ಶಿವಮೊಗ್ಗ : ಶಿವಮೊಗ್ಗ ಸಮೀಪದ ಪುರದಾಳು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳು ನಾಶವಾಗುತ್ತಿವೆ. ನಿನ್ನೆ ತಡರಾತ್ರಿ ಗ್ರಾಮಕ್ಕೆ ನುಗ್ಗಿದ ಆನೆಗಳ ಹಿಂಡು ವಸಂತ್ ಕುಮಾರ್, ಅನಂತಪ್ಪ, ವೀರಪ್ಪ ಮತ್ತು ಚಂದ್ರಮ್ಮ ಎಂಬುವವರಿಗೆ ಸೇರಿದ ಅಡಿಕೆ ತೋಟಗಳ ಮೇಲೆ ದಾಳಿ ನಡೆಸಿವೆ. ಈ ರ ದಾಳಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಅಡಿಕೆ ಮರಗಳು ಹಾಗೂ ಬಾಳೆ ಗಿಡಗಳು ನೆಲಸಮವಾಗಿವೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಆನೆಗಳ ಸಂಚಾರ ನಿರಂತರವಾಗಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲ-ಸೂಲ ಮಾಡಿ ಬೆಳೆಸಿದ ಅಡಿಕೆ ಮರಗಳು ಕಣ್ಣೆದುರೇ ನಾಶವಾಗುತ್ತಿರುವುದನ್ನು ಕಂಡು ರೈತರು ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಾಡಾನೆಗಳ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದು ಗ್ರಾಮಸ್ಥರ ದೂರು.
ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಎಸ್ ಹೆಬ್ಬೂರ್ ಮಾತನಾಡಿ, ಕಾಡಾನೆಗಳ ದಾಳಿಯಿಂದ ರೈತರು ಆರ್ಥಿಕವಾಗಿ ಹೈರಾಣಾಗಿದ್ದಾರೆ. ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಪುರದಾಳು ಭಾಗದಲ್ಲಿ ಸೋಲಾರ್ ಫೆನ್ಸಿಂಗ್ (ಸೌರ ಬೇಲಿ) ಅಳವಡಿಸಬೇಕು. ಜೊತೆಗೆ ಬೆಳೆ ಕಳೆದುಕೊಂಡ ರೈತರಿಗೆ ವೈಜ್ಞಾನಿಕವಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
