ಯಾರು ಸೂಡಾ ಅಧ್ಯಕ್ಷರು? ಯಾರು ಮುಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರು? ಶಿವಮೊಗ್ಗದ ಪ್ರಮುಖ ಹುದ್ದೆಗಾಗಿ ಬೆಂಗಳೂರಿನಲ್ಲಿಯೇ ಜೋರು ಪೈಪೋಟಿ! ಟಿಕೆಟ್ ತಂತ್ರಗಾರಿಕೆ ಮತ್ತೆ ಗೆಲ್ಲುತ್ತಾ?

There is a strong competition in the party for the post of Shivamogga Congress district president and SUDA president.

ಯಾರು ಸೂಡಾ ಅಧ್ಯಕ್ಷರು? ಯಾರು ಮುಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರು? ಶಿವಮೊಗ್ಗದ  ಪ್ರಮುಖ ಹುದ್ದೆಗಾಗಿ ಬೆಂಗಳೂರಿನಲ್ಲಿಯೇ ಜೋರು ಪೈಪೋಟಿ! ಟಿಕೆಟ್ ತಂತ್ರಗಾರಿಕೆ ಮತ್ತೆ ಗೆಲ್ಲುತ್ತಾ?

KARNATAKA NEWS/ ONLINE / Malenadu today/ Jun 7, 2023 SHIVAMOGGA NEWS

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ನಲ್ಲೀಗ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಅದರಲ್ಲಿಯು ಮುಖ್ಯವಾಗಿ ಸೂಡಾ ಅಧ್ಯಕ್ಷ ಸ್ಥಾನದ ಮೇಲೆ  ಶಿವಮೊಗ್ಗ ನಗರದ ನಾಯಕರು ಕಣ್ಣು ನೆಟ್ಟಿದ್ದು, ಈ ಸ್ಥಾನ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. 

ಅಧ್ಯಕ್ಷ ಸ್ಥಾನಕ್ಕಾಗಿ ಬೆಂಗಳೂರಲ್ಲಿ ಲಾಬಿ!

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಸೂಕ್ತ ಸ್ಥಾನಮಾನ ಸಿಗುವ ನಿರೀಕ್ಷೆ ದೊಡ್ಡಮಟ್ಟದಲ್ಲಿದೆ. ಇದಕ್ಕಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಆಪ್ತ ವಲಯದ ಮೂಲಕ, ರಾಜ್ಯ ನಾಯಕರಿಗೆ ಒತ್ತಡ ಹೇರುವ ತಂತ್ರಗಾರಿಕೆ ಜೋರಾಗಿಯೇ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಕೆಲ ನಾಯಕರು ಕೂಡ ಬೆಂಗಳೂರಿನಲ್ಲಿದ್ದು, ಅಲ್ಲಿ ಕೆಪಿಸಿಸಿ ಅಧ್ಯಕ್ಷರು, ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ಸ್ವಜಾತಿಯ ಸಚಿವರನ್ನ ಕಂಡು ಹೀಗೀಗೆ ಇಂತದ್ದು ಆಗಬೇಕು ಎಂದು ಅಲವತ್ತುಕೊಳ್ಳುತ್ತಿದ್ದಾರಂತೆ. 

ಸೂಡಾ ಅಧ್ಯಕ್ಷ ಸ್ಥಾನಕ್ಕೆ ಹಲವರ ಲಾಭಿ

ಶಿವಮೊಗ್ಗ ನಗರ ಕಾಂಗ್ರೆಸ್ ತೆಕ್ಕೆಗೆ ಸಿಗಬಹುದಾದ ಪ್ರಮುಖ ಸ್ಥಾನಮಾನಗಳು ಎಂದರೆ, ಸೂಡಾ ಅಧ್ಯಕ್ಷ ಸ್ಥಾನ, ಜಿಲ್ಲಾ ಅಧ್ಯಕ್ಷ ಸ್ಥಾನ ಹಾಗೂ ಕಾಡಾ ಅಧ್ಯಕ್ಷ ಸ್ಥಾನ. ಈ ಪೈಕಿ ಕಾಡಾ ಅಧ್ಯಕ್ಷ ಸ್ಥಾನದ ಬಗ್ಗೆ ಹೆಚ್ಚು ಡಿಮ್ಯಾಂಡ್​ ಪ್ರದೇಶ ಕಾಂಗ್ರೆಸ್​ ಸಮಿತಿಯಲ್ಲಿ ಇಲ್ಲ. ಆದರೆ ಸೂಡಾ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಸಖತ್ ಬೇಡಿಕೆಯಿದ್ದು, ಹಲವರು ಅರ್ಜಿ ಗುಜರಾಯಿಸಿದ್ದಾರೆ. ಇನ್ನೂ ಹಲವರು ಅರ್ಜಿ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದಾರೆ. 

ಯಾರ್ಯಾರ ಹೆಸರು ಕೇಳಿಬರ್ತಿದೆ?

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಎಂಎಲ್​ಎ ಟಿಕೆಟ್​ಗಾಗಿ ಶಿವಮೊಗ್ಗ-ಬೆಂಗಳೂರು ಓಡಾಟ ನಡೆಸಿದ್ದ ಎಸ್​ಕೆ ಮರಿಯಪ್ಪ ಸೂಡಾ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ಕಾಂಗ್ರೆಸ್​ ವಲಯದಲ್ಲಿ ಒಡ್ಡುತ್ತಿದ್ದಾರೆ. ಇದೇ ಕಾರಣಕ್ಕೆ ನಗರಾಭಿವೃದ್ಧಿ ಸಚಿವರನ್ನು ಸಹ ಅವರು ಭೇಟಿಯಾಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿಲ್ಲಾಧ್ಯಕ್ಷ ಹೆಚ್​.ಹೆಸ್​.ಸುಂದರೇಶ್​ರವರು ಸೂಡಾ ಅಧ್ಯಕ್ಷ ಸ್ಥಾನದ ಬಗ್ಗೆ ಒಲವು ತೋರುತ್ತಿದ್ಧಾರೆ. ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮೂರು ಸ್ಥಾನಗಳು ಬಂದಿದೆ. ಈ ನಿಟ್ಟಿನಲ್ಲಿ ಸಂಘಟನಾತ್ಮಕ ಪ್ರಯತ್ನವಿದ್ದು, ಪ್ರತಿಫಲವಾಗಿ ಸೂಕ್ತ ಸ್ಥಾನಮಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ

ಇನ್ನೊಂದೆಡೆ ಬ್ಲಾಕ್​ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವಿಶ್ವನಾಥ್ ಕಾಶಿ ಸಹ ಅಧ್ಯಕ್ಷಗಿರಿಗೆ ಪ್ರಯತ್ನಿಸುತ್ತಿದ್ದಾರೆ. ಇವರ ಬೆಂಬಲಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೆಚ್​ಸಿ ಯೋಗೇಶ್​ ನಿಂತಿದ್ದು, ರಾಜ್ಯ ನಾಯಕರ ಬಳಿಯಲ್ಲಿ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿಯಿದೆ. ತಮ್ಮದೇ ತಂಡ ಕಟ್ಟಿಕೊಂಡು ಯೋಗೇಶ್​ ರಾಜ್ಯ ನಾಯಕರ ಸಂಪರ್ಕದಲ್ಲಿದ್ಧಾರೆ ಎಂಬುದು ಕೈ ಪಾರ್ಟಿಯಲ್ಲಿಯೆ ಕೇಳಿಬರುತ್ತಿರುವ ಸುದ್ದಿ. ಸೂಡಾ ಅಧ್ಯಕ್ಷಸ್ಥಾನಕ್ಕಾಗಿ,  ಹಿಂದುಳಿದ ವರ್ಗದಲ್ಲಿ ವಿಶ್ವನಾಥ್ ಕಾಶಿ, ಪರಿಶಿಷ್ಟ ವರ್ಗದಲ್ಲಿ ಶಿವಕುಮಾರ್, ಅಲ್ಪಸಂಖ್ಯಾತ ವಲಯದಲ್ಲಿ ಆರೀಫ್​ವುಲ್ಲಾರವರ ಹೆಸರಿರುವ ತಮ್ಮದೊಂದು ಪಟ್ಟಿಯನ್ನು ಹೆಚ್​ಇ ಸಿ ಯೋಗೇಶ್​ ರಾಜ್ಯದ ನಾಯಕರ ಮುಂದಿಟ್ಟಿದ್ದು, ತಮಗೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಎಂಬ ಬೇಡಿಕೆಯನ್ನ ಇಟ್ಟಿದ್ದಾರೆ ಎಂಬ ಮಾಹಿತಿಯು ಇದೆ.  ಈ ಮೂಲಕ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಕೈಗೆತ್ತಿಕೊಳ್ಳುವುದು ಅವರ ಉದ್ದೇಶವಾಗಿದೆ. 

ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಪ್ರಬಲ ಪೈಪೋಟಿ

ಚುನಾವಣೆಗೂ ಮೊದಲೇ ಜಿಲ್ಲಾಧ್ಯಕ್ಷ ಸ್ಥಾನ ಬದಲಾಗುತ್ತೆ ಎನ್ನಲಾಗಿತ್ತು. ಬೇರೆ ಬೇರೆ ಕಾರಣಗಳಿಂದಾಗಿ ಆಗ ಬದಲಾವಣೆ ಆಗಲಿಲ್ಲ. ಇದೀಗ ಮತ್ತೆ ಜಿಲ್ಲಾಧ್ಯಕ್ಷ ಸ್ಥಾನ ಬದಲಾಗುವ ಮಾತುಗಳು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಹೆಚ್​ಸಿ ಯೋಗೇಶ್ , ನಗರ ಕ್ಷೇತ್ರದ ಟಿಕೆಟ್​ ಗಳಿಸಿದ ಹಾದಿಯಲ್ಲಿಯೆ ಪ್ರಯತ್ನ ಪಡುತ್ತಿದ್ದಾರಂತೆ. ಪ್ರಯತ್ನದ ಹಾದಿಯಲ್ಲಿ ಅವರು ಸಾಕಷ್ಟು ಮುಂದಿದ್ಧಾರೆ ಎನ್ನುತ್ತಿದೆ ಕಾಂಗ್ರೆಸ್ ರಿಪೋರ್ಟ್​. ಇನ್ನೊಂದೆಡೆ ಆರ್​. ಪ್ರಸನ್ನಕುಮಾರ್, ಎಸ್​ಪಿ ದಿನೇಶ್​ ಕೂಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ಧಾರೆ.  

ಮಹಾನಗರ ಪಾಲಿಕೆ ಕ್ಯಾಟಗರಿ ಓಡಾಟ

ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಸೂಡಾ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಒತ್ತಡ ತಂತ್ರಗಳ ನಡುವೆ, 8 ತಿಂಗಳ ಒಳಗಾಗಿ ನಡೆಯಲಿದೆ ಎನ್ನಲಾಗುತ್ತಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಕ್ಷೇತ್ರಗಳ ಕ್ಯಾಟಗರಿ ಬದಲಾವಣೆಗೂ ನಗರದ ಹಲವು ನಾಯಕರು ಓಡಾಟ ನಡೆಸ್ತಿದ್ದಾರೆ ಎಂಬ ಮಾಹಿತಿಯಿದೆ. ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಚಿವರಿಗೆ ಅಭಿನಂದನೆ ಸಲ್ಲಿಸಲು ತೆರಳುತ್ತಿರುವ ಪ್ರಮುಖರು, ಅಲ್ಲಿ, ತಮ್ಮ ಮುಖಂಡರ ಪರವಾಗಿ ಬ್ಯಾಟ್ ಬೀಸಿ, ಕ್ಯಾಟಗರಿ ಬದಲಾವಣೆಯ ಬಗ್ಗೆಯು ಅರಿಕೆ ಮಾಡಿಕೊಳ್ಳುತ್ತಿದ್ದಾರಂತೆ. 

ಸಂಭಾವ್ಯ ಉಸ್ತುವಾರಿ ಸಚಿವರಿಗೆ ತಿಳಿದಿಲ್ಲವಾ ವಿಷಯ?

ಇನ್ನೂ ಸ್ಥಳೀಯ ಕಾಂಗ್ರೆಸ್​ನಲ್ಲಿ ಇಷ್ಟೆಲ್ಲಾ ಚಟುವಟಿಕೆಗಳು ನಡೆಯುತ್ತಿದ್ದರೂ ಅದರ ಬಗ್ಗೆ ಶಿವಮೊಗ್ಗದ ಉಸ್ತುವಾರಿ ಸಚಿವರಿಗೆ ವಿಚಾರಗಳು ತಿಳಿದಿಲ್ಲ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಜಿಲ್ಲೆಯ ಮೇಲೆ ಹೋಲ್ಡ್​ ಇಟ್ಟುಕೊಳ್ಳುವ ಸಚಿವರು, ಪಕ್ಷದಲ್ಲಿಯು ತಮ್ಮ ಆಪ್ತರನ್ನು ಹಾಗೂ ತಮ್ಮ ಗೆಲುವಿಗೆ ಸಹಕರಿಸಿದವರನ್ನ ಕೂರಿಸುವ ಪ್ರತೀತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಸದ್ಯ ಮಧು ಬಂಗಾರಪ್ಪರವರು ಜಿಲ್ಲೆಯ ಪಕ್ಷದ ಚಟುವಟಿಕೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದ್ದು, ತಮಗೆ ಕೊಟ್ಟಿರುವ ಸಚಿವ ಸ್ಥಾನದ ಬಗ್ಗೆ ಅವರು ನಿಗಾ ವಹಿಸಿದ್ದಾರೆ ಎನ್ನಲಾಗುತ್ತಿದೆ. 

ಸಾಮಾನ್ಯ ಕಾರ್ಯಕರ್ತನ ಅಹವಾಲು?

ಸಾಮಾನ್ಯ ಕಾರ್ಯಕರ್ತನಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು ಸದ್ಯ ಕಾಂಗ್ರೆಸ್​ ಕಚೇರಿಯಲ್ಲಿ ಕೇಳಿಬರುತ್ತಿರುವ ಮಾತು, ಪಕ್ಷದ ಹಿತಕ್ಕಾಗಿ ದುಡಿಯದ ಮುಖಂಡರು ಅಧಿಕಾರಕ್ಕೆ ಬಂದ ಮೇಲೆ ನಾಯಕರ ಮೇಲೆ ಒತ್ತಡ ತಂದು, ಸ್ಥಾನಮಾನಗಳನ್ನು ಅನುಭವಿಸುತ್ತಾರೆ. ಈ ಸಲ ಹಾಗಾದಿರಲಿ ಎನ್ನುತ್ತಿದ್ದಾರೆ ಪಕ್ಷದ ಕಾರ್ಯಕರ್ತರು.  ಸಾಮಾನ್ಯರಲ್ಲಿ ಸಾಮಾನ್ಯರಿಗೆ ಹುದ್ದೆ ಹಾಗೂ ಜವಾಬ್ದಾರಿಗಳನ್ನ ನೀಡಬೇಕು ಎಂಬುದು ಕಾರ್ಯಕರ್ತರ ವಾದವಾಗಿದೆ. ಕಾಂಗ್ರೆಸ್​ ಹೈಕಮಾಂಡ್​ ಇದಕ್ಕೆ ಮಣೆ ಹಾಕುತ್ತಾ  ಇನ್ನಷ್ಟೆ ಗೊತ್ತಾಗಬೇಕಿದೆ.