SIT investigation : ಧರ್ಮಸ್ಥಳ ಪ್ರಕರಣ: ಎಸ್.ಐ.ಟಿ ತನಿಖೆ ಕೂಗಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
SIT investigation : ಮೈಸೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಕುರಿತ ಚರ್ಚೆಗಳು ತೀವ್ರಗೊಂಡಿದ್ದು, ಈ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್.ಐ.ಟಿ) ಕ್ಕೆ ವಹಿಸಬೇಕೆಂಬ ಒತ್ತಾಯ ರಾಜ್ಯಾದ್ಯಂತ ಕೇಳಿಬರುತ್ತಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ್ ಗೌಡ ಅವರು ಕೂಡ ಈ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕೋರ್ಟ್ ಮುಂದೆ ಸಾಕ್ಷಿ ಹೇಳುತ್ತೇನೆ ಎಂದು ಈಗ ಬಂದಿರುವ ವ್ಯಕ್ತಿ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈಗ ಆತ ಮುನ್ನೆಲೆಗೆ ಬಂದಿದ್ದು, ಆತ ಈಗ ತನಿಖೆಯ ಹಂತದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಧರ್ಮಸ್ಥಳದಲ್ಲಿ ಸತ್ತಿರುವ ಶವಗಳನ್ನು ನಾನೇ ಹೂತಿದ್ದು ಅದನ್ನು ತೆಗೆದು ತೋರಿಸುತ್ತೇನೆ ಎಂಬ ಹೇಳಿಕೆಯನ್ನು ಕೊಟ್ಟಿದ್ದಾನೆ. ಪೊಲೀಸರ ತನಿಖೆ ನಡೆಸಿದ ನಂತರ ನಾವು ಎಸ್ ಐಟಿ ರಚಿಸುವ ಕುರಿತು ತಿರ್ಮಾನಿಸುತ್ತೇವೆ ಎಂದರು.
ನಿವೃತ್ತ ನ್ಯಾಯಮೂರ್ತಿ ಗೋಪಾಲ್ ಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, “ಗೋಪಾಲ್ ಗೌಡರ ಈ ಕೇಸ್‌ನ ವಿಚಾರವಾಗಿ ಅವರ ಹೇಳಿಕೆಗೆ ನಮ್ಮ ಪರವೂ ಇಲ್ಲ, ವಿರೋಧವೂ ಇಲ್ಲ” ಎಂದು ಸ್ಪಷ್ಟಪಡಿಸಿದರು. ಅಲ್ಲದೆ, “ಈ ಕೇಸ್‌ನ ಕುರಿತಂತೆ ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ. ಒತ್ತಡವಿದ್ದರೂ ಸಹ ನಾವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
