SHIVAMOGGA | MALENADUTODAY NEWS | ಮಲೆನಾಡು ಟುಡೆ Feb 17, 2025
ಮಹಾಕುಂಭಮೇಳದ ಹೆಸರಿನಲ್ಲಿ ಬೆಂಗಳೂರಿನ ಗುರುಜಿ ಒಬ್ಬರು ಶಿವಮೊಗ್ಗ ಜಿಲ್ಲೆ ಜನರಿಗೆ ವಂಚಿಸಿದ ಆರೋಪ ಸಂಬಂಧ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ : THE BHARATIYA NYAYA SANHITA (BNS), 2023(U/s-316(2),318(4),351(3),3(5)) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಮಹಾ ಮೋಸ!?
ಶಿವಮೊಗ್ಗದ ಟ್ರಸ್ಟ್‌ವೊಂದು ತನ್ನ ಸದಸ್ಯರನ್ನು ಮಹಾಕುಂಭ ಮೇಳಕ್ಕೆ ಕರೆದೊಯ್ಯಲು ತಯಾರಿ ನಡೆಸಿತ್ತು. ಸುಮಾರು ಆರನೂರಕ್ಕೂ ಹೆಚ್ಚು ಮಂದಿ ಮಹಾಕುಂಭ ಮೇಳಕ್ಕೆ ಹೋಗುವವರಿದ್ದರು. ಅವರೆಲ್ಲರಿಗೂ ಕುಂಭಮೇಳದಲ್ಲಿ ವಸತಿ ಸೌಕರ್ಯ ಒದಗಿಸುವ ಸಲುವಾಗಿ ಟ್ರಸ್ಟ್‌ನ ಸದಸ್ಯರು ಬೆಂಗಳೂರಿನ ಗುರುಜಿ ಹೆಸರಿನ ವ್ಯಕ್ತಿಯನ್ನು ಸಂಪರ್ಕಿಸಿದ್ದರು.
ವಸತಿ ಸೌಲಭ್ಯ ಒದಗಿಸಲು ಸಮ್ಮತಿಸಿದ್ದ ಗುರುಜಿ, ಒಬ್ಬರಿಗೆ ತಲಾ ಐದು ಸಾವಿರದಂತೆ ದರ ಫಿಕ್ಸ್ ಮಾಡಿ, ಅಡ್ವಾನ್ಸ್ ಐದು ಲಕ್ಷ ಪಡೆದಿದ್ದರು. ಜೊತೆಯಲ್ಲಿ ವಸತಿ ಸೌಲಭ್ಯದಲ್ಲಿ ಮಲಗಲು ಮಂಚದ ವ್ಯವಸ್ಥೆ, ಹಾಗೂ ಬೆಳಗ್ಗೆ, ಕಷಾಯ/ ಕಾಫಿ / ಟೀ ಮತ್ತು ಪ್ರತೀ ದಿನ ಬೆಳಗ್ಗೆ, ಯೋಗಾಸನ, ಪ್ರಾಣಾಯಾಮ, ಧ್ಯಾನ ಹಾಗೂ ಸತ್ಸಂಗಕ್ಕೆ ಅನುಕೂಲ, ಮತ್ತು ತಿಂಡಿ, ಊಟ, ಸ್ನ್ಯಾಕ್ಸ್ ಇತ್ಯಾದಿಗಳನ್ನು ಒದಗಿಸುವ ಆಶ್ವಾಸನೆ ನೀಡಿದ್ದರು.
ಇದನ್ನು ನಂಬಿದ ಶಿವಮೊಗ್ಗದ ಟ್ರಸ್ಟ್‌ನವರು ಆರನೂರಕ್ಕೂ ಹೆಚ್ಚು ಜನರಿಂದ ಒಟ್ಟು ಸುಮಾರು ಹದಿನಾಲ್ಕುವರೆ ಲಕ್ಷ ರೂಪಾಯಿಯನ್ನು ಗುರೂಜಿ ಅಕೌಂಟ್‌ಗೆ ಜಮೆ ಮಾಡಿದ್ದರು. ಈ ನಡುವೆ ಹಣ ಪಡೆದ ಬಳಿಕ ಗುರೂಜಿ ಅಸಲಿ ಮುಖ ಹೊರಬಿದ್ದಿದೆ. ಅವರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಮಹಾಕುಂಭಮೇಳದಲ್ಲಿ ಗುರೂಜಿ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಟ್ರಸ್ಟ್‌ನ ಸದಸ್ಯರು ಸಂಪರ್ಕಿಸಿದ್ದರು.
ಈ ವೇಳೆ ಕುಂಭಮೇಳದ ಸೆಕ್ಟರ್ 24 ರಲ್ಲಿ ಯಾವುದೇ ವಸತಿ ಸೌಲಭ್ಯ ಕಲ್ಪಿಸದೇ ಇರುವುದು ಗೊತ್ತಾಗಿದೆ. ಕೇವಲ ತಗಡು ಶೆಡ್‌ನಲ್ಲಿ ಬಟ್ಟೆ ಸುತ್ತಿದ ಬೆಡ್‌ಗಳು ಬಿಟ್ಟರೇ ಬೇರೆ ಅನುಕೂಲ ಇಲ್ಲದಿರುವುದು ಟ್ರಸ್ಟ್ ಸದಸ್ಯರಿಗೆ ಗೊತ್ತಾಗಿದೆ. ಹೀಗಾಗಿ ತಕ್ಷಣ ಗುರೂಜಿಯನ್ನು ಸಂಪರ್ಕಿಸಿದ್ದಾರೆ.
ಆದರೆ ಗುರೂಜಿ ಹೋಗುವುದು ಪಾಪ ಕರ್ಮವನ್ನು ತೊಳೆಯುವುದಕ್ಕಾಗಿ, ಹಾಗಾಗಿ ಭಗವಂತ ಅಲ್ಲಿ ಏನು ಕೊಡುತ್ತಾನೋ ಅದರಲ್ಲಿಯೇ ತೃಪ್ತಿ ಪಡಬೇಕು, ಪ್ರಶ್ನೆ ಮಾಡಬಾರದು ಎಂದಿದ್ದಾರೆ. ಇದರಿಂದ ಆಘಾತಗೊಂಡ ಟ್ರಸ್ಟ್‌ನವರು ತಮ್ಮ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪದ ಗುರೂಜಿ ಹಾಗೂ ಆತನ ಕಡೆಯವರು ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ.
ಒಟ್ಟು ಹದಿನಾಲ್ಕುವರೆ ಲಕ್ಷ ರೂಪಾಯಿ ಹಣ ಹಾಗೂ ದುಡ್ಡು ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿದ ಸಂಬಂಧ ಟ್ರಸ್ಟ್‌ನವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಎಫ್‌ಐಆರ್ ಆಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಟ್ರಸ್ಟ್ ಸದಸ್ಯರ ಹಣವನ್ನು ವಾಪಸ ಕೊಡಿಸುತ್ತಾರಾ? ಪ್ರಕರಣ ಯಾವ ಹಂತ ತಲುಪುತ್ತದೆ ಎನ್ನುವುದು ಪೊಲೀಸರ ತನಿಖೆ ಮೇಲೆ ನಿಂತಿದೆ.
SUMMARY | fraud case in the name maha kumbh mela register in vinoba nagar police station against bangalore guruji
KEY WORDS | fraud case in the name maha kumbh mela register in vinoba nagar police station against bangalore guruji