ತೀರ್ಥಹಳ್ಳಿ: ತಾಲೂಕಿನ ನಾಲೂರು ಸಮೀಪದ ತಿರುವಿನಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಕಬ್ಬಿಣದ ತಡೆಗೋಡೆಗೆ (ಡಿವೈಡರ್) ಡಿಕ್ಕಿ ಹೊಡೆದ ಪರಿಣಾಮ, ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಹೋಟೆಲ್ ಮಾಲೀಕರು ಹಾಗೂ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರ
ತೀರ್ಥಹಳ್ಳಿಯ ಹೋಟೆಲ್ ಒಂದರ ಮಾಲೀಕರಾದ ಸುದರ್ಶನ್ ಮತ್ತು ಕುಟುಂಬದವರು ಉಡುಪಿಯ ಹೆಬ್ರಿ ಸಮೀಪದ ಸಂಬಂಧಿಕರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಆಟೋದಲ್ಲಿ ಕುರುವಳ್ಳಿ ಮಾರ್ಗವಾಗಿ ವಾಪಸ್ ಆಗುತ್ತಿದ್ದಾಗ, ನಾಲೂರು ಬಳಿಯ ತಿರುವಿನಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಆಟೋ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮ ಆಟೋದ ಬಲ ಭಾಗದಲ್ಲಿ ಕುಳಿತಿದ್ದ ನಿಶ್ಮಿತಾ ಶೆಟ್ಟಿ (27) ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೋಟೆಲ್ ಮಾಲೀಕ ಸುದರ್ಶನ್ (35) ಮತ್ತು 7 ವರ್ಷದ ಮಗು ಸಂಚಿತ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Thirthahalli Young Woman Dies in Auto Accident


