ಯೇನೋ ಆಯ್ತು” ಎನ್ನುವ ಪಾಪಪ್ರಜ್ಞೆ ಲಕ್ಷ್ಮಿಯನ್ನು ಕಾಡತೊಡಗಿದೆ. ಕೃಷ್ಣಮೂರ್ತಿ ಸಮಾಧಾನ ಮಾಡಿದ. ಶವವನ್ನು ಮಹಡಿಯಿಂದ ಕೆಳಗಿಳಿಸುವುದು ಹೇಗೆ, ಅದನ್ನು ಸಾಗಿಸುವುದು ಎಲ್ಲಿಗೆ ಅಂತಾ ಲಕ್ಷ್ಮಿ ಪೇಚಿಗೆ ಸಿಲುಕಿದ್ದಾಳೆ. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ “ನಾನು ವಾಹನ ಅರೇಂಜ್ ಮಾಡ್ತೀನಿ. ನೀನು ತಲೆಕೆಡಿಸಿಕೊಳ್ಳಬೇಡ. ನನ್ನ ಅಣ್ಣನನ್ನು ಸಹಾಯಕ್ಕೆ ಕರಿಸ್ತೀನಿ” ಅಂತಾ, ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿರುವ ಶಿವರಾಜ್‍ನನ್ನು ಕರೆಸಿಕೊಂಡಿದ್ದಾನೆ. ರಾತ್ರಿ ಮನೆ ಕೆಳಗಿನವರೆಲ್ಲಾ ಮಲಗಿದ ನಂತರ, ಮಧ್ಯರಾತ್ರಿ ಶವವನ್ನು ಸಾಗಿಸಲು ಅಣಿಯಾಗಿದ್ದಾರೆ. ಅಂದುಕೊಂಡಂತೆ ಕೃಷ್ಣಮೂರ್ತಿ ತಂದಿದ್ದ ಇನ್ನೋವಾ ಕಾರಿನಲ್ಲಿ ಶವವನ್ನು ಇಟ್ಟು, ಭದ್ರಾವತಿಯ ಬೈಪಾಸ್ ರಸ್ತೆಯ ಬಳಿ ಬಂದಿದ್ದಾರೆ. ಅಲ್ಲಿ ಸೇತುವೆ ಮೇಲಿಂದ ಇಮ್ತಿಯಾಜ್ ಶವವನ್ನು ಭದ್ರಾ ನದಿಗೆ ಎಸೆದಿದ್ದಾರೆ.

Jp story  ಮೈದುನನಿಗೆ ಫೋನ್ ಮಾಡಿ ಕೊಲೆ ವಿಷಯ ತಿಳಿಸಿದಳು.ಪ್ರಿಯಕರನ ಗುಟ್ಟು ಮುಚ್ಚಿಟ್ಟಳು.

ಇದು ವಿಪರ್ಯಾಸವೋ ಏನೋ ಗೊತ್ತಿಲ್ಲ, ಇಮ್ತಿಯಾಜ್‍ಗೆ ತನ್ನ ಹೆಂಡತಿ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಕೊನೆಯವರೆಗೂ ಗೊತ್ತಾಗಲಿಲ್ಲ. ಹಣಕಾಸಿನ ವಿಚಾರಕ್ಕೆ ಗಂಡ-ಹೆಂಡಿರ ನಡುವೆ ಗಲಾಟೆ ನಡೆದಿದ್ದು, ಇದೇ ಕಾರಣಕ್ಕೆ ಪತ್ನಿ ನನ್ನ ಮೇಲೆ ಹಲ್ಲೆ ಮಾಡಿದಳು ಎಂದು ಆತ ಕೊನೆಯುಸಿರು ಬಿಡುವಾಗಲೂ ಭಾವಿಸಿದ್ದ. ಆದರೆ, ಗಂಡನನ್ನು ಕೊಲೆ ಮಾಡಿ, ನದಿಗೆ ಎಸೆದು ಎಲ್ಲ ತಣ್ಣಗಾದ ನಂತರ, ಲಕ್ಷ್ಮಿ ತನ್ನ ಮೈದುನ ಇಜಾಜ್‍ಗೆ ಫೋನ್ ಮಾಡಿ ಭದ್ರಾವತಿಗೆ ಕರೆಸಿಕೊಂಡು, ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾಳೆ. “ಗಂಡನಿಗೆ ಸ್ಯಾಲರಿ ಲೋನ್ ಮಾಡಿಸಿಕೊಡು ಅಂದೆ. ಅವರು ಒಪ್ಪಿಕೊಳ್ಳಲಿಲ್ಲ. ಪೀಡಿಸಿದ್ದಕ್ಕೆ ನನ್ನ ಮೇಲೆ ರಾಡಿನಿಂದ ಹಲ್ಲೆಗೆ ಮುಂದಾದರು. ಅದೇ ರಾಡಿನಿಂದ ನಾನು ಅವರ ತಲೆಗೆ ಹೊಡೆದೆ. ಗಂಡನನ್ನು ಕೊಲೆ ಮಾಡುವ ಉದ್ದೇಶ ನನ್ನದಾಗಿರಲಿಲ್ಲ” ಅಂತಾ “ರೀಲ್” ಬಿಟ್ಟಳು. ಆದರೆ “ಅತ್ತಿಗೆ, ಬಾಡಿ ಹೇಗೆ ಸಾಗಿಸಿದ್ರಿ?” ಅಂತಾ ಇಜಾಝ್ ಕೇಳಿದಾಗ, “ಸಹಾಯಕ್ಕೆ ಕೃಷ್ಣಮೂರ್ತಿ ಬಂದಿದ್ದ” ಅಂತಾ ಹೇಳಿದ್ದಾಳೆ. ಮೊದಲೇ ಕೃಷ್ಣಮೂರ್ತಿಯೊಂದಿಗಿನ “ಲವ್ವಿಡವ್ವಿ” ವಿಷಯ ಗೊತ್ತಿದ್ದ ಇಜಾಝ್, ಅತ್ತಿಗೆಯ ಕೃತ್ಯದಿಂದ ರೊಚ್ಚಿಗೆದ್ದಿದ್ದಾನೆ. “ನಾನು ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಡ್ತೀನಿ” ಅಂತಾ ಮನೆಯಿಂದ ಹೊರನಡೆದಿದ್ದಾನೆ ಅಷ್ಟೇ.

ಅತ್ತ ಮೈದುನ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುವುದು ಖಾತರಿಯಾಗುತ್ತಿದ್ದಂತೆ, ಇತ್ತ ಲಕ್ಷ್ಮಿ ತನ್ನ ಪ್ರಿಯಕರ ಕೃಷ್ಣಮೂರ್ತಿಗೆ ಫೋನ್ ಮಾಡಿದ್ದಾಳೆ. “ಇನ್ನು ನಮಗೆ ಉಳಿಗಾಲವಿಲ್ಲ, ಎಲ್ಲಾದರೂ ಓಡಿಹೋಗೋಣ” ಎಂದೂ ದುಂಬಾಲು ಬಿದ್ದಿದ್ದಾಳೆ. ತಕ್ಷಣ ಕೃಷ್ಣಮೂರ್ತಿ ಲಕ್ಷ್ಮಿಗೆ ಮಗುವನ್ನು ಕರೆದುಕೊಂಡು ಭದ್ರಾವತಿ ಬಸ್ ನಿಲ್ದಾಣಕ್ಕೆ ಬರುವಂತೆ ಹೇಳಿದ್ದಾನೆ. ಲಕ್ಷ್ಮಿ ಕೃಷ್ಣಮೂರ್ತಿಯೊಂದಿಗೆ ಪ್ರಯಾಣ ಬೆಳೆಸಲು ಅಣಿಯಾದಳು.

ಇತ್ತ ಇಜಾಝ್, ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ “ಅತ್ತಿಗೆ ನನ್ನ ಅಣ್ಣನನ್ನು ಕೊಲೆ ಮಾಡಿರುವುದಾಗಿ” ದೂರು ನೀಡುತ್ತಾನೆ. ದೂರು ದಾಖಲಿಸಿಕೊಂಡ ಭದ್ರಾವತಿ ನ್ಯೂಟೌನ್ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಸುಭಾಷ್ ಕಾರ್ಯಾಚರಣೆಗೆ ಅಣಿಯಾಗುತ್ತಾರೆ. ಲಕ್ಷ್ಮಿಯನ್ನು ಅರೆಸ್ಟ್ ಮಾಡುತ್ತಾರೆ. ಆದರೆ ಪ್ರಕರಣದಲ್ಲಿ ಕೃಷ್ಣಮೂರ್ತಿ ಹೆಸರು ಎಲ್ಲೂ ತಳಕು ಹಾಕಿಕೊಂಡಿರುವುದಿಲ್ಲ. ಯಾಕೆಂದರೆ, ಲಕ್ಷ್ಮಿ ಎಲ್ಲೂ ತನ್ನ ಪ್ರಿಯಕರನ ಗುಟ್ಟು ಬಿಟ್ಟುಕೊಟ್ಟಿರುವುದಿಲ್ಲ. “ನಾನೊಬ್ಬಳೇ ಗಂಡನನ್ನು ಕೊಲೆ ಮಾಡಿದೆ” ಅಂತಾ ಹೇಳುತ್ತಾಳೆ. ಆದರೆ, “ಒಬ್ಬಳೇ ಶವ ಸಾಗಿಸುವುದಕ್ಕೆ ಹೇಗೆ ಸಾಧ್ಯ?” ಎನ್ನುವ ಅನುಮಾನದ ಎಳೆಯಲ್ಲೇ ತನಿಖೆ ಚುರುಕುಗೊಳಿಸಿದ ಇನ್‌ಸ್ಪೆಕ್ಟರ್ ಚಂದ್ರಶೇಖರ್, ಲಕ್ಷ್ಮಿಯ ಮೊಬೈಲ್ ಕಾಲ್ ಡಿಟೇಲ್ ಅವಲೋಕಿಸಿದಾಗ ಲಕ್ಷ್ಮಿಗೆ ಕೃಷ್ಣಮೂರ್ತಿಯೊಂದಿಗೆ ಸಂಬಂಧ ಇರುವುದು ಖಾತರಿಯಾಗಿದೆ. ಕೃಷ್ಣಮೂರ್ತಿಯನ್ನು ಕರೆತಂದಾಗ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Jp story  ಕೊಲೆ ಆರೋಪಿಗಳಿಗೆ ಮರಣ ದಂಡನೆ.

Jp story ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಶಿಕ್ಷಕ ಇಮ್ತಿಯಾಜ್‌ನ ಪತ್ನಿ ಲಕ್ಷ್ಮಿ, ಆಕೆಯ ಪ್ರಿಯಕರ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ, ಶಿವರಾಜ್ ಅಲಿಯಾಸ್ ಶಿವು ಎನ್ನುವವರನ್ನು ಬಂಧಿಸಿದ್ದರು. ಆರೋಪಿಗಳನ್ನು ಹಿಡಿದು ಹೆಡೆ ಮುರಿ ಕಟ್ಟಿದ ಭದ್ರಾವತಿ ನ್ಯೂಟೌನ್ ಪೊಲೀಸರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ 302, 201, 34 ಅಡಿಯಲ್ಲಿ ದಾಖಲಾಗಿದ್ದ ಕೇಸ್‌ನಲ್ಲಿ, ಆಜಾದ್ ಅಹಮದ್ ಎನ್ನುವವರು ದೂರು ನೀಡಿದ್ದರು. ಅವರ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿ ಸಿಪಿಐ ಚಂದ್ರಶೇಖರ್ ಟಿಕೆ ನಡೆಸಿದ್ದರು, ಪ್ರಕರಣದ ಪೂರ್ಣ ತನಿಖೆ ಮುಗಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರತ್ನಮ್ಮ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಭದ್ರಾವತಿಯಲ್ಲಿ ನಡೆದಿದ್ದು ಇದೀಗ ತೀರ್ಪು ಹೊರಬಿದ್ದಿದೆ. ನ್ಯಾಯಾಧೀಶರಾದ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್ ಅವರು ಪ್ರಕರಣದಲ್ಲಿ 120ಬಿ ಸೆಕ್ಷನ್ ಅಡಿಯಲ್ಲಿ ಒಂದು ಮತ್ತು ಎರಡನೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. 302 ಸೆಕ್ಷನ್ ಅಡಿಯಲ್ಲಿ ಒಂದನೇ ಆರೋಪಿ ಶಿಕ್ಷಕಿ ಲಕ್ಷ್ಮೀ ಹಾಗೂ ಎರಡನೇ ಆರೋಪಿ ಕೃಷ್ಣಮೂರ್ತಿಗೆ ಮರಣದಂಡನೆ ವಿಧಿಸಿದ್ದಾರೆ. 201 ಐಪಿಸಿ ಸೆಕ್ಷನ್ ಅಡಿಯಲ್ಲಿ ಮೂವರು ಆರೋಪಿಗಳಿಗೆ ಏಳು ವರ್ಷ ಶಿಕ್ಷೆ ವಿಧಿಸಿದ್ದಾರೆ.

Jp story
Jp story

ಯಾವ ಪ್ರಾಮಾಣಿಕ ಮನಸ್ಸಿನಿಂದ ಲಕ್ಷ್ಮಿ ಮತ್ತು ಇಮ್ತಿಯಾಜ್ ಮದುವೆಯಾದರೋ, ಅದೇ ಪ್ರಾಮಾಣಿಕತೆ ಲಕ್ಷ್ಮಿಯ ಬದುಕಿನಲ್ಲಿ ಬಹಳಷ್ಟು ದಿನ ಇರಲಿಲ್ಲ ಎನ್ನುವುದೇ ಈ ಕಥೆಯ ದುರಂತ. ಇಮ್ತಿಯಾಜ್ ಸತ್ತಿದ್ದಕ್ಕೆ ಘಟನೆ ಗಂಭೀರವಾಗಿಲ್ಲ. ಆದರೆ ಲಕ್ಷ್ಮಿ ಸತ್ತಿದ್ದರೆ ಅದಕ್ಕೆ “ಲವ್ ಜಿಹಾದ್” ಅಂತಿದ್ರೂ ಸರ್. ನಾವು ಘಟನೆಗೆ ಬೇರೆ ಬಣ್ಣ ಕೊಡಬಾರದು ಅಂತಾ ಸುಮ್ಮನಿದ್ದೀವಿ ಅಂತಾ ಕೊಲೆಯಾದ ಇಮ್ತಿಯಾಜ್‌ನ ಸಂಬಂಧಿಗಳು ಹೇಳುವಾಗ, ಅವರು ಇವರಿಬ್ಬರ ಪ್ರೀತಿಯನ್ನು ಅದೆಷ್ಟು ಒಳ್ಳೆಯ ಮನಸ್ಸಿನಿಂದ ಒಪ್ಪಿಕೊಂಡಿದ್ದರು ಎನ್ನುವುದು ಅರ್ಥವಾಗುತ್ತದೆ.

Jp story ಶಿಕ್ಷೆಗೆ ಒಳಗಾದ ಆರೋಪಿಗಳು
Jp story ಶಿಕ್ಷೆಗೆ ಒಳಗಾದ ಆರೋಪಿಗಳು

 

Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Elephant news ಖೆಡ್ಡಾದಲ್ಲಿದ್ದ ಆನೆ ಕಾಲಿಗೆ ಗಂಭೀರ ಗಾಯ, ವಿಕ್ರಾಂತ್ ಕಾಡಿನ ರಹಸ್ಯ, ಜೆಪಿ ಬರೆಯುತ್ತಾರೆ
Next Article Malenadu today e paper today e paper Malenadu malnad today news paper ಸಿಗಂದೂರಿನಲ್ಲಿ ಏರೋಡ್ರೋಮ್​ , ಇನ್ನಷ್ಟು ಸುದ್ದಿಗಳು ಇ-ಪೇಪರ್​ನಲ್ಲಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

instagram post
SHIVAMOGGA NEWS TODAYPOLITICS

instagram post : ಇನ್ಸ್ಟಾಗ್ರಾಮ್ ಪೋಸ್ಟ್​ ಒಂದರ ವಿರುದ್ದ ಕೇಸ್​ ಕೊಟ್ಟ ಬಿಜೆಪಿ 

By Prathapa thirthahalli
SHIVAMOGGA NEWS TODAY

ಕಸ ವಿಲೇವಾರಿಯಲ್ಲಿ ಲೋಪವಿದ್ದರೆ ಸುಮೋಟೋ ಕೇಸ್‌ ದಾಖಲಿಸಿ | ಉಪಲೋಕಾಯುಕ್ತ ನ್ಯಾ.ಕೆ.ಎ.ಫಣೀಂದ್ರ

By 131
Police station
SHIVAMOGGA NEWS TODAY

ಶೋರೂಂ ಬಳಿ ಬೈಕ್​ ನಿಲ್ಲಿಸಿದಾತನಿಗೆ ಬೆಳಿಗ್ಗೆ ಎದ್ದು ನೋಡಿದಾಗ ಕಾದಿತ್ತು ಶಾಕ್​ : ಏನಿದು ಘಟನೆ

By Prathapa thirthahalli
Traffic jam
SHIVAMOGGA NEWS TODAY

ಗುಡ್ಡೇಕಲ್ ಹರೋಹರ ಆಡಿಕೃತ್ತಿಕೆ  ಜಾತ್ರಾ ಮಹೋತ್ಸವ: ಭಾರೀ ಟ್ರಾಫಿಕ್ ಜಾಮ್, ಸಾರ್ವಜನಿಕರ ಪರದಾಟ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up