ಶರಾವತಿ ಆತಂಕ!/ ಸಿಗಂದೂರು ಲಾಂಜ್ ಸ್ಥಗಿತಕ್ಕೆ ಕ್ಷಣಗಣನೆ! ಲಿಂಗನಮಕ್ಕಿಯಲ್ಲಿ ವಿದ್ಯುತ್​ ಉತ್ಪಾದನೆಯು ನಿಲ್ಲುತ್ತಾ?

Malenadu Today

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ರಾಜ್ಯದ ಪ್ರತಿಷ್ಠಿತ ಲಿಂಗನಮಕ್ಕಿ ಜಲಾಶಯ ಬರಿದಾಗುತ್ತ ಸಾಗಿದ್ದು, ಹಿನ್ನೀರಿನ ಪ್ರದೇಶದ ನೆಲ ಕಾಣುತ್ತಿದೆ. ಅಂದು ತಮ್ಮ ನೆಲೆ ಕಳೆದುಕೊಂಡ ಸಂತ್ರಸ್ತರು, ಇದೀಗ ಮತ್ತೆ ಹಿನ್ನೀರಿನತ್ತ ಬಂದು ತಮ್ಮ ಮೂಲಸ್ಥಳವನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಅಂದಿನ ದೈವಸ್ಥಳಗಳಿಗೆ ಹೋಗಿ ಹಣ್ಣು ಕಾಯಿ ಕೊಟ್ಟು ಬರುತ್ತಿದ್ದಾರೆ. ಮಲೆನಾಡಲ್ಲಿ ವಿಶೇಷವಾಗಿ ಕಾಣ ಸಿಗುವ ದೃಶ್ಯಗಳಿವು, ಹಿನ್ನೀರು ಖಾಲಿಯಾಗುತ್ತಲೇ , ಅಲ್ಲಿ ಬುದಕಿದ್ದ ದೊಡ್ಡ ಸಮುದಾಯ ಬಿಟ್ಟು ಹೋಗಿರುವ ಅವಶೇಷಗಳು ಕಾಣ ಸಿಗುತ್ತವೆ. ಇಂತಹ ಭಾವುಕ ಸನ್ನಿವೇಶದ ಜೊತೆಜೊತೆ ಹಿನ್ನೀರಿನ ಇಳಿಕೆ ಆತಂಕಕ್ಕೂ ಕಾರಣವಾಗುತ್ತದೆ. 

120 ಕಿಲೋಮೀಟರ್ ಸುತ್ತಾಟ

ಏಕೆಂದರೆ, ಹಿನ್ನೀರಿನ ನಡುಗಡ್ಡೆ ಪ್ರದೇಶಗಳಲ್ಲಿನ ಜನರಿಗೆ ನೀರು ದಾಟಲು ಇರುವ ಲಾಂಜ್​ ಸೇವೆಗಳು, ನೀರಿಲ್ಲದಿದ್ದರೇ ಸ್ಥಗಿತಗೊಳ್ಳುತ್ತವೆ. ಈಗಾಗಲೇ ಹಸಿರುಮಕ್ಕಿ, ಮುಪ್ಪಾನೆ ಲಾಂಜ್​ ನಿಲ್ಲಿಸಲಾಗಿದ್ದು, ಸಿಗಂದೂರು ಲಾಂಜ್​ ಕೂಡ ನಿಲ್ಲುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ಸ್ಥಳೀಯರೇ ತಮ್ಮೂರಿಗೆ ಹೋಗಲು  ನಿತ್ಯದ ಕೆಲಸ ಕಾರ್ಯಗಳಿಗೆ 120 ರಿಂದ 140 ಕಿಲೋಮೀಟರ್ ಸುತ್ತು ಹಾಕಿಕೊಂಡು ಸಾಗರ ನಗರಕ್ಕೆ ಹೋಗಬೇಕಾದ ಅನಿವಾರ್ಯತೆ  ಇದೆ. 

ಡ್ಯಾಂನಲ್ಲಿ ನೀರಿಲ್ಲ

ಲಿಂಗನಮಕ್ಕಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಿದ ಹಿನ್ನಲೆ ಡ್ಯಾಂ ನ ನೀರಿನ ಮಟ್ಟ ಡೆಡ್ ಸ್ಟೋರೆಜ್ ತಲುಪುವತ್ತ ಸಾಗಿದೆ. ಗರಿಷ್ಠ 1819 ಅಡಿ ನೀರು ಸಂಗ್ರಹ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ಥುತ 1746 ಅಡಿ ನೀರು ಸಂಗ್ರಹಗೊಂಡಿದೆ. ಕೇವಲ 9.94 ರಷ್ಟು ನೀರು ಸಂಗ್ರಹಗೊಂಡಿದೆ. 

ಸ್ಥಗಿತಗೊಳ್ಳಲಿದೆ ವಿದ್ಯುತ್ ಉತ್ಪಾದನೆ

ಇನ್ನೆರೆಡು ದಿನಗಳಲ್ಲಿ ಮಳೆಯಾಗದಿದ್ದರೆ, ಶರಾವತಿ ಕಣಿವೆ ಪ್ರದೇಶದ ವಿದ್ಯುದಾಗಾರಗಳು ಸ್ಥಗಿತಗೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸಾಮಾನ್ಯವಾಗಿ ಮೇ ಅಂತ್ಯ ಇಲ್ಲವೇ ಜೂನ್ ಮೊದಲ ವಾರದಲ್ಲಿ ಶರಾವತಿ ಕಣಿವೆ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಮುನ್ಲೂಚನೆಯೂ ಈ ಭಾಗದಲ್ಲಿ ಕಂಡು ಬಂದಿಲ್ಲ.

ಎರಡು ದಿನಗಳಲ್ಲಿ ಮಳೆಯಾಗದಿದ್ದರೇ

ಇನ್ನೆರೆಡು ದಿನಗಳಲ್ಲಿ ಮಳೆಯಾಗದಿದ್ದರೆ. ಸಿಗಂದೂರು ಕ್ಷೇತ್ರಕ್ಕೆ ಹೋಗುವ ಲಾಂಜ್ ಸೇವೆಯೂ ಸ್ಥಗಿತಗೊಳ್ಳುವ ಸಾಧ್ಯತೆಗಳು ಹೆಚ್ಚಿದೆ.  ಸಾಗರ ತಾಲ್ಲೂಕಿನ ಮುಪ್ಪಾನೆಯಲ್ಲಿ ಲಾಂಚ್ ಸೇವೆ ಕಳೆದ ಮೇ 26 ರಿಂದಲೇ ನಿಂತಿದೆ. ಇನ್ನೂ ಹೊಸನಗರ ತಾಲ್ಲೂಕಿನ ಹಸಿರುಮಕ್ಕಿ ಲಾಂಚ್ ಸಹ ಕಳೆದ  ಜೂನ್ 4 ರಿಂದ ಸ್ಥಗಿತವಾಗಿದೆ. ಇದೀಗ ಸಿಗಂದೂರು ಲಾಂಚ್ ಸ್ಥಗಿತಗೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಈ ಭಾಗದಲ್ಲಿ ಲಾಂಜ್ ಸ್ಥಗಿತಗೊಂಡರೆ  ಸಾಕಷ್ಟು ಸಮಸ್ಯೆಯಾಗಲಿದೆ.  

ಲಾಂಚ್ ನಿಲ್ಲಿಸುವ ಹೊಳೆಬಾಗಿಲು, ಆಂಬಾರಗೋಡ್ಲು ನಲ್ಲಿ ಬೇಸ್ಮೆಂಟ್ ನಿಂದ ಮುಂದಕ್ಕೆ ಲಾಂಚ್ ನಿಲ್ಲಿಸಬೇಕಾದ ಅನಿವಾರ್ಯತೆ ಇದ್ದು, ಅಷ್ಟರಮಟ್ಟಿಗೆ ನೀರು ಇಳಿದಿದೆ. ಇದು ಲಾಂಜ್​ ನಿಲುಗಡೆಗೆ ಸಮಸ್ಯೆಯಾಗುತ್ತಿದೆ.

ಹಾಗೊಂದು ವೇಳೆ ಇಲ್ಲಿ ಕಾರ್ಯಾಚರಣೆ ನಿಂತರೆ, ಜನರು ಸಂಪೇಕಟ್ಟೆ, ನಿಟ್ಟೂರು ಮೂಲಕ ಸಿಗಂದೂರಿಗೆ  ಬರಬೇಕಾಗುತ್ತದೆ. ಅಲ್ಲದೆ ಈ ಭಾಗದ ಜನರು ಸಹ ಸುತ್ತಿ ಬಳಸಿಯೆ ಸಾಗರಕ್ಕೆ ಬರಬೇಕಾಗುತ್ತದೆ. ಈ ತಲೆಬಿಸಿಯನ್ನು ತಪ್ಪಿಸಲು ಮಳೆಯ ಆಗಮನವಷ್ಟೆ ಪರಿಹಾರವಾಗಿದೆ.

 

Share This Article