KARNATAKA NEWS/ ONLINE / Malenadu today/ Jun 15, 2023 SHIVAMOGGA NEWS
ಶಿವಮೊಗ್ಗ/ ಸಿಗಂದೂರು ಸೇತುವೆ ಶರಾವತಿ ಸಂತ್ರಸ್ತರ ಭವಿಷ್ಯದ ಆಶಾಕಿರಣ, ಆ ಸೇತುವೆಯೊಂದು ಮುಗಿದರೇ, ದ್ವೀಪ ಪ್ರದೇಶಗಳಿಗೆ ಸಂಪರ್ಕ ಸಿಕ್ಕಿ, ಅಭಿವೃದ್ಧಿಗೆ ದಾರಿಯಾಗುತ್ತದೆ. ಲಾಂಜ್ಗಳನ್ನ ನೆಚ್ಚಿಕೊಂಡು ಬದುಕುತ್ತಿರುವ ತುಮರಿ, ಸಿಗಂದೂರು ಭಾಗದ ಜನರಿಗೆ ಸೇತುವೆ ಹೊಸ ಹೊಸ ಕನಸುಗಳನ್ನ ಸೃಷ್ಟಿಸಲಿದೆ. ಆದರೆ ಮುಗಿಯುವ ಹಂತಕ್ಕೆ ಬರುತ್ತಿರುವ ಕಾಮಗಾರಿಗೆ ಶರಾವತಿ ಹಿನ್ನೀರು ತಗ್ಗಿರುವುದು ಹಿನ್ನಡೆ ಉಂಟುಮಾಡಿದೆ. ಹೀಗಾಗಿ ಸೇತುವೆ ಕಾಮಗಾರಿ ಮುಗಿಯಲು ಇನ್ನಷ್ಟು ಸಮಯ ಹಿಡಿಯಲಿ
ಮುಂಗಾರು ಕೈ ಕೊಟ್ಟರೆ 2024ರ ನವೆಂಬರ್ಗೆ ಕೆಲಸ ಮುಗಿಯುವುದು ಅನುಮಾನ
ಕೇಂದ್ರ ಸರ್ಕಾರ ಸಿಂಗದೂರು ಮೂಲಕ ದಕ್ಷಿಣ ಕನ್ನಡವನ್ನು ಸಂಪರ್ಕಿಸುವ ಸಲುವಾಗಿ ಸಿಗಂದೂರು ಸೇತುವೆಯನ್ನು ನಿರ್ಮಿಸುತ್ತಿದೆ. ದ್ವೀಪ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
423 ಕೋಟಿ ರೂಪಾಯಿ ವೆಚ್ಚದ ಸೇತುವೆ
ದೇಶದಲ್ಲೇ ಎರಡನೆಯದಾದ 2.12 ಕಿ.ಮೀ. ಉದ್ದದ ಹಾಗೂ 16 ಮೀಟರ್ ಅಗಲದ ಈ ಸೇತುವೆಯನ್ನು 423.15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಳೆದ 2020ರ ಡಿಸೆಂಬರ್ನಿಂದ ಆರಂಭಗೊಂಡಿರುವ ಕಾಮಗಾರಿಗೆ ಕೊರೊನಾ ಕಾಲದಲ್ಲಿ ಅಡೆತಡೆ ಉಂಟಾಗಿತ್ತು. ಆನಂತರ ಹೆಚ್ಚಿನ ಪ್ರಮಾಣದ ಹಿನ್ನೀರು ಸಹ ಕಾಮಗಾರಿಯನ್ನ ನಿಲ್ಲಿಸುವಂತೆ ಮಾಡಿತ್ತು. ಹಾಗಾಗಿ ಎರಡು ವರ್ಷ ಕಾಮಗಾರಿ ನಿಧಾನವಾಗಿ ಸಾಗಿತ್ತು. ಪ್ರಸ್ತುತ ಹಿನ್ನೀರಿನಲ್ಲಿ 17 ಪಿಲ್ಲರ್ಗಳನ್ನು ನಿರ್ಮಿಸಲಾಗಿದ್ದು ಪಿಲ್ಲರ್ಗಳ ನಡುವೆ ಪ್ರಿ ಕ್ಯಾಸ್ಟೆಡ್ ಕಾಂಕ್ರೀಟ್ ಬ್ಲಾಕ್ಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.
ಜಲಾಶಯದಲ್ಲಿ ನೀರಿಲ್ಲ
ಆದರೆ ಲಿಂಗನಮಕ್ಕಿ ಡ್ಯಾಂನಲ್ಲಿ ನೀರು ನಿತ್ಯ ಕಡಿಮೆಯಾಗುತ್ತಲೇ ಇದೆ.. 1819 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 1740 ಅಡಿ ನೀರಿದ್ದು ಸುಮಾರು 80 ಅಡಿಯಷ್ಟು ನೀರು ಕಡಿಮೆಯಾಗಿದೆ. ಇದರಿಂದ ಸೇತುವೆ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ಇದಕ್ಕೆ ಕಾರಣವೂ ಇದೆ,
ನೀರಿನಲ್ಲಿಯೇ ನಡೆಯಬೇಕು ಕಾಮಗಾರಿ
ಹಿನ್ನೀರಿನಲ್ಲಿಯೇ ಸೇತುವೆ ನಿರ್ಮಿಸಬೇಕಾಗಿರುವ ಹಿನ್ನೆಲೆಯಲ್ಲಿ, ಕಾಮಗಾರಿಗಾಗಿ ದೊಡ್ಡದೊಡ್ಡ ಲಾಂಜ್ ಮಾದರಿಯ ವ್ಯವಸ್ಥೆಗಳನ್ನ ಮಾಡಲಾಗಿದೆ. ಬೃಹತ್ ಗಾತ್ರ ಡ್ರಂಗಳ ಮೇಲೆ ಕ್ರೇನ್ಗಳನ್ನ ಇಟ್ಟು, ಅವುಗಳು ನೀರಿನಲ್ಲಿಯೇ ತೇಲತ್ತಾ ಸಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಆದರೆ ಇದಕ್ಕೆ ಹಿನ್ನೀರಿನಲ್ಲಿ ಸಾಕಷ್ಟು ನೀರು ಇರಬೇಕಾಗುತ್ತದೆ. ಇಲ್ಲದಿದ್ದರೇ, ಕಾಮಗಾರಿಗಾಗಿ ನಿರ್ಮಿಸಲಾಗಿರುವ ಪ್ಲಾಟ್ಫಾರಮ್ ಲಾಂಜ್ಗಳು ಪಿಲ್ಲರ್ನಿಂದ ಪಿಲ್ಲರ್ಗೆ ಸಾಗುವುದಿಲ್ಲ. ಸದ್ಯ ನೀರು ಕಡಿಮೆಯಾಗಿರುವುದರಿಂದ, ಸೇತುವೆಯ ಪಿಲ್ಲರ್ಗಳ ಬಳಿಯಲ್ಲಿ ಹಾಗು ದಡದಲ್ಲಿ ಪ್ಲಾಟ್ ಫಾರಮ್ ಲಾಂಜ್ಗಳು ನಿಂತು ಬಿಟ್ಟಿವೆ.
ತೇಲುವ ಫ್ಲಾಟ್ ಫಾರಮ್ಗಳ ಮೇಲೆ
ಅಲ್ಲದೆ ಈಗಿರುವ ನೀರಿನ ಮಟ್ಟದಲ್ಲಿ ನೀರಿನ ಮೇಲೆ ತೇಲುವ ಪ್ಲಾಟ್ಫಾರಮ್ಗಳ ಮೇಲೆ, ಇರುವ ಕ್ರೇನ್ಗಳಿಂದ, ಕಾಂಕ್ರಿಟ್ ಬ್ಲಾಕ್ಗಳನ್ನು ಎತ್ತಿ , 40 ರಿಂದ 50 ಅಡಿ ಎತ್ತರದ ಪಿಲ್ಲರ್ ಬಳಿಯಲ್ಲಿ ಜೋಡಿಸಲು ಸಾಧ್ಯವಾಗುವುದಿಲ್ಲ. ಮಳೆ ಬಂದು ಡ್ಯಾಂನ ನೀರಿನ ಮಟ್ಟ ಏರಿದರೆ ಮಾತ್ರ ಕಾಮಗಾರಿಯು ಸುಸೂತ್ರವಾಗಿ ಮಾಡಲು ಸಾಧ್ಯ. ಇಲ್ಲದಿದ್ದರೆ 2024 ರ ನವೆಂಬರ್ನೊಳಗೆ ಕೆಲಸ ಪೂರ್ಣಗೊಳ್ಳುವುದು ಅಸಾಧ್ಯ ಎನ್ನುತ್ತಾರೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ
ಶೇಕಡಾ 70 ರಷ್ಟು ಮುಗಿದಿದೆ ಕಾಮಗಾರಿ
ಇನ್ನು 2020ರ ಡಿಸೆಂಬರ್ ನಲ್ಲಿ ಆರಂಭವಾಗಿರುವ ಕೆಲಸ ಶೇ.70 ರಷ್ಟು ಮುಗಿದಿದೆ. ಗುತ್ತಿಗೆ ಕರಾರಿನ ಪ್ರಕಾರ 2024ರ ನವೆಂಬರ್ನೊಳಗೆ ಸೇತುವೆ ಕೆಲಸ ಪೂರ್ಣಗೊಳ್ಳಬೇಕು. ಪ್ರಸ್ತುತ ಪಿಲ್ಲರ್ಗಳ ನಡುವೆ ಸುಮಾರು 80 ರಿಂದ 100 ಟನ್ ತೂಕದ ಸೆಗ್ಮೆಂಟ್ನ್ನು ಜೋಡಿಸುವ ಕೆಲಸವಾಗುತ್ತಿದೆ. .
ಇಂಜಿನಿಯರ್ ಹೇಳುವುದೇನು?
ಹಿನ್ನೀರಲ್ಲಿ ನೀರು ಬಂದರೆ ವಾರಕ್ಕೆ ಕನಿಷ್ಠ 4 ರಿಂದ 5 ಸೆಗ್ಮೆಂಟ್ನ್ನು ಜೋಡಿಸಬಹುದಾಗಿದೆ. ಡ್ಯಾಂಗೆ ಹೆಚ್ಚಿನ ನೀರು ಬಂದರೆ ನಮಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ನಿಂಗಪ್ಪ ತಿಳಿಸಿದ್ದಾರೆ.
