KARNATAKA NEWS/ ONLINE / Malenadu today/ Jul 2, 2023 SHIVAMOGGA NEWS
ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ (ಐಎಸ್) ನ ಭಾಗವಾಗಿ ನಡೆಸಿದ ಪಿತೂರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ರಾಜ್ಯದ ಒಂಬತ್ತು ಜನರ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ. ತನಿಖಾ ಸಂಸ್ಥೆ ಸಲ್ಲಿಸಿದ ಜಾರ್ಜ್ಶೀಟ್ನಲ್ಲಿ ಶಿವಮೊಗ್ಗದಲ್ಲಿ ಅರೆಸ್ಟ್ ಆದ ಶಂಕಿತರು ನಡೆಸಿದ್ದ ಸಂಚಿನ ಬಗ್ಗೆ ಉಲ್ಲೇಖಿಸಲಾಗಿದೆ.

ಯಾರ ವಿರುದ್ಧ ಚಾರ್ಜ್ಶೀಟ್ ?
ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಝಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್ ಕೆಎ (22), ಜಬೀವುಲ್ಲಾ (32) ಮತ್ತು ನದೀಮ್ ಫೈಜಲ್ ಎನ್ (27)

ಏನಿದೆ ಚಾರ್ಜ್ಶೀಟ್ನಲ್ಲಿ ಏನಿದೆ?
ಈ ಆರೋಪಿಗಳು ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಐಇಡಿ ಸ್ಫೋಟ ನಡೆಸಿದ್ದರು, ಜೊತೆಗೆ ಅನೇಕ ಸ್ಥಳಗಳ ಮೇಲೆ ಇವರು ವಾಚ್ ಆ್ಯಂಡ್ ಗಾರ್ಡ್ ಮಾಡುತ್ತಿದ್ದರು. ಮೇಲಾಗಿ ಜನರ ನಡುವೆ ಭಯ ಸೃಷ್ಟಿಸಲು ಸಾರ್ವಜನಿಕ ಆಸ್ತಿ ಮತ್ತು ವಾಹನಗಳನ್ನು ಹಾಳು ಮಾಡಿದ್ದರು ಎಂದು ಕಳೆದ ಶುಕ್ರವಾರ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದೆ. 1967ರ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕರ್ನಾಟಕ ಆಸ್ತಿ ನಾಶ ಮತ್ತು ನಷ್ಟ ತಡೆ ಕಾಯ್ದೆ, 1981 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರೋಬೋಟಿಕ್ ಕೋರ್ಸ್ ಮೇಲೆ ಐಸಿಸ್ ಕಣ್ಣು
ಕಳೆದ ಮಾರ್ಚ್ ನಲ್ಲಿ ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.ಒಂಬತ್ತು ಆರೋಪಿಗಳ ಪೈಕಿ ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸಿನ್, ರೀಶಾನ್ ತಾಜುದ್ದೀನ್ ಶೇಖ್, ಮಝಿನ್ ಅಬ್ದುಲ್ ರಹಮಾನ್ ಮತ್ತು ನದೀಮ್ ಅಹ್ಮದ್ ಕೆ.ಎ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಇವರ ಮೂಲಕ ಐಸಿಸ್ ರೊಬೊಟಿಕ್ಸ್ ಕೋರ್ಸ್ಗಳನ್ನು ಮುಂದುವರಿಸಲು ಸೂಚಿಸಿದ್ದರು. ಈ ಮೂಲಕ ಭಯೋತ್ಪಾದಕ ದಾಳಿಗಳನ್ನು ನಡೆಸಲು ಕೌಶಲ್ಯ ವೃದ್ಧಿಸಿಕೊಳ್ಳಲು ತಿಳಿಸಿದ್ದರು ಎಂದು ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.

ಕ್ರಿಮಿನಲ್ ಪಿತೂರಿ
ಮೊಹಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ನಿರ್ದೇಶನದಂತೆ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ವಿದೇಶದಲ್ಲಿರುವ ಐಎಸ್ ಕಾರ್ಯಕರ್ತನೊಂದಿಗೆ ಸೇರಿಕೊಂಡು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಎನ್ಐಎ ಉಲ್ಲೇಖಿಸಿದೆ..ದೇಶದ ರಾಷ್ಟ್ರೀಯ ಭದ್ರತೆ, ಏಕತೆ ಮತ್ತು ಸಾರ್ವಭೌಮತ್ವಕ್ಕೆ ಭಂಗ ತರುವ ಉದ್ದೇಶದಿಂದ ಈ ಮೂವರು ಸಕ್ರಿಯವಾಗಿ ತೀವ್ರಗಾಮಿಗಳಾಗಿದ್ದರು ಮತ್ತು ಸಹ ಆರೋಪಿಗಳನ್ನು ನೇಮಕ ಮಾಡಿಕೊಂಡಿದ್ದರು ಎಂದಿದೆ.
ಹಿಂದೆ ನಡೆದಿದ್ದು?
ಪ್ರಕರಣದ ಎನ್ಐಎ ತನಿಖೆಯ ಪ್ರಕಾರ, ಆರೋಪಿಗಳಿಗೆ ಆನ್ಲೈನ್ ಹ್ಯಾಂಡ್ಲರ್ ಗಳು ಕ್ರಿಪ್ಟೋಕರೆನ್ಸಿಗಳ ಮೂಲಕ ಹಣ ರವಾನಿಸುತ್ತಿದ್ದರು. ಇದೇ ಪ್ರಕರಣ ಸಂಬಂಧ ಕಳೆದ ವರ್ಷ ಸೆಪ್ಟೆಂಬರ್ 19 ರಂದು ಶಿವಮೊಗ್ಗ ಪೊಲೀಸರು ಕೇಸ್ ದಾಖಲಿಸಿದ್ದರು, ನವೆಂಬರ್ 15 ರಂದು ಕೇಸ್ ಎನ್ಐಎ ವಶಕ್ಕೆ ಪಡೆದಿತ್ತು.

