Shivamogga press trust ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಪತ್ರಿಕಾ ದಿನಾಚರಣೆ : ಪ್ರತಿಭಾ ಪುರಸ್ಕಾರ, ವೃತ್ತಿಬಂಧುಗಳಿಗೆ ಸನ್ಮಾನ
Shivamogga press trust ಶಿವಮೊಗ್ಗ : ಪತ್ರಿಕಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಜುಲೈ 31 ರಂದು ನಗರದ ಪತ್ರಿಕಾ ಭವನದಲ್ಲಿ ಪ್ರತಿಭಾ ಪುರಸ್ಕಾರ, ವೃತ್ತಿಬಂಧುಗಳಿಗೆ ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ನಾಗರಾಜ್ ನೇರಿಗೆ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಹಾಗೂ ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪಿ. ತ್ಯಾಗರಾಜ್ ಉದ್ಘಾಟಿಸಲಿದ್ದಾರೆ. ಇದೇ ವೇಳೆ, ಶಿವಮೊಗ್ಗದ ಛಾಯಾಗ್ರಾಹಕ ನಂದನ್ ಅವರ ನೆನಪಿನಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗಿದೆ. ಇದನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಉದ್ಘಾಟಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್ನ ಅಧ್ಯಕ್ಷರಾದ ಎನ್. ಮಂಜುನಾಥ್ ವಹಿಸಲಿದ್ದು, ಹಿರಿಯ ವಾರ್ತಾಧಿಕಾರಿಗಳಾದ ಆರ್. ಮಾರುತಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಿಕಾ ವೃತ್ತಿಬಂಧುಗಳು ಅಥವಾ ಅವರ ಕುಟುಂಬದ ಸದಸ್ಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ನೇರಿಗೆ ಹೇಳಿದರು.
ಈ ಸಂದರ್ಭದಲ್ಲಿ ಸನ್ಮಾನಕ್ಕೊಳಗಾಗುವ ವೃತ್ತಿಬಂಧುಗಳೆಂದರೆ: ಎಸ್.ಬಿ. ಮಠದ್ (ಸಂಪಾದಕರು, ಸರ್ವಜ್ಞ ಪತ್ರಿಕೆ, ಶಿಕಾರಿಪುರ), ನರೇಶ್ ಕುಮಾರ್ ಟಿ.ಎ. (ವ್ಯವಸ್ಥಾಪಕ ನಿರ್ದೇಶಕರು, ಝೇಂಕಾರ್ ಅಡ್ವರ್ಟೈಸರ್ಸ್, ಬೆಂಗಳೂರು), ನಾರಪ್ಪ ಗೌಡ್ರು (ವ್ಯವಸ್ಥಾಪಕರು, ಮುದ್ರಣ ವಿಭಾಗ, ವಿಜಯ ಕರ್ನಾಟಕ, ಶಿವಮೊಗ್ಗ), ಎಂ.ಸಿ. ರಾಜು (ಹಿರಿಯ ಗ್ರಾಫಿಕ್ ಡಿಸೈನರ್, ವಿಜಯ ಕರ್ನಾಟಕ, ಶಿವಮೊಗ್ಗ), ಕಾರ್ತಿಕ್ ಚಂದ್ರಮೌಳಿ (ಮ್ಯಾನೇಜರ್, ಜಾಹಿರಾತು ವಿಭಾಗ, ಕನ್ನಡ ಪ್ರಭ, ಶಿವಮೊಗ್ಗ), ಶಿವಮೊಗ್ಗ ಯೋಗರಾಜ್ (ಪತ್ರಿಕಾ ಛಾಯಾಗ್ರಾಹಕರು, ವಿಜಯವಾಣಿ, ಶಿವಮೊಗ್ಗ), ಚಿರಾಗ್ (ವಿಡಿಯೋ ಜರ್ನಲಿಸ್ಟ್, ರಿಪಬ್ಲಿಕ್ ಕನ್ನಡ, ಶಿವಮೊಗ್ಗ), ಮತ್ತು ಮಂಜುನಾಥ್ ಬಿ. (ಹಿರಿಯ ಪತ್ರಿಕಾ ವಿತರಕರು, ಶಿವಮೊಗ್ಗ).
ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.
