SHIVAMOGGA| MALENADUTODAY NEWS | ಮಲೆನಾಡು ಟುಡೆ Apr 2, 2025
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದ ಕಳ್ಳತನ ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ. ಘಟನೆಯಲ್ಲಿ ಇಲ್ಲಿನ ಪಟ್ಟಣದ ಚನ್ನಕೇಶವ ನಗರದಲ್ಲಿನ ನಾಲ್ಕು ಮನೆಗಳಲ್ಲಿ ಕಳವು ನಡೆದಿದೆ. ಆರೋಪಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ, ನಗದು ಕಳ್ಳತನ ಮಾಡಿದ್ದಾರೆ.
ಈ ಚನ್ನಕೇಶವ ನಗರದ 15ನೇ ಕ್ರಾಸ್ ನಿವಾಸಿ ನಂದ ಬಣಕಾರ್ ಅವರು ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ತೆರಳಿದ್ದರು. ಸೋಮವಾರ ರಾತ್ರಿ ಕಳ್ಳರು ಮನೆ ಬಾಗಿಲು ಮುರಿದು ಕಳ್ತನ ಮಾಡಿದ್ದಾರೆ.
ಮನೆಯಲ್ಲಿದ್ದ ಮಾಂಗಲ್ಯ ಸರ ಸೇರಿದಂತೆ ಅಂದಾಜು ₹14 ಲಕ್ಷ ಮೌಲ್ಯದ 23 ಒಡವೆಗಳು ಹಾಗೂ ₹50 ಸಾವಿರ ನಗದು ಕಳವು ಮಾಡಿದ್ದಾರೆ. ಇವರ ಮನೆಯ ಬಳಿಕ ಕೇರಿಯಲ್ಲಿರುವ ಮೆಸ್ಕಾಂ ಲೈನ್‌ಮನ್ ಹಾಲೇಶಪ್ಪ ಅವರ ಮನೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಅಲ್ಲದೆ ಚನ್ನಕೇಶವ ನಗರದ ತಿಪ್ಪೇಶಪ್ಪ ಹಾಗೂ ವೆಂಕಟೇಶ್ ಅವರ ಮನೆಯಲ್ಲೂ ಕಳ್ಳತನವಾಗಿದೆ.
ಕೈಗೆ ಸಿಗದ ಆರೋಪಿಗಳು
ಇನ್ನೂ ಲೈನ್ಮೆನ್ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಗಳು ಹೊರಕ್ಕೆ ಬಂದಾಗ ಪಕ್ಕದ ಮನೆಯವರು ನೋಡಿ ಅವರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಕಳ್ಳರು ಎಸ್ಕೇಪ್ ಆಗಿದ್ದು, ಒಂದು ಚೀಲ ಅಲ್ಲಿಯೇ ಬಿಟ್ಟು ಹೋಗಿದ್ದರು. ಅದರಲ್ಲಿ ಬೆಳ್ಳಿ ವಸ್ತುಗಳಿದ್ದವು. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸ್ತಿದ್ದಾರೆ.