ಪೋಕ್ಸೋ ಕೇಸ್‌ | ಮತ್ತೊಮ್ಮೆ ಹೈಕೋರ್ಟ್‌ ಮೊರೆ ಹೋದ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 13, 2025 ‌‌ ‌

ತಮ್ಮ ವಿರುದ್ಧದ ಫೋಕ್ಸೋ ಪ್ರಕರಣ ಸಂಬಂಧ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಾಜಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್‌ನಲ್ಲಿ ಎರಡನೇ ಸುತ್ತಿನ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಈ ಸರ್ತಿ ತಮ್ಮ ವಿರುದ್ಧದ ದೂರು, ಎಫ್‌ಐಆ‌ರ್, ಸಿಐಡಿ ಪೊಲೀಸರು ದಾಖಲಿಸಿರುವ ಆರೋಪ ಪಟ್ಟಿ ಮತ್ತು 2025ರ ಫೆಬ್ರವರಿ 28ರಂದು ಪೋಕ್ಸ್ ವಿಶೇಷ ನ್ಯಾಯಾಲಯ ಸಂಜ್ಞೆ ಪರಿಗಣಿಸಿ (ಕಾಗ್ನಿಜೆನ್ಸ್) ಜಾರಿಗೊಳಿಸಿರುವ ಸಮನ್ಸ್ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಪ್ರಕರಣದ ತನಿಖೆ ನಡೆಸಿರುವ ಎಸ್‌ಐಟಿಯನ್ನು ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.

ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯವು 2024ರ ಜುಲೈ 4ರಂದು ಕಾಗ್ನಿಜೆನ್ಸ್ ತೆಗೆದುಕೊಂಡು ಜಾರಿಗೊಳಿಸಿದ ಸಮನ್ಸ್ ರದ್ದತಿ ಕೋರಿ ಈ ಹಿಂದೆ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು 2025ರ ಫೆಬ್ರವರಿ 7ರಂದು ವಜಾಗೊಳಿಸಿದ್ದ ಹೈಕೋರ್ಟ್, ವಿಶೇಷ ನ್ಯಾಯಾಲಯವು ತೆಗೆದುಕೊಂಡಿದ್ದ ಕಾಗ್ನಿಜೆನ್ಸ್ ರದ್ದುಪಡಿಸಿತ್ತು. 

ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ಆದೇಶಗಳನ್ನು ಗಮನದಲ್ಲಿರಿಸಿಕೊಂಡು ಹೊಸದಾಗಿ ಕಾಗ್ನಿಜೆನ್ಸ್ ತೆಗೆದುಕೊಂಡು ಕಾನೂನು ಪ್ರಕಾರ ಆದೇಶ ಹೊರಡಿಸಬೇಕೆಂದು ಸೂಚಿಸಿತ್ತು. 

ನಂತರ ಸಿಐಡಿ ಸಲ್ಲಿಸಿರುವ ಆರೋಪಪಟ್ಟಿ ಆಧರಿಸಿ ವಿಶೇಷ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡು ಯಡಿಯೂರಪ್ಪಗೆ ಸಮನ್ಸ್ ನೀಡಿತ್ತು ಹಾಗೂ ಮಾರ್ಚ್‌ 15ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಇದೀಗ ಬಿಎಸ್‌ವೈ ಹೈಕೋರ್ಟ್ ಮೊರೆ ಹೋಗಿದ್ದಾರೆ.

Share This Article