SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024
ಮಲೆನಾಡಿನಲ್ಲಿ ಪೊಲೀಸರು ಈವರೆಗೆ ನಕ್ಸಲರ ವಿರುದ್ಧ ನಡೆಸಿದ ಎನ್ಕೌಂಟರ್ ಗಳೆಷ್ಟು..ಎಲ್ಲವೂ ಕಾನೂನಿನ ಚೌಕಟ್ಟಿನಲ್ಲೇ ಆಗಿರುವಾಗ ವಿಕ್ರಂ ಗೌಡನ ಎನ್ಕೌಂಟರ್ ಬಗ್ಗೆ ಅನುಮಾನ ಮೂಡುವುದೇಕೆ? ಜೆಪಿ ಬರೆಯುತ್ತಾರೆ.
ದೇಶದ ಯಾವುದೇ ಮೂಲೆಯಲ್ಲಿ ಎನ್ಕೌಂಟರ್ ಹೆಸರಿನಲ್ಲಿ ನಡೆದಿರುವ ಹತ್ಯೆಗಳ ಬಗ್ಗೆ ಅನುಮಾನಗಳು ಮೂಡಿ, ಅಂತಹ ಪ್ರಕರಣಗಳು ತನಿಖೆಗೆ ಒಳಪಟ್ಟು ನಂತರ ಫೇಕ್ ಎಂದು ಸಾಭೀತಾಗಿ ಪೊಲೀಸ್ ಅಧಿಕಾರಿಗಳು ಜೈಲು ವಾಸ ಅನುಭವಿಸಿದ ಘಟನೆಗಳು ಇನ್ನು ಹಸಿರಾಗಿಯೇ ಇದೆ. ಅದರಲ್ಲೂ ಪ್ರಮುಖವಾಗಿ ರಾಜ್ಯದಲ್ಲಿ ನಕ್ಸಲ್ ಎನ್ಕೌಂಟರ್ ಗೆ ಈವರೆಗೆ ಹದಿನೈದಕ್ಕೂ ಹೆಚ್ಚು ಮಂದಿ ಮಲೆನಾಡಿನ ಯುವಕ ಯುವತಿಯರೇ ಬಲಿಯಾಗಿದ್ದಾರೆ.
ಪೊಲೀಸ್ ಎನ್ಕೌಂಟರ್ ಗೆ ಬಲಿಯಾದ ಪ್ರಮುಖ ಪ್ರಕರಣಗಳು
2002 ನವಂಬರ್ 17
ಕಾರ್ಕಳ ತಾಲೂಕು ಈದು ಗ್ರಾಮದ ಬೊಲ್ಲೊಟ್ಟೊದಲ್ಲಿ ನಡೆದ ಎನ್ಕೌಂಟರ್ ಗೆ ಪಾರ್ವತಿ ಹಾಜೀಮ ಬಲಿ.,ಇದು ಮಲೆನಾಡಿನಲ್ಲಿ ನಡೆದ ಮೊದಲ ಪೊಲೀಸ್ ಎನ್ಕೌಂಟರ್ ಆಗಿತ್ತು.
2005 ಪೆಬ್ರವರಿ 6
ಕೊಪ್ಪ ತಾಲೂಕು ಮೆಣಸಿನ ಹಾಡ್ಯದ ಬಲಿಗೆ ಗುಡ್ಡದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಮತ್ತು ಸಹಚರ ಶಿವಲಿಂಗು ಎನ್ಕ್ಕೌಂಟರ್ ಗೆ ಬಲಿ.
2005 ಜೂನ್ 23
ಕುಂದಾಪುರ ಬಳಿಯ ಶಂಕರನಾರಾಯಣ ವ್ಯಾಪ್ತಿಯ ರಾಮನಹಕ್ಲು ಬಳಿ ನಡೆದ ಎನ್ಕೌಂಟರ್ ನಲ್ಲಿ ಮೂಡಿಗೆರೆ ತಾಲೂಕಿನ ಸಬಲಿ ಉಮೇಶ್ ಮತ್ತು ಬೆಳಗಾವಿ ಮೂಲದ ಅಜಿತ್ ಕುಸಬಿ ಸಾವು
2006 ಡಿಸೆಂಬರ್ 26
ಶೃಂಗೇರಿ ತಾಲೂಕಿನ ಕೆಸಮುಡಿ ಎನ್ಕೌಂಟರ್ ನಲ್ಲಿ ನಾರಾವಿ-ಕುತ್ಲೂರಿನ ದಿನಕರ್ ಮೃತ
2007 ಜುಲೈ 10
ಕೊಪ್ಪ ತಾಲೂಕಿನ ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯರ ಮಠದಲ್ಲಿ ನಡೆದ ಎನ್ಕೋಂಟರ್ ಗೆ ನಕ್ಸಲ್ ಗೌತಮ್,ಶಂಕಿತ ನಕ್ಸಲರಾದ ರಾಮೇಗೌಡ್ಲು,ಸುಂದರೇಶ್,ಪರಮೇಶ್ ಕಾವೇರಮ್ಮ ಒಟ್ಟು 5 ಬಲಿ.
ಮಾವಿನ ಹೊಲ ಎನ್ಕೌಂಟರ್ 2007 ನವೆಂಬರ್ 19
ಮಧ್ಯರಾತ್ರಿ 2 ಗಂಟೆ ಸುಮಾರಿಗೆ. ಬಲಿಗೆ ಗುಡ್ಡ ದ ಮಾವಿನಹೊಲ( ಸಮೀಪದ ಮುತ್ತಿನ ಕಡವೆ) ಎನ್ಕೌಂಟರ್ ಗೆ ಶಂಕಿತ ನಕ್ಸಲರಾದ ಮನೋಹರ್(27) ಮೂಡಿಗೆರೆ ನಾಗಸಂಪಿಗೆ ಮಕ್ಕಿ ರವಿ(19),ಮೂಡಿಗೆರೆ ತಾಲೂಕಿನ ಉದುಸೆಯ ದೇವಯ್ಯ ಹಾಗು ಪೊಲೀಸ್ ಪೇದೆ ಗುರುಪ್ರಸಾದ್ ಒಟ್ಟು ಮೂವರು ನಕ್ಸಲರು ಹಾಗು ಓರ್ವ ಪೊಲೀಸ್ ಬಲಿ.
2010 ಮಾರ್ಚ್ 1
ಅಂಡಾರು ಗ್ರಾಮದ ಮೈರೋಳಿ ಜಡ್ಡು ಬಳಿ ನಡೆದ ಎನ್ಕೌಂಟರ್ ನಲ್ಲಿ ರಾಯಚೂರಿನ ನಕ್ಸಲ್ ಯಲ್ಲಪ್ಪ ಸಾವು
2024 ನವೆಂಬರ್ 18
ಎ.ಎನ್.ಎಫ್ ಎನ್ಕೌಂಟರ್ ಗೆ ನಕ್ಸಲ್ ನಾಯಕ ವಿಕ್ರಂ ಗೌಡ ಸಾವು
ಈ ಪೊಲೀಸ್ ಎನ್ಕೌಂಟರ್ ಗಳಲ್ಲಿ ನಕ್ಸಲರು ಪೊಲೀಸರ ವಿರುದ್ಧ ಪೂರ್ವಭಾವಿಯಾಗಿ ದಾಳಿ ನಡೆಸಿದ ಸನ್ನಿವೇಶಗಳು ಸಾಕಷ್ಟಿವೆ. ಆತ್ಮ ರಕ್ಷಣೆಗೆ ಪೊಲೀಸರು ಪ್ರತಿದಾಳಿ ನಡೆಸಿದ್ದರಿಂದಲೇ ಹಲವು ಎನ್ಕೌಂಟರ್ ಗಳಾಗಿ ಸಾವು ನೋವುಗಳಾಗಿವೆ ನಕ್ಸಲರ ದಾಳಿಯಲ್ಲಿ .ಎಸ್ಸೈ ವೆಂಕಟೇಶ್, ಸೇರಿದಂತೆ ಮೂವರು ಪೊಲೀಸರು ಹಾಗು ಶೆಷಪ್ಪ ಗೌಡ್ಲು, ಕೆಸಮುಡಿ ವೆಂಕಟೇಶ್, ಶಿಕ್ಷಕ ಭೋಜ ಶೆಟ್ಟಿ ಸುರೇಶ್ ಶೆಟ್ಟಿ ಸಾವನ್ನಪ್ಪಿದ್ದಾರೆ. ಇನ್ನೂ ನಕ್ಸಲರು ಅರಣ್ಯ ಚೆಕ್ ಪೋಸ್ಟ್ ಮೇಲೆ ಗ್ರಾನೈಡ್ ದಾಳಿ ನಡೆಸಿದ್ದಾರೆ. ಸರ್ಕಾರಿ ಬಸ್ ಗೆ ಬೆಂಕಿ ಹಚ್ಚಿದ್ದಾರೆ. ನಾಗರೀಕರನ್ನು ಹಾಗು ಪೊಲೀಸರನ್ನು ಅಪಹರಿಸಿ ಬೆದರಿಸಿ ಬಿಡುಗಡೆಗೊಳಿಸಿದ್ದಾರೆ. ನಕ್ಸಲರಿಂದ ಮಲೆನಾಡಿನಲ್ಲಿ ಆದ ತಲ್ಲಣಗಳು ದೊಡ್ಡ ಮಟ್ಟದಲ್ಲಿಯೇ ಇದೆ.
ಇನ್ನೂ ವಿಕ್ರಮ್ಗೌಡನ ಎನ್ಕೌಂಟರ್ನ ಬಗ್ಗೆ ಕಾರ್ಕಳ ಡಿಎಸ್ಪಿಯವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಆ ದೂರಿನ ಸಾರಾಂಶ ಹೀಗಿದೆ
ಪೀರ್ಯಾದುದಾರರು ಎ.ಎನ್.ಎಫ್ ಅಧಿಕಾರಿಯಾಗಿದ್ದು, ಅವರು ತಮ್ಮ ಸಿಬ್ಬಂದಿಗಳ ಸಹಿತ ದಿನಾಂಕ 18-11-24 ರಂದು ಸಂಜೆ 5 ಗಂಟೆಗೆ ನಿಷೇಧಿತ ಉಗ್ರವಾದಿ ಸಿಪಿಐ ಮಾವೋವಾದಿ ಸಂಘಟನೆಯ ಸದಸ್ಯರ ಚಲನ ವಲನದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಾಡ್ಲಲು ಗ್ರಾಮದ ಪೀತಬೈಲಿನ ಕಾಡಿನಲ್ಲಿ ಕೂಂಬಿಂಗ್ ಮಾಡುತ್ತಿರುವಾಗ ಸಂಜೆ 6 ಗಂಟೆ ವೇಳೆಗೆ 3-4 ಬಂಧೂಕುಧಾರಿಗಳು ಬರುತ್ತಿರುವುದು ಕಂಡುಬಂದಿದ್ದು,ಅವರುಗಳನ್ನು ವಿಕ್ರಂ ಗೌಡ ಹಾಗು ಇತರೆ ನಿಷೇಧಿತ ಮಾವೋವಾದಿ ಸಂಘಟನೆಯ ಸದಸ್ಯರೆಂದು ಖಚಿತಪಡಿಸಿಕೊಂಡು, ಸದ್ರಿಯವರಿಗೆ, ನಾವು ಪೊಲೀಸರಿಗೆ ಶರಣಾಗಿ ಎಂದು ಪದೇ ಪದೇ ಕೂಗಿ ಹೇಳಿದರೂ ಸಹ ಅದನ್ನು ಧಿಕ್ಕರಿಸಿ ವಿಕ್ರಂ ಗೌಡ ಹಾಗು ಇತರರು ಪಿರ್ಯಾದುದಾರರು ಹಾಗು ಸಿಬ್ಬಂದಿಗಳನ್ನು ಕೊಲ್ಲುವ ಉದ್ದೇಶದಿಂದ ಗುಂಡು ಹಾರಿಸುತ್ತಿದ್ದು, ಆತ್ಮ ರಕ್ಷಣೆಗಾಗಿ ಪಿರ್ಯಾದುದಾರರು ಹಾಗು ಸಿಬ್ಬಂದಿಗಳು ಪ್ರತಿದಾಳಿ ಮಾಡಿದ ಪರಿಣಾಮ ವಿಕ್ರಂ ಗೌಡನಿಗೆ ಗುಂಡು ತಗುಲಿ ಕುಸಿದು ಬಿದ್ದಿರುತ್ತಾರೆ.ಇತರರು ಗುಂಡು ಹಾರಿಸುತ್ತಾ ಕಾಡಿನಲ್ಲಿ ಪರಾರಿಯಾಗಿರುತ್ತಾರೆ.ಕುಸಿದುಬಿದ್ದ ವಿಕ್ರಂ ಗೌಡ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಆತನ ಬಳಿ 9 ಎಂ ಎಂ ಕಾರ್ಬೈನ್ ಗನ್ ಇರುವುದು ಕಂಡು ಬಂದಿರುತ್ತದೆ.ಸರದಿ ಮೃತಪಟ್ಟ ಹಾಗು ಪರಾರಿಯಾದ ಆರೋಪಿಗಳು ನಿಷೇಧಿತ ಉಗ್ರವಾದಿ ಸಿಪಿಐ ಮಾವೇವಾದಿ ಸಂಘಟನೆಯ ಸದಸ್ಯರಾಗಿದ್ದು, ರಾಷ್ಟ್ರೀಯ ಭದ್ರತೆಗೆ ಭಂಗ ತರುವ ಹಾಗು ಪರಾರಿಯಾದ ಆರೋಪಿಗಳು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸುಲಿಗೆ ಮುಂತಾದ ಸಂಘಟಿತ ಅಪರಾಧಗಳಲ್ಲಿ ತೊಡಗಿದವರಾಗಿದ್ದು, ವಿಧಿ ಬದ್ಧವಾಗಿ ಕರ್ತವ್. ನಿರ್ವಹಿಸುತ್ತಿದ್ದ ಫಿರ್ಯಾದಿದಾರರು ಹಾಗು ಸಿಬ್ಬಂದಿಗಳನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದ ಮೃತ ವಿಕ್ರಂ ಗೌಡ ಹಾಗು ಪರಾರಿಯಾದ ಇತರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಫಿರ್ಯಾದಿದಾರರ ದೂರಿನ ಸಾರಾಂಶವಾಗಿದೆ.
ದೂರಿನ ಅನ್ವಯ ಆರೋಪಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ರ ಅಡಿ U/S-111, 113, 132, 61(1), 62, 148, 3{5), THE ARMS(AMENDMENT) ACT 2019, (U/s -3,25) Unlawful activities (prevention )act 1967, (U/s 10, 16(1)(B), 20, 38) ಅಡಿ ಕಾಯ್ದೆ ಸೆಕ್ಷನ್ ಗಳನ್ನ ಹಾಕಲಾಗಿದೆ.
ಆದರೆ ವಿಕ್ರಂ ಗೌಡನ ಎನ್ಕೌಂಟರ್ ನಲ್ಲಿ ನಾಗರೀಕರಿಗೆ ಕಾಡುವ ಪ್ರಶ್ನೆಗಳು
ಹಿಂದೆಲ್ಲಾ ಎನ್ಕೌಂಟರ್ ಗಳಾದ ಘಟನಾ ಸ್ಥಳಕ್ಕೆ ಪತ್ರಕರ್ತರನ್ನು ಮುಕ್ತವಾಗಿ ಬಿಡಲಾಗುತ್ತಿತ್ತು. ಪತ್ರಕರ್ತರು ದಾಳಿ ಪ್ರತಿದಾಳಿಯ ಸನ್ನಿವೇಶ ಅವಲೋಕಿಸಿ ತನಿಖಾ ವರದಿ ಪ್ರಕಟಿಸಿದ್ದರು. ಆದರೆ ಹೊಸದಾಗಿ ಜಾರಿಯಾಗಿರುವ ಬಿ.ಎನ್.ಎಸ್ ಕಾಯ್ದೆಯನ್ನು ಮುಂದಿಟ್ಟುಕೊಂಡು, ಪೊಲೀಸರು ವಿಕ್ರಂಗೌಡ ಹತ್ಯೆಯಾದ ಸ್ಥಳಕ್ಕೆ ಯಾವ ಮಾದ್ಯಮಗಳನ್ನು ಬಿಡಲಿಲ್ಲ.
ವಿಕ್ರಂಗೌಡ ಹತ್ಯೆಯಾದ 500 ಮೀಟರ್ ದೂರದಲ್ಲೆ ಪತ್ರಕರ್ತರನ್ನು ನಿರ್ಭಂದಿಸಲಾಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ರೂಪರವರ ಹೇಳಿಕೆಯನ್ನೇ ವರದಿ ಮಾಡಬೇಕಾಯಿತು. ಘಟನೆ ನಡೆದು ನಾಲ್ಕು ದಿನಗಳ ನಂತರ ವಿಕ್ರಗೌಡ ಹತ್ಯೆಯಾದ ಪೀತಬೈಲಿನ ಮನೆಗೆ ಹೋದಾಗ ಪೊಲೀಸ್ ಕ್ರೈಂ ಸೀನ್ ಟೇಪ್ ಹೊರತು ಪಡಿಸಿ ಮತ್ತೆನು ಕಾಣಸಿಗಲಿಲ್ಲ. ಮನೆಯಲ್ಲಿದ್ದ ಜನರು ಕಾಣಸಿಗಲಿಲ್ಲ. ಸ್ಥಳದಲ್ಲಿದ್ದ ಎ.ಎನ್.ಫ್ ಸಿಬ್ಬಂದಿ ಮಾತೇ ಆಡಲಿಲ್ಲ. ಕ್ರೈಂ ಸೀನ್ ನೋಡಿದಾಗ ಮನೆಯ ಮುಂಭಾಗದ ನೆಲದಲ್ಲಿ ಅಗೆದ ಹಾಗೆ ಇತ್ತು. ಇದು ಬುಲೆಟ್ ಮಾರ್ಕ್ ಇರಬಹುದು. ಮನೆ ಮುಂದೆ ಹಾಕಿದ್ದ ಹಸಿರು ಮೆಷ್ ಚೌಕಾಕಾರದಲ್ಲಿ ಕಟ್ ಮಾಡಲಾಗಿತ್ತು. ಇಲ್ಲಿ ನಕ್ಸಲರು ಇದ್ದರೋ ಅಥವಾ ಪೊಲೀಸರು ಇದ್ರೋ ಗೊತ್ತಿಲ್ಲ. ದೂರಿನಲ್ಲಿ ಅಧಿಕಾರಿಯವರು ತಿಳಿಸಿದಂತೆ ನಕ್ಸಲರು ಕಾಡಿನಿಂದ ಬರುವಾಗ ಶರಣಾಗುವಂತೆ ತಿಳಿಸಿದ್ದರು ಎನ್ನಲಾಗಿದೆ. ನಕ್ಸಲರು ಆಗ ಪೀತಬೈಲಿನ ಜಯಂತ್ ಗೌಡ ಮನೆ ಅಂಗಳದಲ್ಲಿದ್ದನೋ ಇದ್ದರೋ ಕಾಡಿನಲ್ಲಿ ಇದ್ದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿಕ್ರಂ ಗೌಡನ ಸಾವನ್ನಪ್ಪಿರುವುದು ಪೀತ ಬೈಲಿನ ಜಯಂತ್ ಗೌಡರ ಮನೆಯಂಗಳದಲ್ಲಿ.
ವಿಕ್ರಂಗೌಡ ಸೇರಿದಂತೆ ಇದ್ದ ನಕ್ಸಲರ ತಂಡ ಎಷ್ಟು ಸುತ್ತು ಫೈರ್ ಮಾಡಿತು..? ಫೈರ್ ಆದ ಬುಲೆಟ್ ಮಾರ್ಕ್ ಗಳು ಯಾವ ಗೋಡೆ, ಮರಗಳಿಗೆ ಹೊಕ್ಕಿದೆ.? ನಕ್ಸಲರು ಹಾರಿಸಿದ ಗುಂಡಿಗೆ ಸಿಬ್ಬಂದಿಗಳಿಗೇನಾದರೂ ಗಾಯಗಳಾಯ್ತ.? .ನಕ್ಸಲರ ದಾಳಿಯ ನಿಖರತೆಯ ಸ್ಪಷ್ಟತೆಯನ್ನು ಪೊಲೀಸರು ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಬಹುದು..ಜಯಂತ್ ಗೌಡರ ಮನೆಯಂಗಳದ ಹಸಿರು ಮೆಶ್ ಸಣ್ಣ ಚೌಕಾಕಾರದಲ್ಲಿ ಕಟ್ ಮಾಡಿದಂತಿದೆ. ಇದು ಆಂಬುಷ್ ನಲ್ಲಿರುವ ಸೀನ್ ಆಗಿ ಗೋಚರಿಸುತ್ತಿದೆ. ಹಸಿರು ಮೆಶ್ ಕಟ್ ಮಾಡಿದ ತೂತದಿಂದಲೇ ಶತ್ರುವನ್ನು ಹೊಡೆಯಲು ಹೊಂಚು ಹಾಕಲಾಗಿತ್ತಾ… ಸ್ಥಳದಲ್ಲಿ ಪೊಲೀಸರಿದ್ರಾ..ಅಥವಾ ಸೆಂಟ್ರಿಯಾಗಿ ನಕ್ಸಲರು ಇದ್ದರಾ…ಇದರ ಬಗ್ಗೆ ಸ್ಪಷ್ಟತೆ ಇಲ್ಲ. ʼ
ನಕ್ಸಲರ ದಾಳಿಗೆ ಪ್ರತಿಯಾಗಿ ಎ.ಎನ್ ಎಫ್ ಸಿಬ್ಬಂದಿ ಎಷ್ಟು ಸುತ್ತು ಫೈರ್ ಮಾಡಿದ್ರು, ? ವಿಕ್ರಂ ಗೌಡ ಜಯಂತ್ ಗೌಡರ ಮನೆಯಂಗಳದಲ್ಲೇ ಕುಸಿದುಬಿದ್ದಾಗ, ಆ ಮನೆಗೂ ಹೆಚ್ಚಿನ ಹಾನಿಯಾಗಿರಬೇಕಲ್ಲವೇ?
ಪೊಲೀಸ್ ಫೈರ್ ಗೆ ವಿಕ್ರಂ ಗೌಡ ಸಾವನ್ನಪ್ಪಿದ್ದ. ಉಳಿದ ನಕ್ಸಲರಿಗೆ ಗಾಯಗಳಾದ್ವಾ.? ವಿಕ್ರಂ ಗೌಡ ಪೀತಬೈಲಿನ ಆ ಮನೆಗೆ ಬಂದಾಗ,ಪೊಲೀಸರು ಗಂಡು ಹಾರಿಸಿದ್ದೇ ಆದಲ್ಲಿ ಮನೆಯಲ್ಲಿದ್ದವರಿಗೆ ಗಾಯಗಳಾಗಬೇಕಿತ್ತು. ಇಲ್ಲವೇ ಮನೆಗೆ ಹೆಚ್ಚು ಹಾನಿಯಾಗಬೇಕಿತ್ತು. ಎ.ಕೆ 47 ಗನ್ ನಿಂದ ಸಿಡಿಯುವ ಮದ್ದುಗಳು,ಮನೆಗೆ ದೊಡ್ಡ ಮಟ್ಟದ ಘಾಸಿಯನ್ನೇ ಮಾಡುತ್ತೆ. ಆದರೆ ಆ ರೀತಿಯ ಕುರುಹುಗಳು ಜಯಂತ್ ಗೌಡರ ಮನೆಯ ಕ್ರೈಂ ಸೀನ್ ನ ಸ್ಥಳದಲ್ಲಿ ಕಾಣಲಿಲ್ಲ. ಘಟನೆ ನಡೆದ ನಂತರ ಪೊಲೀಸರು ಸಂಪೂರ್ಣ ಮಹಜರ್ ನಡೆಸಿ, ನ್ಯಾಯಾಲಯಕ್ಕೆ ಸಾಕ್ಷಿ ಸಮೇತ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸುವ ಸಂದರ್ಭದಲ್ಲಿ ಈ ಅನುಮಾನಗಳಿಗೆ ಖಂಡಿತ ತೆರೆ ಎಳೆಯುತ್ತಾರೆ ಎಂಬುದು ಸ್ಪಷ್ಟ.ಯಾಕೆಂದರೆ ತನಿಖಾ ಹಂತದಲ್ಲಿರುವಾಗ ಏನ್ನನ್ನು ಹೇಳುವುದಿಲ್ಲ ಎಂದು ಆಂತರಿಕ ಭದ್ರತೆ ಐಜಿಪಿ ರೂಪ ಮೌಜ್ಗಿಲ್ ಹೇಳಿದ್ದಾರೆ.
ಆದರೆ 18-11-24 ರ ಸಂಜೆ ಆರು ಗಂಟೆಗೆ ಯಾವ ಗುಂಡಿನ ಸದ್ದು ಕೇಳಲಿಲ್ಲ ಎಂದು ಕೆಲವು ಸ್ಥಳೀಯರು ಹೇಳಿದ್ದು, ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ. ಒಂದು ಗುಂಡುಸೂಜಿ ಬಿದ್ದರೂ ಸದ್ದು ಕೇಳುವ ಆ ಕಾಡಿನ ಕಡು ಮೌನದ ಪರಿಸರದಲ್ಲಿ ಅಂದು ಸಂಜೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿದೆ. ಆದರೆ ಸುತ್ತಮುತ್ತಲ ಗ್ರಾಮಸ್ಥರಿಗೆ ಸದ್ದು ಕೇಳಲೇ ಇಲ್ಲ ಎಂಬುದಾದೆ.ಅದು ತರ್ಕಕ್ಕೆ ನಿಲುಕ್ಕದ್ದು ಎಂಬುದು ಮಾತ್ರ ಸತ್ಯ..ಮಾನವ ಹಕ್ಕುಗಳ ಸಂಸ್ಥೆ, ಸೇರಿದಂತೆ ಪ್ರಗತಿಪರ ಸಂಸ್ಥೆಗಳು ಎತ್ತಿರುವ ಅನುಮಾನಗಳಿಗೆ ಪೊಲೀಸರು ಸಲ್ಲಿಸಲಿರುವ ಅಂತಿಮ ದೋಷಾರೋಪ ಪಟ್ಟಿ ತೆರೆ ಎಳೆಯಬಲ್ಲದೇ ಎಂಬುದನ್ನು ಕಾದು ನೋಡಬೇಕಿದೆ.
SUMMARY | JP writes about the encounter of Naxal Vikram Gowda at Peethbail in Hebri
KEY WORDS | JP writes , encounter of Naxal Vikram Gowda ,Peethbail in Hebri