SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 24, 2025
ಶಿವಮೊಗ್ಗ | ಸಭಾಪತಿಗಳು ಸದನದಿಂದ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದನ್ನು ಹಾಗು ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದನ್ನು ವಿರೋಧಿಸಿ ಇಂದು ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತು. ಈ ಮೆರವಣಿಗೆಯು ಅಮೀರ್ ಅಹಮ್ಮದ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿತು. ಈ ವೇಳೆ ಪ್ರತಿಭಟನಾಕಾರರು ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ಹಾಗೂ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ. ಇದುವರೆಗೂ ಭಾರತ ಸಂವಿಧಾನ ಒಟ್ಟು 106 ಬಾರಿ ತಿದ್ದುಪಡಿಗೆ ಒಳಗಾಗಿದೆ. ಅದರಲ್ಲಿ ಆಶ್ಚರ್ಯವೆಂಬಂತೆ 76 ಬಾರಿ ಕಾಂಗ್ರೆಸ್ ತಿದ್ದುಪಡಿ ಮಾಡಿ ಮುಸ್ಸಿಮರ ಓಲೈಕೆಗೆ ಏನು ಬೇಕೋ ಅದನ್ನು ಮಾಡಿಕೊಂಡಿದೆ.ಈಗ ಮುಸ್ಲಿಂ ತುಷ್ಠೀಕರಣ ಬಜೆಟ್ ಮೂಲಕ ಊರು ಊರನ್ನು ಒಡೆಯುತ್ತಿದೆ ಎಂದು ಕಿಡಿ ಕಾರಿದರು. ಕಾಂಗ್ರೆಸ್ ಹಿಂದೂ-ಮುಸ್ಲಿಂರನ್ನು ಒಂದಾಗಿರಲು ಬಿಡುತ್ತಿಲ್ಲ. ಗುತ್ತಿಗೆಯಲ್ಲಿ ಈಗಾಗಲೇ ಮುಸ್ಲಿಂರೇ ಹೆಚ್ಚಿದ್ದಾರೆ. ಮತ್ತೆ ಮುಸ್ಲಿಂರಿಗೆ ಶೇ.4% ರಷ್ಟು ಮೀಸಲು ಕಲ್ಪಿಸಿದೆ. ಸಾಧನೆಗಳ ಆಧಾರದ ಮೇಲೆ ಅವರಿಗೆ ಮತ ಕೇಳುವ ಯೋಗ್ಯತೆ ಇಲ್ಲ. ಅದಕ್ಕಾಗಿ ಗ್ಯಾರೆಂಟಿಗಳ ಮೇಲೆ ಮತ ಕೇಳುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಮುಸ್ಲಿಂರಿಗೆ ಪಾಕಿಸ್ತಾನ ಮಾಡಿ ಕೊಟ್ಟಾಗಿದೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ಬಿಟ್ಟುಕೊಡುವುದಿಲ್ಲ ಎಂದ ಅವರು ಕಾಂಗ್ರಸ್ ನ ನೀಚತನ, ಕುಟಿಲ ನೀತಿಗೆ ಜನ ಉತ್ತರ ಕೊಡುತ್ತಾರೆ. ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಿದ್ದರು. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಕೊಟ್ಟಿದ್ರು. ಅವು ಕೇವಲ ಹಿಂದೂಗಳಿಗೆ ಅಂತಾ ಹೇಳಿದ್ರಾ ಎಂದು ಪ್ರಶ್ನಿಸಿದರು. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. 9ವಿವಿಗಳನ್ನು ಮುಚ್ಚಿ ಆ ಹಣವನ್ನು ಮುಸ್ಲಿಂರಿಗೆ ನೀಡುತ್ತಿದೆ ಎಂದು ಹೇಳಿದರು.
ಸಭಾಧ್ಯಕ್ಷರು ಷರಿಯತ್ ಕಾನೂನನ್ನು ಅನುಸರಿಸುತ್ತಿದ್ದಾರೆ. ಅವರು ಪಕ್ಷಾತೀತವಾಗಿರಬೇಕು. ಆದರೆ ಕಾಂಗ್ರೆಸ್ ಬರೆದುಕೊಟ್ಟಿದ್ದನ್ನು ಸಭಾಧ್ಯಕ್ಷರು ಮಾಡುತ್ತಿದ್ದಾರೆ ಎಂದ ಅವರು ನಮ್ಮ ಅಮಾನತು ವಾಪಸ್ ಗೆ ಭಿಕ್ಷೆ ಬೇಡುವುದಿಲ್ಲ. ಸಂವಿಧಾನ ಬಾಹಿರವಾಗಿ ನಮ್ಮನ್ನು 6 ತಿಂಗಳು ಹೊರಗೆ ಹಾಕಿ ನೀವು ಹೇಗೆ ವಿಧಾನ ಸೌಧದಲ್ಲಿರುತ್ತೀರಿ ಎಂದು ಸವಾಲು ಹಾಕಿದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
SUMMARY | The district BJP took out a massive protest march today to protest against the suspension of BJP MLAs and the anti-Hindu policies of the state government.
KEYWORDS | district BJP, protest, state government,