SHIVAMOGGA| MALENADUTODAY NEWS | ಮಲೆನಾಡು ಟುಡೆ Mar 11, 2025
ಸುದ್ದಿ 1: ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ | ತರೀಕೆರೆ ಮತ್ತು ಮರಸಹಳ್ಳಿಯ ರೈಲು ನಿಲ್ದಾಣಗಳ ಮಧ್ಯೆ ದಿ.14-09-2024 ರಂದು ಸುಮಾರು 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈತನ ಗುರುತು ಹೀಗಿದೆ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈ ಬಣ್ಣ, ತಲೆಯಲ್ಲಿ ಸುಮಾರು 2 ಇಂಚು ಕಪ್ಪು ಮತ್ತು ಬಿಳಿ ಮಿಶ್ರಿತ ತಲೆಕೂದಲು ಹಾಗೂ ಕುರುಚಲು ಬಿಳಿ ಮತ್ತು ಕಪ್ಪು ಮಿಶ್ರಿತ ಗಡ್ಡಮೀಸೆ ಬಿಟ್ಟಿದ್ದು, ಕಡುಗಿಣಿ ಹಸಿರು ಬಣ್ಣದ ರೆಡಿಮೇಡ್ ಟೀ-ಶರ್ಟ್, ಗಿಣಿ ಹಸಿರು ಬಣ್ಣದ ಚೆಕ್ಸ್ ಗೆರೆಗಳಿರುವ ಪಂಚೆ ಹಾಗೂ ಗಿಣಿ ಹಸಿರು ಮತ್ತು ಬಿಳಿ ಬಣ್ಣದ ಉದ್ದಗೆರೆಗಳಿರುವ ಟವೆಲ್ ಇರುತ್ತದೆ. ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ದೇಹವನ್ನು ಇರಿಸಲಾಗಿದೆ. ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್‌ನ ದೂ.ಸಂ: 08182222974 ನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ 2 : ಅಪರಿಚಿತ ವ್ಯಕ್ತಿ ಸಾವು | ಹೊಳೆಹೊನ್ನೂರು ರಸ್ತೆಯ ಭೈರವ ವೈನ್ ಶಾಪ್ ಹತ್ತಿರ ಅಸ್ವಸ್ಥನಾಗಿ ಮಲಗಿದ್ದ ಸುಮಾರು 60 ರಿಂದ 65 ವಯಸ್ಸಿನ ವ್ಯಕ್ತಿಯನ್ನು ಫೆಬ್ರವರಿ 20 ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಈ ವ್ಯಕ್ತಿಯು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯು ಸುಮಾರು 5 ಅಡಿ 5 ಇಂಚು ಎತ್ತರ ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು-ಬಿಳಿ ಬಣ್ಣದ ಕೂದಲು, 3 ಇಂಚು ಉದ್ದದ ಕಪ್ಪು-ಬಿಳಿ ಬಣ್ಣದ ಕುರುಚಲು ಗಡ್ಡ ಇದ್ದು, ಹಣೆಯ ಮಧ್ಯ ಭಾಗದಲ್ಲಿ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಹಾಗೂ ಮೈ ಮೇಲೆ ಬಿಳಿ ಮಾಸಲು ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಸದರಿ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಕೋಟೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ 3 : ಮೃಗವಧೆಯಲ್ಲಿ ಮಹಿಳೆ ಶವ ಪತ್ತೆ | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ತೀರ್ಥಕ್ಷೇತ್ರ ಮೃಗವಧೆಯ ಹೊಳೆ ದಂಡೆ ಬಳಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅಸ್ವಸ್ಥರಾಗಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದ ಮಹಿಳೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಮಹಿಳೆ ಮೃತಪಟ್ಟಿರುವುದು ಗೊತ್ತಾಗಿದೆ. 108 ಆಂಬುಲೆನ್ಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಮಹಿಳೆ ಮೃತಪಟ್ಟಿರುವುದುನ್ನ ಖಾತರಿ ಪಡಿಸಿಕೊಂಡು ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಮಹಿಳೆಯ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ
ಸುದ್ದಿ 4 : ಗೋದಿ ಕಳುಹಿಸುವುದಾಗಿ ವಂಚನೆ | ಒಂದು ಲೋಡ್ ಗೋಧಿ ಕಳುಹಿಸುವುದಾಗಿ ನಂಬಿಸಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಗುಜರಾತ್ ಮೂಲದ ವ್ಯಕ್ತಿಯೊಬ್ಬ 7 ಲಕ್ಷ ರೂ. ವಂಚಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಶಿವಮೊಗ್ಗದ ಮನ್ಸೂರ್ ಎಂಬುವರಿಗೆ ಗುಜರಾತ್ ಮೂಲದ ಶೇಖ್ ಮೊಹಮ್ಮದ್ ಫರೀದ್ ಎಂಬಾತ ಗೋಧಿ ಕೊಡಿಸುವುದಾಗಿ ನಂಬಿಸಿದ್ದ. ಈ ಸಂಬಂಧ ಎರಡುವರೆ ಲಕ್ಷ ಅಡ್ವಾನ್ಸ್ ಮಾಡಲು ತಿಳಿಸಿದ್ದ. ಆನಂತರ 4.50 ಲಕ್ಷ ರೂಪಾಯಿ ಪಡೆದಿದ್ದ. ಆದರೆ ಗೋದಿಯನ್ನು ಆತ ಕಳುಹಿಸಲಿರಲಿಲ್ಲ. ಅನುಮಾನಗೊಂಡು ಪ್ರಶ್ನಿಸಿದ್ದಕ್ಕೆ ಆತ ಬೆದರಿಕೆ ಹಾಕಿದ್ದಾನೆ. ಸದ್ಯ ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸುದ್ದಿ 5 : ಮನೆಯಿಂದಲೇ ಕೆಲಸ, 53 ಲಕ್ಷ ದೋಖಾ | ವರ್ಕ್ ಫ್ರಾಮ್ ಹೋಮ್ ಆಫರ್ ನಂಬಿ ಮಹಿಳೆಯೊಬ್ಬರು 53 ಲಕ್ಷ ರೂಪಾಯಿ ಕಳೆದುಕೊಂಡ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಂದೊಂದು ಟಾಸ್ಕ್ ಪೂರೈಸಿದರೆ ನಿತ್ಯ 7 ರಿಂದ 8 ಸಾವಿರ ರೂ. ಗಳಿಸಬಹುದು ಎಂದು ಆಮೀಷ ಒಡ್ಡಿ ಮಹಿಳೆಯಿಂದ ವಿವಿಧ ಹಮತರಗಳಲ್ಲಿ 53.17 ಲಕ್ಷ ರೂಪಾಯಿ ಹೂಡಿಕೆ ಮಾಡಿಕೊಂಡಿದ್ದಾರೆ. ಆದರೆ ವಾಪಸ್ ಕೊಡದೆ ಇನ್ನಷ್ಟು ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಮಹಿಳೆ ಪೊಲೀಸರ ಮೊರೆಹೋಗಿದ್ದಾರೆ. ಸದ್ಯ ಈ ಸಂಬಂಧ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.