ವಿನೋಬನಗರ ಪೊಲೀಸರಿಂದ ಬೆಂಗಳೂರಲ್ಲಿ ನಟಿಯ ಬಂಧನ! ಏನಿದು ಶಿವಮೊಗ್ಗ ಕೋರ್ಟ್ ಕೇಸ್? ನಡೆದಿದ್ದೇನು?

Vinobanagar police arrests actress in Bengaluru What is shivamogga court case? What happened?

ವಿನೋಬನಗರ  ಪೊಲೀಸರಿಂದ ಬೆಂಗಳೂರಲ್ಲಿ ನಟಿಯ ಬಂಧನ!  ಏನಿದು ಶಿವಮೊಗ್ಗ ಕೋರ್ಟ್ ಕೇಸ್? ನಡೆದಿದ್ದೇನು?

KARNATAKA NEWS/ ONLINE / Malenadu today/ Jun 17, 2023 SHIVAMOGGA NEWS

ಶಿವಮೊಗ್ಗ ನಗರದ ವಿನೋಬ ನಗರ ಪೊಲೀಸರು ನಿನ್ನೆ ಬೆಂಗಳೂರು ಮೂಲದ ನಟಿಯೊಬ್ಬರನ್ನ ಅರೆಸ್ಟ್ ಮಾಡಿಕೊಂಡು ಶಿವಮೊಗ್ಗಕ್ಕೆ ಕರೆತಂದಿದ್ದರು. ಮೆಗ್ಗಾನ್​ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿ,  ಶಿವಮೊಗ್ಗದ 3ನೇ ಜೆಎಂಎಫ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಕುತೂಹಲ ಮೂಡಿಸಿದ್ದ ಪ್ರಕರಣದಲ್ಲಿ ಇಷ್ಟಕ್ಕೂ ನಡೆದಿದ್ದೇನೆ ಎಂಬುದನ್ನ ನೋಡುವುದಾದರೆ, ಬೆಂಗಳೂರು ಮೂಲದ ನಟಿ ಕೋರ್ಟ್ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದು ಅವರ ಬಂಧನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. 

ಇಷ್ಟಕ್ಕೂ ಏನಿದು ಪ್ರಕರಣ!

ಉಷಾ ರವಿಶಂಕರ್ ಎಂಬವರ ವಿರುದ್ಧ ಶರವಣನ್​ ಎಂಬವರು ನಾಲ್ಕು ತಿಂಗಳ ಹಿಂದೆ ವಂಚನೆ ದೂರು ದಾಖಲಿಸಿದ್ದರು. ಪೊಲೀಸರು ದೂರು ದಾಖಲಿಸದಿದ್ದಾಗ, ಶರವಣನ್​ ಶಿವಮೊಗ್ಗ ಕೋರ್ಟ್​ನಲ್ಲಿ ಖಾಸಗಿ ಪಿಸಿಆರ್ ಸಲ್ಲಿಸಿದ್ದರು. ಈ  ಪಿಸಿಆರ್​ ವಿಚಾರಣೆ ವೇಳೆ ಉಷಾರವರಿಗೆ ಹಲವು ಸಮನ್ಸ್​ ನೀಡಲಾಗಿತ್ತು. ವಾಟ್ಸ್ಯಾಪ್​ ಮೂಲಕವೂ ಸಮನ್ಸ್​ ಕಳುಹಿಸಲಾಗಿತ್ತು. 

ಆದರೆ ಉಷಾರವರು ಸಮನ್ಸ್​ಗೆ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ  ಕೋರ್ಟ್​ ನಾನ್ ಬೇಲಬಲ್ ಅರೆಸ್ಟ್​ ವಾರಂಟ್ ಜಾರಿ ಮಾಡಿತ್ತು. ಅಂದರೆ, ಶಿವಮೊಗ್ಗ ವಿನೋಬನಗರ ಪೊಲೀಸರಿಗೆ ಉಷಾರನ್ನ ಕೋರ್ಟ್​ ಮುಂದೆ ಕರೆತಂದು ನಿಲ್ಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಿಂದ ಉಷಾರನ್ನ ಅರೆಸ್ಟ್ ಮಾಡಿ ಕರೆತಂದು ಮ್ಯಾಜಿಸ್ಟ್ರೇಟ್ ಮುಂದೆ ಪೊಲೀಸರು ಹಾಜರುಪಡಿಸಿದ್ದರು. 

ವಂಚನೆ ಆರೋಪದಲ್ಲಿ ಏನಿದೆ?

ದೂರುದಾರ ಶರವಣನ್​ ಸಹ ಸಹನಟರಾಗಿದ್ದು, ಉಷಾರ ಜೊತೆ ಸ್ನೇಹ ಬೆಳಸಿದ್ದರು. ಈ ಮಧ್ಯೆ ಮದುವೆ ಮಾತುಕತೆಗಳು ಇಬ್ಬರ ನಡುವೆ ನಡೆದಿದೆ. ಆನಂತರ, ಉಷಾರವರು, ಶರವಣನ್​ರಿಂದ ನಿರ್ದಿಷ್ಟ ಮೊತ್ತದ ಹಣ ಪಡೆದಿದ್ದರಂತೆ. ಅದನ್ನ ವಾಪಸ್​ ಕೊಡದೇ ವಂಚನೆ ಮಾಡಿದ್ದಾರೆ ಎಂಬುದು ಶರವಣನ್​ ಆರೋಪ. 2022 ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಶರವಣನ್​ ಪರ ವಕೀಲರು ಕೋರ್ಟ್​ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಐಪಿಸಿ 417, 418, 419, 420 ಅಡಿಯಲ್ಲಿ ದಾಖಲಾದ ದೂರಿನಲ್ಲಿ, ಕೋರ್ಟ್ ಉಷಾರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. 

ಉಷಾರಿಗೆ ಜಾಮೀನು

ಇನ್ನು ನಿನ್ನೆ ಮ್ಯಾಜಿಸ್ಟ್ರೇಟ್​​ ಮುಂದೆ ನಟಿಯವರನ್ನ ಹಾಜರುಪಡಿಸಿದ ಬೆನ್ನಲ್ಲೆ ಅವರಿಗೆ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಕೋರ್ಟ್ ಮೆಟ್ಟಿಲೇರಿರುವ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ನಟಿಯನ್ನು ಪೊಲೀಸರು ಬಂಧಿಸಿದ್ದರು. ಆನಂತರ ಕೋರ್ಟ್​ ನಟಿಯವರಿಗೆ ಜಾಮೀನು ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದೆ.