ಮದುವೆ ದಿನ ವಧುವಿಗೆ ಭೀಕರ ಅಪಘಾತ: ಐಸಿಯುನಲ್ಲಿ ವರ ಮಾಡಿದ್ದೇನು 

prathapa thirthahalli
Prathapa thirthahalli - content producer

ಕೇರಳ, ಕೊಟ್ಟಾಯಂ: ಹಿರಿಯರು ಹೇಳಿದ ಹಾಗೆ, ಯಾವ ಹುಡುಗನ ಅಥವಾ ಹುಡುಗಿಯ ಹಣೆಯಲ್ಲಿ ಯಾರ ಹೆಸರಿರುತ್ತದೆಯೋ ಅವರನ್ನೇ ಮದುವೆ ಆಗುತ್ತಾರೆ. ಆ ವಿವಾಹವನ್ನು ಯಾವುದೇ ಶಕ್ತಿಯಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂಬುದಕ್ಕೆ ಕೇರಳದ ಕೊಟ್ಟಾಯಂನಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ನಿದರ್ಶನವಾಗಿದೆ. ಮದುವೆ ಮುಹೂರ್ತಕ್ಕೆ ಕೆಲವೇ ಗಂಟೆಗಳ ಮೊದಲು ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಐಸಿಯುಗೆ ದಾಖಲಾಗಿದ್ದ ವಧುವಿನ ಕೊರಳಿಗೆ, ವರನು ಆಸ್ಪತ್ರೆಯ  ಐಸಿಯು ಘಟಕದಲ್ಲೇ ತಾಳಿ ಕಟ್ಟಿದ್ದಾನೆ.

True Love Wins Groom Marries Bride Inside ICU
True Love Wins Groom Marries Bride Inside ICU

True Love Wins: ವಿವಾಹಕ್ಕೆ ಕೆಲವೇ ಗಂಟೆಗಳ ಮೊದಲು ನಡೆದ ಅಪಘಾತ

ಆಲಪ್ಪುಳಂ ನಿವಾಸಿಗಳಾದ ಶರೋನ್ ಮತ್ತು ಅವನಿ ಅವರ ವಿವಾಹವು ನವೆಂಬರ್ 21 ರಂದು ಶುಕ್ರವಾರದಂದು ನಿಗದಿಯಾಗಿತ್ತು. ಅದರಂತೆ, ಮುಹೂರ್ತಕ್ಕೂ ಮುನ್ನ ಮೇಕಪ್ ಮಾಡಿಸಿಕೊಳ್ಳಲು ವಧು ಅವನಿ ಅವರು ತಮ್ಮ ಕುಟುಂಬದವರೊಂದಿಗೆ ಆಲಪ್ಪುಳದ ಕುಮಾರಕೋಮ್‌ಗೆ ಕಾರಿನಲ್ಲಿ ತೆರಳಿದ್ದರು. ದುರಾದೃಷ್ಟವಶಾತ್, ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರವೊಂದಕ್ಕೆ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ.ಈ ಭೀಕರ ರಸ್ತೆ ಅಪಘಾತದಲ್ಲಿ ವಧು ಅವನಿ ಅವರ ಬೆನ್ನು ಮೂಳೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.

ಸ್ಥಳೀಯ ನಿವಾಸಿಗಳು ಕೂಡಲೇ ಗಾಯಗೊಂಡವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆದರೆ, ಗಾಯದ ತೀವ್ರತೆ ಹೆಚ್ಚಿದ್ದ ಕಾರಣ, ವಿಶೇಷ ಚಿಕಿತ್ಸೆಗಾಗಿ ಅವರನ್ನು ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮದುವೆಯನ್ನು ಶುಕ್ರವಾರ ಮಧ್ಯಾಹ್ನ ಅಲಪ್ಪುಳದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ನಿಗದಿತ ಮುಹೂರ್ತದ ಹೊತ್ತಿಗೆ ವರ ಶರೋನ್ ಮತ್ತು ಅವರ ಕುಟುಂಬದವರು ಆಸ್ಪತ್ರೆಗೆ ಧಾವಿಸಿ ಬಂದರು. ಐಸಿಯುನಲ್ಲಿ ಅವನಿ ಅವರ ಗಂಭೀರ ಸ್ಥಿತಿಯನ್ನು ತಿಳಿದ ನಂತರ, ಎರಡೂ ಕುಟುಂಬದ ಸದಸ್ಯರು, ವಿವಾಹದ ಶುಭ ಗಳಿಗೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು, ನಿಗದಿತ ಮುಹೂರ್ತದಲ್ಲೇ ಮದುವೆಯನ್ನು ನೆರವೇರಿಸಬೇಕು ಎಂದು ತೀರ್ಮಾನಿಸಿದರು. ಕುಟುಂಬ ಸದಸ್ಯರ ನಿರ್ಧಾರದ ನಂತರ, ಆಸ್ಪತ್ರೆಯ ಅಧಿಕಾರಿಗಳು ನರಶಸ್ತ್ರಚಿಕಿತ್ಸಾ ತಂಡದೊಂದಿಗೆ ಸಮಾಲೋಚಿಸಿ, ತುರ್ತು ವಿಭಾಗದ ಒಳಗೆಯೇ ಮದುವೆ ಸಮಾರಂಭವನ್ನು ನಡೆಸಲು ವಿಶೇಷ ವ್ಯವಸ್ಥೆ ಮಾಡಿದರು.

ಮಧ್ಯಾಹ್ನ 12.15 ರಿಂದ 12.30 ರ ನಡುವಿನ ಶುಭ ಮುಹೂರ್ತದಲ್ಲಿ, ವೈದ್ಯರು, ದಾದಿಯರು ಮತ್ತು ನಿಕಟ ಸಂಬಂಧಿಗಳ ಸಮ್ಮುಖದಲ್ಲಿ, ವರ ಶರೋನ್ ಅವರು ಸ್ಟ್ರೆಚರ್ ಮೇಲೆ ಮಲಗಿದ್ದ ಅವನಿ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡಿ, ಅವರನ್ನು ಕಾನೂನುಬದ್ಧವಾಗಿ ವಿವಾಹವಾದರು. ಈ ಭಾವನಾತ್ಮಕ ಕ್ಷಣ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣುಗಳಲ್ಲಿ ನೀರು ತರಿಸಿತು.

ಈ ಹಿಂದೆ ಮಹಾರಾಷ್ಟ್ರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಮದುವೆಯ ದಿನವೇ ಅಪಘಾತದಲ್ಲಿ ವಧು ತೀವ್ರ ಗಾಯಗೊಂಡಿದ್ದರೂ, ವರ ಆಕೆಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡು ಇತರ ಪ್ರೇಮಿಗಳಿಗೆ ಮಾದರಿಯಾಗಿದ್ದರು. ಆ ಘಟನೆಯು ಕನ್ನಡದಲ್ಲಿ ‘ಲವ್ ಯು ಮುದ್ದು’ ಎಂಬ ಚಿತ್ರವಾಗಿ ತೆರೆಕಂಡಿತ್ತು.

True Love Wins Groom Marries Bride Inside ICU

True Love Wins Groom Marries Bride Inside ICU
True Love Wins Groom Marries Bride Inside ICU
Share This Article