Sogane Airport Farmers ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಹನ್ನೆರಡು ವರ್ಷಗಳ ಹಿಂದೆ ಜಮೀನು ತ್ಯಾಗ ಮಾಡಿದ ರೈತರು ಇಂದು ಕೂಲಿಕಾರ್ಮಿಕರಾಗಿ ಬೇರೆಯವರ ಬಳಿ ಕೈಯೊಡ್ಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕಾಗಿ ಆ ಬಗರ್ ಹುಕುಂ ಸಾಗುವಳಿ ರೈತರೆಲ್ಲಾ ತಮ್ಮ ಭೂಮಿಯನ್ನೇ ತ್ಯಾಗಮಾಡಿದರು. ಆದರೆ, ಸರ್ಕಾರ ರೈತರಿಂದ ಭೂಮಿ ಪಡೆಯುವಾಗ ನೀಡಿದ್ದ ಭರವಸೆಗಳು ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದರೂ ಕೂಡ ಮರೀಚಿಕೆಯಾಗಿಯೇ ಉಳಿದಿವೆ.
Sogane Airport Farmers ಕನಸಿನ ಕೂಸು ಶಿವಮೊಗ್ಗದ ವಿಮಾನ ನಿಲ್ದಾಣ. ಭೂಮಿ ತ್ಯಾಗಮಾಡಿದ ರೈತರಿಗೆ ನೀಡಲಿಲ್ಲ ನ್ಯಾಯ.
ಶಿವಮೊಗ್ಗ ಹೊರವಲಯದ ಸೋಗಾನೆ ಸಮೀಪ ವಿಮಾನ ನಿಲ್ದಾಣ ಮಾಡಲು ಕಳೆದ ಹನ್ನೆರೆಡು ವರ್ಷದ ಹಿಂದೆ ಯೋಜನೆ ಸಿದ್ಧಪಡಿಸಲಾಗಿತ್ತು. 2007, ಜೂನ್ 23 ರಂದು ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಮ್ಮುಖದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರಿಗೆ ಭೂಮಿ ಬಿಟ್ಟುಕೊಡಲು ಎಕರೆಗೆ ಎರಡು ಲಕ್ಷ ಪರಿಹಾರ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ತೋಟ, ಪಂಪ್‌ಸೆಟ್, ಮನೆಗಳಿಗೆ ಪ್ರತ್ಯೇಕ ಪರಿಹಾರವನ್ನು ಕೊಡಲು ಘೋಷಣೆ ಮಾಡಿದ್ದರು. ಇದರ ಜೊತೆಗೆ ಭೂಮಿ ಕಳೆದುಕೊಂಡ ರೈತರಿಗೆ ನಿಡಿಗೆ ಸಮೀಪ 40*60 ಅಡಿ ನಿವೇಶನ, ಅರ್ಹ ವ್ಯಕ್ತಿಗಳಿಗೆ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ, ಮನೆಗೊಂದು ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ, ಇಂದಿಗೂ ಕೂಡ ಅವು ಗಗನಕುಸುಮವಾಗಿಯೇ ಉಳಿದಿವೆ. ಇತ್ತ ಜಮೀನು ಇಲ್ಲದೇ, ಅತ್ತ ಸರ್ಕಾರ ನೀಡಿದ ಆಶ್ವಾಸನೆಗಳು ಈಡೇರದೆ ಇದೀಗ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ವಿಮಾನ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆಯಾಗಿ, ಕಾಮಗಾರಿಗಳು ಬಿರುಸಿನಿಂದ ಸಾಗುತ್ತಿರುವಾಗ ರೈತರು ತಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ. ಶಿವಮೊಗ್ಗ ಹೊರವಲಯದ ಸೋಗಾನೆ ಬಳಿ 168.12 ಎಕರೆ ಖಾಸಗಿ ಭೂಮಿ ಮತ್ತು 611.10 ಎಕರೆ ಬಗರ್ ಹುಕುಂ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಗಿತ್ತು. ರನ್‌ವೇಗೆ ಹೆಚ್ಚುವರಿಯಾಗಿ 129 ಎಕರೆ ವಶಪಡಿಸಿಕೊಳ್ಳಲಾಗಿತ್ತು.
Sogane Airport Farmers ಜ್ಯೋತಿ ನಗರ ಗ್ರಾಮದ ಸರ್ವೆ ನಂಬರ್ 120 ರಲ್ಲಿ ವಿಮಾನ ನಿಲ್ದಾಣ ಮಾಡಲು ಸುಮಾರು 302 ರೈತರಿಂದ 530 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ವೇಳೆ ಜಮೀನು ಕಳೆದುಕೊಂಡ ರೈತರಿಗೆ ನಿಡಿಗೆ ಸಮೀಪ 60*40 ಅಡಿ ನಿವೇಶನ ನೀಡುವುದಾಗಿ ಭರವಸೆ ನೀಡಲಾಗಿತ್ತು. ನಿಡಿಗೆ ಸಮೀಪ ಈ ರೈತರಿಗೆ ನಿವೇಶನ ನೀಡಲು 60 ಎಕರೆ 21 ಗುಂಟೆ ಜಾಗವನ್ನು ಮೀಸಲು ಇಡಲಾಗಿತ್ತು. ಅದರಲ್ಲಿ 34.9 ಗುಂಟೆ ಜಾಗದಲ್ಲಿ ನಿವೇಶನ ಸಿದ್ಧಪಡಿಸಿ ಹೌಸಿಂಗ್ ಬೋರ್ಡ್‌ನಿಂದ 90 ಜನ ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟಿತ್ತು. ಆದರೆ, ಇನ್ನುಳಿದ ರೈತರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದ್ದು, ರೈತರು ತಮಗಾದ ಅನ್ಯಾಯದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ರೈತರಿಗೆ ಸ್ಪಂದಿಸುವಂತೆ ಹೈಕೋರ್ಟ್ ಕೂಡ ಶಿವಮೊಗ್ಗ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಇದರ ನಡುವೆ ಸಾರ್ವಜನಿಕರು ಸಂತ್ರಸ್ತ ರೈತರ ಪರ ಆದ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವುಗೊಳಿಸಲು ಸಂತ್ರಸ್ತ ರೈತರು ಪುನಃ ಹೈಕೋರ್ಟ್ ಮೆಟ್ಟಲೇರಿ ಅದನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಹೈಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಈಗ ಸಂತ್ರಸ್ತ ರೈತರಿಗೆ ನಿವೇಶನ ಹಂಚಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ.ವಿಮಾನ ನಿಲ್ದಾಣದ ಕಾಮಗಾರಿಗೆ ಚುರುಕು ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು, ರೈತರಿಗಾದ ಅನ್ಯಾಯವನ್ನು ಸದ್ಯದಲ್ಲೇ ಬಗೆಹರಿಸಲಾಗುವುದು ಎಂಬ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಭರವಸೆಯಾಗಿಯೇ ಉಳಿದಿದೆ.
Sogane Airport Farmers ಉಚ್ಚ ನ್ಯಾಯಾಲಯದ ಆದೇಶದಂತೆ ನಿವೇಶನ ಸಿಗುವವರೆಗೆ ಜಾನುವಾರು ಮತ್ತು ಟ್ರಾಕ್ಟರ್‌ಗಳೊಂದಿಗೆ ಸಂತ್ರಸ್ತ ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ. ವಿಮಾನ ನಿಲ್ದಾಣ ಸಂತ್ರಸ್ತ ರೈತರು, ಬಂದಿಖಾನೆಗೆ ಭೂಮಿ ಕೊಟ್ಟ ರೈತರು ಹಾಗೂ ವೈದ್ಯಕೀಯ ಆಯುರ್ವೇದ ಕಾಲೇಜಿಗಾಗಿ ಜಮೀನು ಕಳೆದುಕೊಂಡ ಸಂತ್ರಸ್ತ ರೈತರು ಮತ್ತು ಆಹಾರ ಘಟಕ ಹಾಗೂ ಗೃಹ ಮಂಡಳಿಗೆ ಜಮೀನು ನೀಡಿದ ಸಂತ್ರಸ್ತ ರೈತರೂ ಮತ್ತು ಸರ್ವೆ ನಂ. 120 ರ ಬಗರ್ ಹುಕುಂ ಸಾಗುವಳಿದಾರರೂ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.ಇದರ ನಡುವೆ ವಿಮಾನ ನಿಲ್ದಾಣಕ್ಕೆ ಬಳಕೆಯಾಗಿ ಉಳಿದಿರುವ 111 ಎಕರೆ ಪ್ರದೇಶದಲ್ಲಿ ಶಾಪಿಂಗ್ ಮಾಲ್, ಹೋಟೆಲ್ ನಿರ್ಮಿಸುವ ಯೋಚನೆ ಇದೆ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದ್ದಾರೆ. ನೆನ್ನೆ ಮಲ್ನಾಡ್ ಶೈರ್ ಹೋಟೆಲ್‌ನಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದ ಬಳಕೆಗೆ 780 ಎಕರೆ ಜಾಗ ಇದೆ. ಉಳಿದ 111 ಎಕರೆ ಜಾಗವನ್ನು ಲೀಸ್‌ಗೆ ನೀಡುವ ಯೋಚನೆ ಇದೆ. ಅಲ್ಲಿ ಶಾಪಿಂಗ್ ಮಾಲ್ ಅಥವಾ ಹೋಟೆಲ್ ಸೇರಿ ಸಾರ್ವಜನಿಕ ಬಳಕೆಗೆ ಉಪಯೋಗಿಸಲಾಗುತ್ತದೆ ಎಂದು ಹೇಳಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಹೈಟೆಕ್ ಮಾಡುವ ಆತುರದಲ್ಲಿರುವ ಸರ್ಕಾರಕ್ಕೆ ರೈತರ ಸಂಕಷ್ಟವನ್ನು ಈಡೇರಿಸಲು ಸಾಧ್ಯವಿಲ್ಲವೇ?
Sogane Airport Farmers ಬಿ.ಎಸ್. ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಸಿಎಂ ಆದರೂ ಸೋಗಾನೆ ವಿಮಾನ ನಿಲ್ದಾಣಕ್ಕೆ ಭೂಮಿ ತ್ಯಾಗ ಮಾಡಿದ ರೈತರ ಸಮಸ್ಯೆ ಇನ್ನೂ ಜ್ವಲಂತವಾಗಿರುವುದು ವಿಪರ್ಯಾಸವೇ ಸರಿ. ಇದ್ದ ಭೂಮಿಯನ್ನು ಕಳೆದುಕೊಂಡು, ಸರ್ಕಾರ ನೀಡಿದ ಪರಿಹಾರದ ಹಣವನ್ನು ಖಾಲಿ ಮಾಡಿಕೊಂಡು ಇದೀಗ ರೈತರು ಕೂಲಿಕಾರ್ಮಿಕರಾಗಿದ್ದಾರೆ. ಈಗಲಾದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ವಿಮಾನ ನಿಲ್ದಾಣಕ್ಕೆ ಜಮೀನು ಕೊಟ್ಟ ರೈತರ ಕಷ್ಟ ನಿವಾರಣೆ ಮಾಡಬೇಕಿದೆ, ಕೊಟ್ಟ ಭರವಸೆಯನ್ನು ಈಡೇರಿಸಬೇಕಿದೆ.