ನಮಾಜ್‌ ಮುಗಿಸುವಷ್ಟರಲ್ಲಿ ₹29 ಲಕ್ಷ ಕಳ್ಳತನ ಕೇಸ್‌ | ರಂಜದಕಟ್ಟೆ ಮಸೀದಿ ಬಳಿ ನಡೆದ ಕ್ರೈಂ 6 ಗಂಟೆಯಲ್ಲಿ ಇತ್ಯರ್ಥ | ಹೊನ್ನಾಳಿಯ ಮೂವರು ಅರೆಸ್ಟ್‌

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 16, 2025 ‌‌ ‌‌

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ರಂಜದಕಟ್ಟೆ ಮಸೀದಿ ಸಮೀಪ ನಡೆದಿದ್ದ ಮೂವತ್ತು ಲಕ್ಷ ರೂಪಾಯಿ ಹಣದ ಕಳ್ಳತನ ಪ್ರಕರಣ ಕೇವಲ ಆರು ಗಂಟೆಯಲ್ಲಿ ಕ್ಲೀಯರ್‌ ಆಗಿದೆ. ಕಳೆದ ಮಾರ್ಚ್‌ 14 ರಂದು ನಡೆದಿದ್ದ ಘಟನೆ ಸಂಬಂಧ ಅದೇ ದಿನ ರಾತ್ರಿ ಪೊಲೀಸರು ಪೂರ್ತಿ ಹಣದ ಸಮೇತ ಆರೋಪಿಗಳನ್ನ ದಸ್ತಗಿರಿ ಮಾಡಿದ್ದಾರೆ.

ಏನಿದು ಪ್ರಕರಣ?

ಮಾರ್ಚ್‌ 14 ರಂದು ರಂಜದಕಟ್ಟೆ ಮಸೀದಿ ಬಳಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಗುಜರಿ ವ್ಯಾಪಾರಿ ಮೊಹಮ್ಮದ್‌ ಇರ್ಷಾದ್‌ ಹಾಗೂ ಇತರರು ತಾವು ಬಂದಿದ್ದ ಗೂಡ್ಸ್‌ ವೆಹಿಕಲ್‌ ನಿಲ್ಲಿಸಿ ನಮಾಜ್‌ಗೆ ಹೊತ್ತಾದ್ದರಿಂದ ನಮಾಜ್‌ಗೆ ತೆರಳಿದ್ದರು. ಆದರೆ ಮಸೀದಿ ಒಳಗೆ ಹೋಗಿ ನಮಾಜ್‌ ಮುಗಿಸಿ ವಾಪಸ್‌ ಬರುವಷ್ಟರಲ್ಲಿ, ಮಸೀದಿ ಹೊರಗಡೆ ನಿಲ್ಲಿಸಿದ್ದ ಗೂಡ್ಸ್‌ ವೆಹಿಕಲ್‌ ಮಾಯವಾಗಿತ್ತು. ಇದನ್ನು ನೋಡಿ ಗಾಬರಿಯಾದ ಇರ್ಷಾದ್‌ ವೆಹಿಕಲ್‌ನಲ್ಲಿ ₹29 ಲಕ್ಷ ರೂಪಾಯಿ ಕ್ಯಾಶ್‌ ಇರುವುದಾಗಿ ಹೇಳಿದ್ದರು. ಆಗ ಅಲ್ಲಿದ್ದ ಸ್ಥಳೀಯರಿಗೂ ಸೇರಿದಂತೆ ಎಲ್ಲರಿಗೂ ಒಂದು ರೀತಿಯ ಟೆನ್ಶನ್‌ ಶುರುವಾಗಿತ್ತು. ತಕ್ಷಣವೇ ಸ್ಥಳೀಯರು ಪೊಲೀಸರಿಗೂ ಕರೆ ಮಾಡಿ ನಾಪತ್ತೆಯಾದ ವಾಹನವನ್ನು ಹುಡಕಲು ಆರಂಭಿಸಿದ್ದರು. ಹುಡುಕಾಟ ಆರಂಭಿಸಿ ಕೆಲವೇ ಹೊತ್ತಿನಲ್ಲಿ ತುಸುದೂರದಲ್ಲಿ ಗೂಡ್ಸ್‌ ವಾಹನ ಪತ್ತೆಯಾಗಿತ್ತು. ಆದರೆ ಅದರಲ್ಲಿದ್ದ ಹಣ ನಾಪತ್ತೆಯಾಗಿತ್ತು. ಈ ಪ್ರಕರಣ ತೀವ್ರ ಕುತೂಹಲ ಪಡೆದುಕೊಂಡಿತ್ತು. 

ಇದರ ನಡುವೆ ತೀರ್ಥಹಳ್ಳಿ ಪಿಐ ಇಮ್ರಾನ್ ಬೇಗ್, ಶಿವನಗೌಡ ಪಿಎಸ್ ಐ, ತೀರ್ಥಹಳ್ಳಿ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಗಳಾದ ಎಎಸ್ಐ  ಲೋಕೇಶಪ್ಪ, ಹೆಚ್ ಸಿಗಳಾದಃ  ಲಿಂಗೇಗೌಡ, ರಾಜಶೇಖರ್ ಶೆಟ್ಟಿಗಾರ್, ಸಿಪಿಸಿಗಳಾದಃ ರವಿ, ಪ್ರದೀಪ್, ಸುರೇಶ್ ನಾಯ್ಕ್,  ಪ್ರಮೋದ್,  ದೀಪಕ್, ಮಂಜುನಾಥ, ರಾಘವೇಂದ್ರ, ಕರ್ಣೇಶ್, ಚಾಲಕರಾದ ಅವಿನಾಶ್ ಹಾಗು ಜಿಲ್ಲಾ ಪೊಲೀಸ್ ಕಛೇರಿ ಎ.ಎನ್.ಸಿ ವಿಭಾಗದ ಗುರುರಾಜ್, ಇಂದ್ರೇಶ್ ಹಾಗೂ ವಿಜಯಕುಮಾರ ರವರುಗಳನ್ನು ಒಳಗೊಂಡ  ತನಿಖಾ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು. 

ಡ್ರೈವರೇ ಕಳ್ಳ

ಪ್ರಕರಣದ ತನಿಖೆ ಆರಂಭಿಸಿದಾಗಲೇ ಕೇಸ್‌ ಇಷ್ಟೆ ಎಂಬುದು ಪೊಲೀಸರಿಗೆ ಗೊತ್ತಾಗಿ ಹೋಗಿತ್ತು. ಆದರೆ ಸುಳಿವು ಬಿಟ್ಟುಕೊಡದ ಪೊಲೀಸರು ಗೂಡ್ಸ್‌ ವಾಹನದಲ್ಲಿ ಬಂದಿದ್ದ ನಾಲ್ವರ ಮೇಲೆಯೇ ತಮ್ಮ ದೃಷ್ಟಿ ನೆಟ್ಟಿದ್ದರು. ಅದರಲ್ಲಿಯು ವಿಶೇಷವಾಗಿ ವೆಹಿಕಲ್‌ ಬಗ್ಗೆ ಜಾಗ್ರತೆ ವಹಿಸಬೇಕಾಗಿದ್ದ ಡ್ರೈವರ್‌ನ ಹಾವಭಾವಗಳನ್ನು ಪರಿಶೀಲಿಸ್ತಿದ್ದ ಪೊಲೀಸರು ಕೊನೆಗೆ ಆತನನ್ನು ಸ್ಟೇಷನ್‌ಗೆ ಕರೆದೊಯ್ದು ವಿಚಾರಿಸುತ್ತಾರೆ. ಯಾವಾಗ ಪೊಲೀಸರು ಸರಳ ಭಾಷೆಯಲ್ಲಿ ಕೇಳುತ್ತಾರೋ, ಚಾಲಕ ಎಲ್ಲಾ ವಿಚಾರವನ್ನು ಬಾಯ್ಬಿಟ್ಟಿದ್ದ. 

ಗೂಡ್ಸ್‌ ವೆಹಿಕಲ್‌ ಚಾಲಕ ನವೀದ್ ಅಹಮದ್, ಇರ್ಷಾದ್‌ರವರ ಜೊತೆಗೆ ಗುಜರಿ ವ್ಯಾಪಾರಕ್ಕೆ ತೆರಳ್ತಿದ್ದ. ಹಾಗಾಗಿ ಇರ್ಷಾದ್‌ ಬಳಿ ಕ್ಯಾಶ್‌ ಇದ್ದೆ ಇರುತ್ತದೆ ಎಂಬ ನಂಬಿಕೆ ಈತನಗಿತ್ತು. ಇನ್ನೂ ಮಂಗಳೂರಿಗೆ ಹೊರಟಿದ್ದಾಗಲು ಇರ್ಷಾದ್‌ ಬಳಿ ದುಡ್ಡು ಇರುವುದನ್ನು ಗಮನಿಸಿದ್ದ ನವೀದ್‌ ತನ್ನ ಸ್ನೇಹಿತರಿಗೆ ಕರೆ ಮಾಡಿ, ಇನ್ನೊಂದು ಕಾರಿನಲ್ಲಿ ಗೂಡ್ಸ್‌ ವಾಹನವನ್ನು ಫಾಲೋ ಮಾಡಿಕೊಂಡು ಬರುವುದಕ್ಕೆ ತಿಳಿಸಿದ್ದ. ಮೇಲಾಗಿ ಎಲ್ಲಾದರೂ ನಮಾಜ್‌ಗೆ ಬಿಡುವು ಮಾಡಿಕೊಳ್ಳುವುದು ಖಚಿತ ಎಂದು ತಿಳಿದಿದ್ದ, ಅದೇ ಸಮಯದಲ್ಲಿ ವೆಹಿಕಲ್‌ನಲ್ಲಿದ್ದ ಹಣ ದೋಚುವುದಕ್ಕೆ ಪ್ಲಾನ್‌ ಮಾಡಿದ್ದ. ಅದೇ ರೀತಿಯಲ್ಲಿ ರಂಜದಕಟ್ಟೆಯ ಬಳಿ ಇರ್ಷಾದ್‌ ನಮಾಜ್‌ಗೆ ಅಂತಾ ವೆಹಿಕಲ್‌ ನಿಲ್ಲಿಸಲು ಹೇಳಿದಾಗಿ ನವೀದ್‌ ಗಾಡಿ ಕೀಯನ್ನು ವಾಹನದಲ್ಲಿಯೇ ಬಿಟ್ಟು ಇರ್ಷಾದ್‌ ಹಾಗೂ ಇತರರ ಜೊತೆ ನಮಾಜ್‌ಗೆ ತೆರಳಿದ್ದ. ನಮಾಜ್‌ ಮುಗಿಸಿ ಬರುವಷ್ಟರಲ್ಲಿ ನವೀದ್‌ ಸ್ನೇಹಿತರು ಗೂಡ್ಸ್ ವಾಹನವನ್ನು ಸ್ಟಾರ್ಟ್‌ ಮಾಡಿಕೊಂಡು ಮುಂದಕ್ಕೆ ಹೊಗಿ ಅಜ್ಞಾತ ಸ್ಥಳದಲ್ಲಿ ಹಣ ತೆಗೆದುಕೊಂಡು ಕಾರಿನಲ್ಲಿ ಹೊನ್ನಾಳಿಗೆ ಪರಾರಿಯಾಗಿದ್ದರು. 

ಇತ್ತ ವೆಹಿಕಲ್‌ನಲ್ಲಿ ಹಣ ಇಲ್ಲ ಎಂಬುದು ಗೊತ್ತಾಗುತ್ತಲೇ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ಅನುಭವದಲ್ಲಿಯೇ ಈ ಕೇಸ್‌ನಲ್ಲಿ ಡ್ರೈವರ್‌ನದ್ದೆ ಪಾತ್ರ ಇದೆ ಎಂಬುದು ಗೊತ್ತಾಗಿತ್ತು. ಹಾಗಾಗಿ ಎಳ್ಳಷ್ಟು ತಡಮಾಡದೇ ಆತನನ್ನು ಕರೆದುಕೊಂಡು ಹೋಗಿ ವರ್ಕ್‌ ಮಾಡಿದ್ದರು. ಪರಿಣಾಮ ಆತ ಸತ್ಯ ಬಾಯ್ಬಿಟ್ಟಿದ್ದ. ಇತ್ತು ಕಾರೊಂದರಲ್ಲಿ ಬಂದಿದ್ದ ಚಾಲಕ ನವೀದ್‌ನ ಸಹವರ್ತಿಗಳು ಹೊನ್ನಾಳಿಗೆ ಕದ್ದ ಹಣ ತೆಗೆದುಕೊಂಡು ಹೋಗಿ ಇನ್ನೂ ಅದನ್ನು ಎಣಿಸಿಯು ಇರಲಿಲ್ಲ. ಅಷ್ಟರಲ್ಲಿ ಆರೋಪಿಗಳ ಲೈವ್‌ ಲೊಕೇಷನ್‌ನಲ್ಲಿ ಪೊಲೀಸರು ಹಾಜರಿದ್ದರು. 

ಕೆಲವೇ ಗಂಟೆಗಳಲ್ಲಿ ಕೇಸ್‌ ಖಲ್ಲಾಸ್‌ ಆರೋಪಿಗಳು ಅರೆಸ್ಟ್‌, ಅಮೌಂಟ್‌ ಸೀಜ್‌ ಆಗಿ ಹೋಗಿತ್ತು. ಪೊಲೀಸರು ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ನೂರಾನಿ ಮಸೀದಿ ಹತ್ತಿರದ ನಿವಾಸಿಗಳಾದ ಸೈಯದ್ ಅಬ್ದುಲ್ಲಾ (45), ಜಾವೀದ್‌ (42), ಹೊನ್ನಾಳಿ ಪಟ್ಟಣದ ನವೀದ್ ಅಹಮದ್ (40)  ರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Comment