KARNATAKA NEWS/ ONLINE / Malenadu today/ May 23, 2023 SHIVAMOGGA NEWS
ಶಿವಮೊಗ್ಗ/ ಜಿಲ್ಲೆ ವಿವಿಧೆಡೆ ನಿನ್ನೆ ಸಾಕಷ್ಟು ಘಟನೆಗಳು ನಡೆದಿದ್ದು, ಅವುಗಳನ್ನ ನೋಡುವುದಾದರೆ, ತಿಮ್ಲಾಪುರದಿಂದ ಎಮ್ಮೆಹಟ್ಟಿಗೆ ಬರುತ್ತಿದ್ದ ಬೈಕ್ಗೆ ಚೌಡಮ್ಮ ದೇವಸ್ಥಾನದ ಬಳಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು, ನಿಲ್ಲಿಸದೇ ಮುಂದಕ್ಕೆ ಹೋಗಿದೆ. ಘಟನೆಯಲ್ಲಿ ಯುವಕ ಸಾವನ್ನಪ್ಪಿದ್ದು, ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ.
ಏರ್ಬ್ಯಾಗ್ನಿಂದ ಉಳಿಯಿತು ಪ್ರಾಣ
ತೀರ್ಥಹಳ್ಳಿ ತಾಲ್ಲೂಕಿನ ತಳುವೆಯಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದೆ. ಪರಿಣಾಮ ಕಾರು ಅಲ್ಲಿಯೇ ಇದ್ದ ಚರಂಡಿಗೆ ಉರುಳಿದೆ. ಅದೃಷ್ಟಕ್ಕೆ ಆಕ್ಸಿಡೆಂಟ್ ಆಗುತ್ತಲೇ ಕಾರಿನ ಏರ್ಬ್ಯಾಗ್ ಓಪನ್ ಆಗಿದೆ. ಹಾಗಾಗಿ ಚಾಲಕ ಬಚಾವ್ ಆಗಿದ್ದಾನೆ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಎರಡು ಕಾರುಗಳ ನಡುವೆ ಡಿಕ್ಕಿ!
ಅತ್ತ ಅಜ್ಜಂಪುರ ಠಾಣಾ ವ್ಯಾಪ್ತಿಯ ಚನ್ನಾಪುರ ಗ್ರಾಮದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ. ಘಟನೆ ಬೆನ್ನಲ್ಲೆ ವಿಷಯ ತಿಳಿದು ಸ್ತಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಸಣ್ಣಪುಟ್ಟ ಗಾಯಗಳಿಂದ ಕಾರಿನಲ್ಲಿದ್ದವರು ಬಚಾವ್ ಆಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಮಾವಿನ ತೋಟಕ್ಕೆ ನುಗ್ಗಿದ ಬಸ್!
ಶಿಕಾರಿಪುರ ತಾಲ್ಲೂಕಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ವೊಂದು ಹಳೇ ಜೋಗದ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿಯಲ್ಲಿದ್ದ ತೋಟವೊಂದಕ್ಕೆ ನುಗ್ಗಿದೆ. ಬಸ್ ಕೆಲವೆಡೆ ಜಖಂಗೊಂಡಿದೆ. ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಗಾಯಗಳಾಗಿವೆ, ಚೋರಡಿಯಲ್ಲಿ ಸಂಭವಿಸಿದ ಅಪಘಾತದ ಬೆನ್ನಲ್ಲೆ ನಡೆದ ಘಟನೆಯು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.
ಜೀವ ಉಳಿಸಿದ ಆರಗ ಜ್ಞಾನೇಂದ್ರ
ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು ಮತ್ತೊಮ್ಮೆ ಮಾನವೀಯತೆ ಮೆರೆದು, ಆಕ್ಸಿಡೆಂಟ್ನಲ್ಲಿ ಗಾಯಗೊಂಡವರನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಿ ಜೀವ ಉಳಿಸಿದ್ದಾರೆ. ಬೆಜ್ಜವಳ್ಳಿ ಕನ್ನಂಗಿ ನಡುವೆ ಬೈಕ್ ಸವಾರನೊಬ್ಬ ಅಪಘಾತವಾಗಿ ಗಾಯಗೊಂಡಿದ್ದ. ಅಲ್ಲಿಯೇ ಬರುತ್ತಿದ್ದ ಆರಗ ಜ್ಞಾನೇಂದ್ರರವರು ತಕ್ಷಣವೇ ಆ್ಯಂಬುಲೆನ್ಸ್ಗೆ ಕರೆಮಾಡಿ, ಯುವಕನನ್ನು ಆಸ್ಪತ್ರೆಗೆ ರವಾನಿಸಿದ್ರು.