Snake bite : ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಡಿದು ವ್ಯಕ್ತಿ ಸಾವು
ಹೊಳೆಹೊನ್ನೂರಿನಲ್ಲಿ ಹಾವು ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಆಗರದಹಳ್ಳಿ ಗ್ರಾಮದ 33 ವರ್ಷದ ನಿಂಗರಾಜು ಮೃತಪಟ್ಟವರು. ಅಡಿಕೆ ತೋಟದಲ್ಲಿ ಕೆಲಸ ಮಾಡುವಾಗ ನಿಂಗರಾಜು ಅವರಿಗೆ ಹಾವು ಕಚ್ಚಿದ್ದು, ಕೂಡಲೇ ಅವರು ಚೀರಿಕೊಂಡಿದ್ದಾರೆ. ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ಅವರ ಮಾವ ಸ್ಥಳಕ್ಕೆ ಧಾವಿಸಿದ್ದು, ವಿಷಯ ತಿಳಿದುಬಂದಿದೆ.
ತಕ್ಷಣವೇ ನಿಂಗರಾಜು ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಆ ಹೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ. ನಿಂಗರಾಜು ಅವರು ತಂದೆ ರಂಗಪ್ಪ ಮತ್ತು ತಾಯಿ ವಿಜಯಲಕ್ಷ್ಮಿ ಅವರನ್ನು ಅಗಲಿದ್ದಾರೆ.