Shivamogga Police ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 14, 2025 : ಶಿವಮೊಗ್ಗ ಜಿಲ್ಲೆಯಲ್ಲಿ ಸೈಬರ್ ಕ್ರೈಂಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊಬೈಲ್ಗಳ ಮೂಲಕವೇ ವಂಚಕರು, ಹಣವನ್ನು ದೋಚುತ್ತಿದ್ದಾರೆ. ಈ ಸಂಬಂಧ ಕಂಪ್ಲೆಂಟ್ಗಳು ಸಹ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಜಾಗೃತಿ ಅಭಿಯಾನದ ಅಡಿಯಲ್ಲಿ ಶಿವಮೊಗ್ಗ ಪೊಲೀಸರು ಎಚ್ಚರಿಕೆ ಸಂದೇಶಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೀಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಹಲವು ಎಚ್ಚರಿಕೆಗಳನ್ನು ನೀಡಿದ್ದು, ಅಲ್ಲದೆ ವಿವಿಧ ರೀತಿಯಲ್ಲಿ ಆಗಬಹುದಾದ ಸೈಬರ್ ಕ್ರೈಂಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಸೈಬರ್ ವಂಚಕರು ಬ್ಯಾಂಕ್‌ಗಳ ಲೋಗೋಗಳನ್ನು ಮತ್ತು ನಕಲಿ ಆಪ್‌ಗಳನ್ನು (Fake Apps) ಬಳಸಿ ವಂಚನೆ ಮಾಡುತ್ತಿದ್ದಾರೆ. ಈ ನಕಲಿ ಆಪ್‌ಗಳ ಮೂಲಕ ನಿಮ್ಮ ಮೊಬೈಲ್ ಪ್ರವೇಶಿಸಿ, ಹಣಕಾಸಿನ ವಂಚನೆ ಮಾಡುತ್ತಾರೆ ಹೀಗಾಗಿ ಈ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ.
ಬ್ಯಾಂಕ್ ಹೆಸರಲ್ಲಿ ವಂಚನೆ
ನೀವು ವಹಿವಾಟು ನಡೆಸುವ ಬ್ಯಾಂಕ್‌ಗಳ ಲೋಗೋಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಆಪ್‌ಗಳನ್ನು ಸೃಷ್ಟಿಸುವ ವಂಚಕರು, ಆ ಲಿಂಕ್ಗಳನ್ನು ನಿಮ್ಮ ಮೊಬೈಲ್ಗೆ ಕಳುಹಿಸುತ್ತಾರೆ. ಅಲ್ಲದೆ ವಿವಿಧ ಕಾರಣ ಕೊಟ್ಟು ಡೌನ್‌ಲೋಡ್ ಮಾಡಿಕೊಳ್ಳುವಂತೆ ಮಾಡುತ್ತಾರೆ. ಆನಂತರ ನಿಮ್ಮ ಆಧಾರ್, ಪ್ಯಾನ್, ಬ್ಯಾಂಕ್ ಖಾತೆ ವಿವರಗಳನ್ನು ಅಪ್‌ಡೇಟ್ ಮಾಡುವಂತೆ ಕೇಳುತ್ತಾರೆ.ಇವೆಲ್ಲದಕ್ಕೂ ಅನುಮತಿ ನೀಡಿದರೆ, ನಿಮ್ಮ ಮೊಬೈಲ್‌ನ ಸಂಪೂರ್ಣ ನಿಯಂತ್ರಣ ವಂಚಕರ ಕೈಗೆ ಸಿಗುತ್ತದೆ. ಬಳಿಕ ನಿಮ್ಮ ಅಕೌಂಟ್ನಿಂದ ತನ್ನಿಂದತಾನಾಗಿ ಹಣ ಸೈಬರ್ ವಂಚಕರ ಅಕೌಂಟ್ಗೆ ವರ್ಗಾವಣೆ ಆಗುತ್ತದೆ. ಹಾಗಾಗಿ ಈ ವಿಚಾರದಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಹೊರತುಪಡಿಸಿ, ಬೇರೆ ಯಾವುದೇ ಮೂಲಗಳಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದಿರುವುದು ಸುರಕ್ಷಿತ ದಾರಿ. ಇದಕ್ಕಾಗಿ ನಿಮ್ಮ ಮೊಬೈಲ್ನಲ್ಲಿ ಫೋನ್ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿರುವ ‘ಆಪ್ ಮ್ಯಾನೇಜ್‌ಮೆಂಟ್’ ಅಥವಾ ‘ಆಪ್ಸ್’ ಸೆಕ್ಷನ್‌ನಲ್ಲಿ ‘ಅಜ್ಞಾತ ಮೂಲಗಳಿಂದ ಅಪ್ಲಿಕೇಶನ್ ಸ್ಥಾಪಿಸಿ’ (Install unknown apps) ಎನ್ನುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದರೆ, ಅನೌನ್ ಸೋರ್ಸ್ಗಳಿಂದ ಆ್ಯಪ್ಗಳು ಡೌನ್‌ಲೋಡ್ ಆಗುವುದಿಲ್ಲ.

ಕೋಡ್ ಡಯಲ್ ಮಾಡಬೇಡಿ!/ Shivamogga Police
ಇನ್ನೂ ಯಾರಾದರೂ ನಿಮಗೆ ‘#67#’ ಅಥವಾ ‘#002#’ ನಂತಹ ಕೋಡ್‌ಗಳನ್ನು ಡಯಲ್ ಮಾಡಲು ಹೇಳಿದರೆ, ಯಾವುದೇ ಕಾರಣಕ್ಕೂ ಅದನ್ನು ಮಾಡಬೇಡಿ. ಈ ಕೋಡ್‌ಗಳನ್ನು ಬಳಸಿಕೊಂಡು ನಿಮ್ಮ ಕರೆಗಳನ್ನು ಮತ್ತು ಡೇಟಾವನ್ನು ಬೇರೆ ನಂಬರ್‌ಗೆ ವರ್ಗಾಯಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಯಾವುದೇ ರೀತಿಯ ಅನುಮಾನಾಸ್ಪದ ಸಂದೇಶ ಅಥವಾ ಕರೆ ಬಂದಾಗ, ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಸಂಬಂಧಪಟ್ಟ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ಎಂಧು ಸೂಚಿಸಲಾಗಿದೆ.
ಟ್ರೇಡಿಂಗ್ ಲಾಭ, ನಷ್ಟ ಜಾಗ್ರತೆ
ಇದಷ್ಟೆ ಅಲ್ಲದೆ, ಸಿಕ್ಕಾಪಟ್ಟೆ ಲಾಭ ಸಿಗುತ್ತೆ ಎನ್ನುವ ಟ್ರೇಡಿಂಗ್ ಅಥವಾ ಷೇರುಮಾರುಕಟ್ಟೆಯ ಆಮೀಷದ ಬಗ್ಗೆ ಜಾಗ್ರತೆ ವಹಿಸಬೇಕು. ಇಲ್ಲವಾದರೆ, ಈ ಮೂಲದಿಂದಲೂ ಜನರನ್ನು ವಂಚಿಸಲಾಗುತ್ತದೆ. ಈಗಾಗಲೇ ಶಿವಮೊಗ್ಗದಲ್ಲಿ ಹಲವು ಮಂದಿ ಈ ರೀತಿಯ ವಂಚನೆಗೆ ಒಳಗಾಗಿ ಹಣಕಳೆದುಕೊಂಡಿದ್ದಾರೆ. ಈ ವಂಚನೆ ಹೇಗೆ ನಡೆಯುತ್ತದೆ ಎನ್ನುವುದನ್ನ ಗಮನಿಸುವುದಾದರೆ, ಆನ್‌ಲೈನ್ ವಂಚಕರು, ಕಡಿಮೆ ಸಮಯದಲ್ಲಿ ಭಾರಿ ಲಾಭ ಗಳಿಸಬಹುದು ಎಂದು ನಂಬಿಸಿ, ನಿಮ್ಮಿಂದ ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿಸುತ್ತಾರೆ. ಬಳಿಕ ನಾನಾ ಕಾರಣ ಕೊಟ್ಟು ಇನ್ನಷ್ಟು ದುಡ್ಡುಕಟ್ಟುವಂತೆ ನಂಬಿಸುತ್ತಾರೆ. ಕಟ್ಟಿದ ವಾಪಸ್ ಬರಲಿ ಎಂಬ ಕಾರಣಕ್ಕೆ ಮತ್ತಷ್ಟು ದುಡ್ಡುಕಳೆದುಕೊಳ್ಳಬೇಕಾಗುತ್ತದೆ. ಅಂತಿಮವಾಗಿ ನೀವು ಕಟ್ಟಿದ ದುಡ್ಡು ಎಲ್ಲಿಗೆ ಹೋಯಿತು ಎಂಬುದು ಸಹ ತಿಳಿಯುವುದಿಲ್ಲ. ಹಾಗಾಗಿ ಡಿಜಿಟಲ್ ಹೂಡಿಕೆಗಳು ಕ್ರಿಪ್ಟೋಕರೆನ್ಸಿ, ಆನ್‌ಲೈನ್ ಟ್ರೇಡಿಂಗ್ ಇಂತಹ ಆಮೀಷಗಳು ಬಂದಂತಹ ಸಂದರ್ಭದಲ್ಲಿ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 08182-261426 ಅಥವಾ 9480803383 ಗೆ ಕರೆ ಮಾಡಿ ಸಲಹೆ ಪಡೆದು ದೂರು ನೀಡಿ.

ಅಕೌಂಟ್ ಡೀಟೇಲ್ಸ್ ಕೊಡಬೇಡಿ
ಸಾಮಾನ್ಯವಾಗಿ ಯಾವುದೇ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಂದ ಫೋನ್ ಅಥವಾ ಆ್ಯಪ್‌ಗಳ ಮೂಲಕ ವೈಯಕ್ತಿಕ ಮಾಹಿತಿ ಅಥವಾ ಖಾತೆ ವಿವರಗಳನ್ನು ಕೇಳುವುದಿಲ್ಲ. ಹಾಗೆ ಕೇಳಿದ್ದಲ್ಲಿ ಅದು ಫ್ರಾಡ್ ಕಾಲ್ ಅನ್ನುವುದನ್ನ ಮರೆಯದಿರಿ. ಈ ರೀತಿಯಲ್ಲಿ ಯಾವುದೇ ಕರೆಗಳು ಬಂದಲ್ಲಿ ಕೂಡಲೇ www.cybercrime.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 1930 ಸಂಖ್ಯೆಗೆ ಕರೆ ಮಾಡಿ ದೂರು ಕೊಡಿ
ಪಾಸ್ವರ್ಡ್ ಸೇಪ್ಟಿ ಮಾಡ್ಕೊಳ್ಳಿ /Shivamogga Police
ಮೊಬೈಲ್ ಫೋನ್, ಕಂಪ್ಯೂಟರ್ , ಲ್ಯಾಪ್ಟಾಪ್ ಹಾಗೂ ವ್ಯವಹಾರದ ಆ್ಯಪ್‌ಗಳ ಪಾಸ್ವರ್ಡ್ನ್ನು ಕನಿಷ್ಟ ಒಂದರೆಡು ತಿಂಗಳಿಗೊಮ್ಮೆ ಬದಲಾಯಿಸಿ ಮತ್ತು ಕಷ್ಟವಾದ ಪಾಸ್ವರ್ಡ್ ಇಟ್ಟುಕೊಳ್ಳಿ. ನೆನಪಿಗೆ ಬರುವುದಿಲ್ಲ ಎಂದು ಸುಲಭ ಪಾಸ್ವರ್ಡ್ ಇಟ್ಟುಕೊಂಡರೆ ಅದು ಸೈಬರ್ ವಂಚಕರಿಗೂ ಸುಲಭವಾಗಿ ಸಿಗುತ್ತದೆ. ಹಾಗಾಗಿ ರ್ಯಾಂಡರಮ್ ನಂಬರ್ ಗಳ ಬದಲಾಗಿ ನಿಮ್ಮದೆ ಆದ ವಿಶಿಷ್ಟ ಪಾಸ್ವರ್ಡ್ ಬಳಸಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

