SHIVAMOGGA| MALENADUTODAY NEWS | ಮಲೆನಾಡು ಟುಡೆ Mar 22, 2025
ಶಿವಮೊಗ್ಗ , ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳಲ್ಲಿರುವ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಬಗ್ಗೆ ಜನರು ದೂರು ಹೇಳಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಸಂಸದ ಬಿ.ವೈ.ರಾಘವೇಂದ್ರ ಜನರ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ನಿನ್ನೆ ದಿನ ಶುಕ್ರವಾರ ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದ ಮುಖ್ಯ ಜನರಲ್ ಮ್ಯಾನೇಜರ್ ಎನ್. ಸುಜಾತಾ ಹಾಗೂ ಜನರಲ್ ಮ್ಯಾನೇಜರ್ ಬಿ.ಕೆ.ಸಿಕ್ಕಾ ಅವರೊಂದಿಗೆ ಸಭೆ ನಡೆಸಿದ ಅವರು, ಬಿಎಸ್ಎನ್ಎಲ್ ಟವರ್‌ಗಳಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಿ ಎಂದರು. ಹೊಸನಗರ ತಾಲ್ಲೂಕಿನ ಬ್ರಾಹ್ಮಣವಾಡಿ, ಕೊಳವಾಡಿ, ಗಿಣಿಕಲ್ಲು, ಮಣಸಟ್ಟೆ, ಮತ್ತಿಕ್ಕೆ, ನೀಲಕಂಠನಗೋಟ, ಪಿ. ಕಲ್ಲುಕೊಪ್ಪ ಗ್ರಾಮಗಳಲ್ಲಿ ಬಹಳಷ್ಟು ವರ್ಷಗಳಿಂದ ಜಾಗ ಮಂಜೂರಾತಿ ಬಾಕಿ ಇದ್ದು, ತಕ್ಷಣವೇ ಮಂಜೂರಾತಿ ಪಡೆಯಲು ಕ್ರಮ ವಹಿಸುವಂತೆ ಸೂಚಿಸಿದರು.
ಹೊಸನಗರ ತಾಲ್ಲೂಕಿಗೆ ಏಳು, ಸಾಗರ ಏಳು, ಶಿಕಾರಿಪುರ ತಾಲ್ಲೂಕಿಗೆ ಎರಡು, ಸೊರಬ ತಾಲ್ಲೂಕಿಗೆ ಏಳು, ತೀರ್ಥಹಳ್ಳಿ ತಾಲ್ಲೂಕಿಗೆ ಎಂಟು ಬಿಎಸ್ಎನ್ಎಲ್ ಟವರ್‌ಗಳು ಮಂಜೂರಾಗಿದ್ದು ಬೇಗ ಅವುಗಳನ್ನ ಸ್ಥಾಪನೆ ಮಾಡಿ ಎಂದು ತಿಳಿಸಿದ ಸಂಸದರು, ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.