SHIVAMOGGA| MALENADUTODAY NEWS | ಮಲೆನಾಡು ಟುಡೆ Mar 16, 2025
ಮೈಸೂರು ಜಿಲ್ಲೆಯ ದುರಂತವೊಂದು ಸಂಭವಿಸಿದೆ. ಮನೆಯಲ್ಲಿನ ದನ ಕರು ಹಾಕಿದರೆ, ಇತ್ತ ಮನೆಯಲ್ಲಿನ ಹಿರಿಯ ಹಾಗೂ ಇಬ್ಬರು ಕಿರಿಯ ಸದಸ್ಯರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದ ಹಳೆತಿರಮಕೂಡಲು ಸಮೀಪದ ಕಾವೇರಿ ನದಿಯಲ್ಲಿ ಘಟನೆ ಸಂಭವಿಸಿದೆ. ಇಲ್ಲಿನ ಹಳೆ ಸೇತುವೆ ಬಳಿ ನಿನ್ನೆ ಶನಿವಾರ ಮಧ್ಯಾಹ್ನ ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ಹಾಗೂ ಅಜ್ಜ ಮೃತಪಟ್ಟಿದ್ದಾರೆ. ಹಳೇತಿರಮಕೂಡಲಿನ ನಿವಾಸಿಗಳಾದ ಚೌಡಯ್ಯ (65), ಭರತ್ ಗೌಡ (11) ಧನುಷ್ ಗೌಡ (9) ಮೃತ ದುರ್ದೈವಿಗಳು
ನಡೆದಿದ್ದೇನು?
ಇವರ ಮನೆಯಲ್ಲಿ ಸಾಕಿದ್ದ ಹಸುವೊಂದು ಕರು ಹಾಕಿತ್ತು. ಕರು ಹಾಕಿದ ಬಳಿಕ ಬೀಳುವ ಕಸವನ್ನು ನದಿಯಲ್ಲಿ ಹಾಕಿ ಬರಲು ಚೌಡಯ್ಯ ತೆರಳಿದ್ದರು. ಅವರೊಂದಿಗೆ ಮೊಮ್ಮಕ್ಕಳು ಸಹ ತೆರಳಿದ್ದರು. ಈ ನಡುವೆ ಮಕ್ಕಳು ನೀರಿನಲ್ಲಿ ಮುಳುಗಲು ಆರಂಭಿಸಿದ್ದಾರೆ. ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಮೊಮ್ಮಕ್ಕಳನ್ನು ಕಾಪಾಡಲು ವೃದ್ಧರು ಸಹ ನೀರಿಗೆ ಇಳಿದಿದ್ದು ಮೂವರು ಸಹ ಮೇಲೆ ಬರಲಾಗದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಟಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.