SHIVAMOGGA| MALENADUTODAY NEWS | ಮಲೆನಾಡು ಟುಡೆ Apr 2, 2025
ರಂಜಾನ್ ಹಬ್ಬದ ಪ್ರಾರ್ಥನೆ ಮುಗಿದ ಬಳಿಕ ಡಿಸಿ ಆಫೀಸ್ ಎದುರು ಇರುವ ಖಾಲಿಜಾಗಕ್ಕೆ ಬೇಲಿ ಬಿದ್ದಿರುವುದು ಶಿವಮೊಗ್ಗ ನಗರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ತೀವ್ರ ವಿವಾದಕ್ಕೆ ಒಳಗಾದ ಬೆನ್ನಲ್ಲೆ, ಮೊನ್ನೆ ರಾತ್ರಿ ಬಿದ್ದ ಬೇಲಿಯನ್ನು ನಿನ್ನೆ ರಾತ್ರಿ ಶಿವಮೊಗ್ಗ ಪೊಲೀಸ್ ಇಲಾಖೆಯ ಬಂದೋಬಸ್ತ್ನಲ್ಲಿ ಪಾಲಿಕೆಯ ಸಿಬ್ಬಂದಿ ತೆರವುಗೊಳಿಸಿದರು.
ಅಲ್ಲದೆ ಮುನ್ನೆಚರಿಕೆ ಕ್ರಮವಾಗಿ ಬೇಲಿ ಹಾಕಿದ ಜಾಗದಲ್ಲಿ ಬ್ಯಾರಿಕೇಡ್ಗಳನ್ನು ನಿಲ್ಲಿಸಲಾಗಿದೆ. ಅಲ್ಲದೆ ಯಾವುದೇ ಘಟನೆಗೆ ಆಸ್ಪದವಾಗದಂತೆ, ಮೈದಾನವನ್ನು ಸಂಪರ್ಕಿಸುವ ರಸ್ತೆಗಳನ್ನು ಬ್ಯಾರಿಕೇಡ್ ಬಳಸಿ ಬಂದ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಮಾನಿಟರ್ ನಡೆಸ್ತಿದ್ದಾರೆ.
ವಿಶೇಷ ಅಂದರೆ ಬೇಲಿ ತೆರವು ಕಾರ್ಯಾಚರಣೆ ವೇಳೆ ಈ ಭಾಗದ ಸುತ್ತಮುತ್ತ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅಲ್ಲದೆ ಬೀದಿ ದೀಪಗಳನ್ನು ಆರಿಸಲಾಗಿತ್ತು. ಇತ್ತ ಆಹಾರ ಉತ್ಪನ್ನಗಳ ಅಂಗಡಿಗಳು ಸೇರಿದಂತೆ ಈ ಭಾಗದ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಗಿದ್ದು, ನಿನ್ನೆ ದಿನವಿಡಿ ಈ ಬಾಗದ ವ್ಯಾಪಾರಸ್ಥರು ನಷ್ಟ ಅನುಭವಿಸಿದರು
.
ಇಷ್ಟಕ್ಕೂ ನಡೆದಿದ್ದೇನು?
ರಂಜಾನ್ ಹಬ್ಬದ ಪ್ರಾರ್ಥನೆ ಮುಗಿದ ಬಳಿಕ, ಪ್ರಾರ್ಥನೆ ನಡೆದ ಮೈದಾನದ ಜಾಗದ ಒಂದು ಬದಿಯಲ್ಲಿ ಬೇಲಿ ಹಾಕಲಾಗಿತ್ತು. ಬೇಲಿ ಹಾಕಿದ್ದು ಯಾರು? ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲವಾ? ಈ ವಿಚಾರದಲ್ಲಿ ಪೊಲೀಸರು ಗುಪ್ತ ಮಾಹಿತಿ ಪಡೆಯುವಲ್ಲಿ ವಿಫಲರಾದರೆ? ಎಂಬುದು ಪ್ರಶ್ನಾರ್ತಕ? ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಆದರೆ, ಮೈದಾನಕ್ಕೆ ವಾಹನಗಳು ಪ್ರವೇಶಿಸುವ ಭಾಗದಲ್ಲಿ ಬೇಲಿ ಬಿದ್ದಿದ್ದು ವಿವಾದಕ್ಕೆ ಕಾರಣವಾಗಿತ್ತು. ನಿನ್ನೆದಿನ ಹಿಂದೂಪರ ಸಂಘಟನೆಗಳು ಪ್ರಶ್ನೆ ಮಾಡಿದವು. ಅಲ್ಲದೆ ಸ್ಥಳದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಸಮಾಧಾನ ಪಡಿಸಲು ಯತ್ನಿಸದರು. ಆದರೆ ಸಂಘಟನೆ ಕಾರ್ಯಕರ್ತರು, ಬೇಲಿ ತೆಗೆಯುವಂತೆ ಡೆಡ್ಲೈನ್ ನೀಡಿದರು.
ಎಸ್ಪಿ ಎಂಟ್ರಿ!
ವಿಚಾರ ತಿಳಿದು ಸ್ಥಳಕ್ಕೆ ಬಂದ ಎಸ್ಪಿ ಮಿಥುನ್ ಕುಮಾರ್ ಪ್ರತಿಭಟನಾಕಾರರಿಗೆ ಸಂಜೆಯೊಳಗೆ ಬೇಲಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸಂಘಟನೆ ಸದಸ್ಯರು ಕೈ ಬಿಟ್ಟರು. ಇನ್ನೂ ಪೊಲೀಸರು ಕತ್ತಲಾಗುತ್ತಿದ್ದಂತೆ, ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಂಡು ಬೇಲಿಯನ್ನು ತೆಗೆಸಿದರು.
ವ್ಯಾಪಾರಿಗಳ ಆಕ್ರೋಶ
ಇನ್ನೂ ಬೇಲಿಗೂಟದ ಪ್ರಕರಣದಿಂದಾಗಿ ಈ ಭಾಗದಲ್ಲಿ ದಿನವಡಿ ನಡೆಯಬೇಕಿದ್ದ ಲಕ್ಷಾಂತರ ರೂಪಾಯಿ ಪುಡ್ ಬ್ಯುಸಿನೆಸ್ಗೆ ನಷ್ಟ ಉಂಟಾಗಿತ್ತು. ಧರ್ಮಾತೀತವಾಗಿ ವ್ಯಾಪಾರಸ್ಥರು ನಡೆದ ಘಟನೆಯನ್ನು ವಿರೋಧಿಸಿದರಷ್ಟೆ ಅಲ್ಲದೆ ನಮ್ಮ ಪಾಡಿಗೆ ದುಡಿಮೆಗೆ ಬಿಟ್ಟುಬಿಡಿ, ಅಂಗಡಿಗಳನ್ನು ಮುಚ್ಚಿಸುವುದರಿಂದ ದಿನದ ವಹಿವಾಟಿಗೆ ಸಮಸ್ಯೆಯಾಗಲಿದೆ, ದಿನದ ದುಡಿಮೆಯ ಮುಂದೆ ವಿವಾದಗಳು ಅಗತ್ಯವಿಲ್ಲ ಎನ್ನುತ್ತಿದ್ದರು.