SHIVAMOGGA| MALENADUTODAY NEWS | ಮಲೆನಾಡು ಟುಡೆ Mar 26, 2025
ಕುಡಿಯುವ ನೀರಿನ ಸಂಪ್‌ನಲ್ಲಿ ಬರೋಬ್ಬರಿ 69 ಹಾವು ಸಿಕ್ಕ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ. ಇಲ್ಲಿನ ಕಾಶೀಪುರದ ಬಡಾವಣೆಯಲ್ಲಿರುವ ಮನೆಯೊಂದರ ನೀರಿನ ತೊಟ್ಟಿಯಿಂದ 69 ಹಾವಿನ ಮರಿಗಳನ್ನು ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಈ ದೃಶ್ಯವು ಮಲೆನಾಡು ಟುಡೆಗೆ ಸ್ನೇಕ್ ಕಿರಣ್ ಒದಗಿಸಿದ್ದಾರೆ. ಸ್ನೇಕ್ ಕಿರಣ್‌ರವರು ನೀಡಿದ ಮಾಹಿತಿಯಂತೆ ಸಿಕ್ಕ ಹಾವಿನ ಮರಿಗಳನ್ನು ಸಾಮಾನ್ಯ ಭಾಷೆಯಲ್ಲಿ ನೀರು ಹಾವು ಎಂದು ಕರೆಯಲಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಇವುಗಳನ್ನು chequered keelback ಎಂದು ಹೇಳಲಾಗುತ್ತದೆಯಾದರೂ Asiatic water snake ಎಂದು ಇವುಗಳನ್ನು ಕರೆಯುತ್ತಾರೆ. ಇನ್ನೂ ಸಿಕ್ಕ ಹಾವುಗಳ ಪೈಕಿ ಒಂದು ಹಳದಿ ಬಣ್ಣದ ನೀರು ಹಾವು ಸಿಕ್ಕಿದ್ದು, ಇದು ವಿಶೇಷವೆನಿಸಿದೆ.
ಇಲ್ಲಿನ ಮನೆ ಮಾಲೀಕ ಈಶ್ವರಯ್ಯ ಎಂಬವರು ತಮ್ಮ ಮನೆಯ ನೀರಿನ ತೊಟ್ಟಿಯಲ್ಲಿ ಹಾವುಗಳು ಗಂಟು ಕಟ್ಟಿದ ರೀತಿಯಲ್ಲಿ ತೇಲುತ್ತಿರುವುದುನ್ನು ಗಮನಿಸಿದ್ದಾರೆ. ಆ ಬಳಿಕ ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಕೆಲವು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಎಲ್ಲಾ ಹಾವಿನ ಮರಿಗಳನ್ನು ಹಿಡಿದು, ಅವುಗಳ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದರು.
ಮೀನಿನ ಬಲೆಯನ್ನು ಉಪಯೋಗಿಸಿ ಮೊದಲ ದಿನ ಸುಮಾರು 60 ಹಾವಿನ ಮರಿಗಳನ್ನು ಹಿಡಿದ ಸ್ನೇಕ್ ಕಿರಣ್ ಮರುದಿನ 9 ಹಾವಿನ ಮರಿಗಳನ್ನ ಹಿಡಿದು ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಸದ್ಯ ಇದು ಹಾವುಗಳ ಸಂತಾನೋತ್ಪತ್ತಿಯ ಸಮಯವಾಗಿದ್ದು, ನೀರು ಹಾವುಗಳ ಮರಿಗಳು ಸುರಕ್ಷಿತವಾಗಿವೆ ಎಂದು ಮಾಹಿತಿ ಒದಗಿಸಿದರು