Shivamogga press trust : ಪತ್ರಿಕೋದ್ಯಮದಲ್ಲೂ ಕೆಡುಕುಗಳಿವೆ, ಪಾವಿತ್ರ್ಯತೆ ಕಾಯ್ದುಕೊಳ್ಳುವುದು ಮುಖ್ಯ: ಪಿ. ತ್ಯಾಗರಾಜ್
Shivamogga press trust : ಶಿವಮೊಗ್ಗ: ಮಾಧ್ಯಮ ಕ್ಷೇತ್ರವೂ ಇಂದು ಒಂದು ಉದ್ಯಮವಾಗಿ ಮಾರ್ಪಟ್ಟಿದ್ದು, ಸಂಪಾದಕರು ಮಾಲೀಕರ ಒತ್ತಡದಲ್ಲಿ ಕೆಲಸ ಮಾಡುವ ಸವಾಲು ಎದುರಾಗಿದೆ. ಈ ಸನ್ನಿವೇಶದಲ್ಲಿ ಪತ್ರಕರ್ತರು ತಮ್ಮ ವೃತ್ತಿಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ. ತ್ಯಾಗರಾಜ್ ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಪತ್ರಿಕಾ ದಿನಾಚರಣೆಯು ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವ ಸಂದರ್ಭ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳು ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಇದರ ನಡುವೆಯೂ ಪತ್ರಕರ್ತರು ಮುನ್ನಡೆಯಬೇಕಿದೆ” ಎಂದು ಅವರು ತಿಳಿಸಿದರು.
ಇತರ ಕ್ಷೇತ್ರಗಳಂತೆ ಮಾಧ್ಯಮದಲ್ಲೂ ಕೆಡುಕುಗಳು ನಡೆಯುತ್ತಿವೆ. ಇತ್ತೀಚೆಗೆ ‘ಪ್ಲಾಂಟೆಡ್ ನ್ಯೂಸ್’ ಮಾಡುವ ಸಿಂಡಿಕೇಟ್ ಪತ್ರಿಕೋದ್ಯಮ ಹುಟ್ಟಿಕೊಂಡಿದೆ. ಸುಳ್ಳು ಮತ್ತು ಕಲ್ಪಿತ ಸುದ್ದಿಗಳನ್ನು ಸೃಷ್ಟಿಸಿ ಅವುಗಳನ್ನು ಪ್ರಮುಖವಾಗಿ ಬಿಂಬಿಸಲಾಗುತ್ತಿದೆ. ಆದ್ದರಿಂದ, ತನಿಖಾ ವರದಿಗಾರಿಕೆ ಮತ್ತು ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಪತ್ರಕರ್ತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವುದು ತಪ್ಪಲ್ಲ. ಆದರೆ ಸಮಾಜಕ್ಕೆ ಮಾರಕವಾಗುವ, ಯಾರನ್ನೋ ಬೆದರಿಸುವ ಕೆಲಸ ಮಾಡಬಾರದು. ನ್ಯಾಯಬದ್ಧ ಹೋರಾಟಗಳಿಗೆ ತಮ್ಮ ಬೆಂಬಲವಿದೆ ಎಂದು ತ್ಯಾಗರಾಜ್ ಭರವಸೆ ನೀಡಿದರು.
Shivamogga press trust ಸತ್ಯ ಹೇಳುವ ಯೋಧರು ಪತ್ರಕರ್ತರು : ಸಿಎಸ್ ಷಡಾಕ್ಷರಿ
ನಂದನ್ ಸ್ಮರಣಾರ್ಥ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪತ್ರಕರ್ತರನ್ನು ‘ಸತ್ಯ ಹೇಳುವ ಯೋಧರು’ ಎಂದು ಬಣ್ಣಿಸಿದರು. ಪತ್ರಿಕಾ ರಂಗವು ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ ಎಂದರು. ಕೆಲ ವ್ಯಕ್ತಿಗಳಿಂದ ಸುಳ್ಳು ಸುದ್ದಿ ಹರಡಿ ಇಡೀ ಕ್ಷೇತ್ರದ ಮೇಲೆ ತಪ್ಪು ಭಾವನೆ ಬರುವುದು ವಿಷಾದನೀಯ ಎಂದು ಅವರು ಅಭಿಪ್ರಾಯಪಟ್ಟರು.
Shivamogga press trust ಜಾಹೀರಾತು ಕ್ಷೇತ್ರದಿಂದ ಸಮಾಜ ಸೇವೆ: ನರೇಶ್ ಕುಮಾರ್
ಸನ್ಮಾನ ಸ್ವೀಕರಿಸಿ ಮಾತನಾಡಿದ ಝೇಂಕಾರ್ ಅಡ್ವರ್ಟೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ನರೇಶ್ ಕುಮಾರ್ ಟಿ.ಎ ಅವರು, ಪೇಪರ್ ಹಾಕುವ ಕೆಲಸದಿಂದ ಆರಂಭಿಸಿ ಇಂದು 300 ಕೋಟಿ ರೂಪಾಯಿ ವಹಿವಾಟು ನಡೆಸುವ ಜಾಹೀರಾತು ಸಂಸ್ಥೆಯನ್ನು ಕಟ್ಟಿರುವುದಾಗಿ ತಿಳಿಸಿದರು. ತವರು ನೆಲದಲ್ಲಿ ಸಿಕ್ಕ ಈ ಸನ್ಮಾನಕ್ಕೆ ಹೃದಯ ತುಂಬಿ ಬಂದಿದೆ ಎಂದ ಅವರು, ಪತ್ರಿಕಾ ಕ್ಷೇತ್ರದ ಸಮಾಜಮುಖಿ ಕೆಲಸಗಳಿಗೆ ತಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಿಕಾ ವೃತ್ತಿಬಂಧುಗಳಾದ ಸರ್ವಜ್ಞ ಪತ್ರಿಕೆ ಸಂಪಾದಕರಾದ ಎಸ್ ಬಿ ಮಠದ್, ಝೇಂಕಾರ್ ಅಡ್ವಟೈಸರ್ಸ್ ನಿರ್ದೇಶಕ ನರೇಶ್ ಕುಮಾರ್ ಟಿ.ಎ,. ವಿಜಯ ಕರ್ನಾಟಕ ಪತ್ರಿಕೆ ಮುದ್ರಣ ವ್ಯವಸ್ಥಾಪಕರಾದ ನಾರಪ್ಪ ಗೌಡ್ರು, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಗ್ರಾಫಿಕ್ಸ್ ಡಿಸೈನರ್ ಎಂ.ಸಿ.ರಾಜು, ಕನ್ನಡಪ್ರಭ ಪತ್ರಿಕೆಯ ಜಾಹಿರಾತು ವಿಭಾಗದ ಮ್ಯಾನೇಜರ್ ಕಾರ್ತಿಕ್ ಚಂದ್ರಮೌಳಿ. ವಿಜಯವಾಣಿ ಪತ್ರಿಕೆಯ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ರಿಪಬ್ಲಿಕ್ ಕನ್ನಡದ ವಿಡಿಯೊ ಜರ್ನಲಿಸ್ಟ್ ಚಿರಾಗ್, ಹಿರಿಯ ಪತ್ರಿಕಾ ವಿತರಕರಾದ ಮಂಜುನಾಥ್, ಬಿ ಸನ್ಮಾನಿಸಲಾಯಿತು. ಎಸ್ ಎಲ್ ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯದರ್ಶಿ ನಾಗರಾಜ್ ನೇರಿಗೆ ಸ್ವಾಗತಿಸಿದರು. ಗೋವಮೋಹನಕೃಷ್ಣ ವಂದಿಸಿದರು.ನಂದಿನಿ, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕಾಚಿನಕಟ್ಟೆ ಹೊನ್ನಾಳಿ ಚಂದ್ರಶೇಖರ್ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿದರು.
ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ, ಜೇಸುದಾಸ್ ಪಿ, ಕೆ.ತಿಮ್ಮಪ್ಪ, ಗಜೇಂದ್ರ ಸ್ವಾಮಿ, ಚಂದ್ರಶೇಖರ್ ಶೃಂಗೇರಿ, ರಾಮಚಂದ್ರ ಗುಣಾರಿ, ಸೂರ್ಯನಾರಾಯಣ್ ವೈ.ಕೆ, ಗಿರೀಶ್ ಉಮ್ರಾಯ್ ಸೇರಿದಂತೆ ಅನೇಕ ಪತ್ರಕರ್ತರು, ಟ್ರಸ್ಟಿಗಳು ಹಾಜರಿದ್ದರು. ನಗರದ ಪ್ರಮುಖ ಸಂಘಟನೆಗಳು ಮುಖ್ಯಸ್ತರು, ರಾಜಕಾರಣಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
