Shivamogga news : ಶಿವಮೊಗ್ಗದ ಅಭಿವೃದ್ಧಿ ನಡುವೆಯೂ ಮಲೆನಾಡಿನ ಗ್ರಾಮಗಳ ರಸ್ತೆ ಸಂಕಷ್ಟ: ‘ಡಾಂಬರ್ ಕಾಣದ’ ಬಂಗಲ್ಲಗಲ್ಲು – ಚದರವಳ್ಳಿ ಮಾರ್ಗ
ಶಿವಮೊಗ್ಗ ದೇಶದ ಅತಿದೊಡ್ಡ ಸೇತುವೆಯನ್ನು ಪಡೆದುಕೊಂಡಿದೆ, ವಿಶೇಷವಾದ ವಿಮಾನ ನಿಲ್ಧಾಣವನ್ನು ಪಡೆದುಕೊಂಡಿದೆ. ಅಭಿವೃದ್ಧಿ ಕಣ್ಣುಗಳಲ್ಲಿ ಇದು ಸಾಧನೆಯ ರೂಪ ಪಡೆದುಕೊಂಡರೆ, ಮಲೆನಾಡಿನ ಹಳ್ಳಿಗಳ ಅರಣ್ಯರೋಧನ ಮಾತ್ರ ಯಾರಿಗೂ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಬಂಗಲ್ಲಗಲ್ಲು- ಕುಂಚೆ- ಬಂಗೋಡಿ-ಚದರವಳ್ಳಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ತುಮರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಂಗಲ್ಲಗಲ್ಲು- ಕುಂಚೆ- ಬಂಗೋಡಿ-ಚದರವಳ್ಳಿ ಎಂಬ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಇಲ್ಲಿವರೆಗೂ ಡಾಂಬರ್ ಕಂಡಿಲ್ಲ. ಕೊನೆಪಕ್ಷ ಉತ್ತಮವಾದ ಕಚ್ಚಾರಸ್ತೆಯು ಇಲ್ಲಿಲ್ಲ. ಮಳೆಗಾಲದಲ್ಲಿ ಇಲ್ಲಿ ಜಾರಿಕೊಂಡೆ ಮನೆ ತಲುಪುವ ಸ್ಥಿತಿಯಿದೆ. ಹಾಗಿದ್ದರೂ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಿ, ಈ ಊರ ಸಮಸ್ಯೆಯು ಕಾಣುತ್ತಿಲ್ಲ
Shivamogga news ಬಂಗಲ್ಲಗಲ್ಲು- ಕುಂಚೆ- ಬಂಗೋಡಿ-ಚದರವಳ್ಳಿ ಗ್ರಾಮಗಳಲ್ಲು ಸಂಪರ್ಕಿಸುವ ಈ ರಸ್ತೆ, ಸುಮಾರು 75 ಕ್ಕೂ ಹೆಚ್ಚು ಮನೆಗಳಿಗೆ ದಾರಿಯಾಗಿದೆ. ಸುಮಾರು 5 ಕಿಲೋ ಮೀಟರ್ ದೂರ ಸಾಗುವ ರಸ್ತೆಯಲ್ಲಿ ಮಳೆಗಾಲದಲ್ಲಿ ಸಂಚರಿಸುವುದೇ ಒಂದು ದೊಡ್ಡ ಸಮಸ್ಯೆ. ಅದು ಎಷ್ಟರ ಮಟ್ಟಿಗೆ ಅಂದರೆ, ಇಲ್ಲಿ ಸರ್ಕಾರಿ ಶಾಲೆ ಇದೆ ಆದರೆ ಪಾಠ ಮಾಡಲು ಯಾವ ಶಿಕ್ಷಕರು ಬರುವುದಿಲ್ಲ. ಎಲ್ಲರ ಮನೆಯಲ್ಲೂ ಗ್ಯಾಸ್ ವ್ಯವಸ್ಥೆ ಇದೆ ಆದರೆ ಸಿಲಿಂಡರ್ ಗಾಡಿಯವರು ಮನೆ ಬಾಗಿಲಿಗೆ ಬರಲು ಹಿಂದೇಟು ಹಾಕುತ್ತಾರೆ. ಯಾರಿಗಾದರೂ ಅನಾರೋಗ್ಯ ಸಮಸ್ಯೆ ಆದರೆ ತುರ್ತಾಗಿ ಅಂಬ್ಯುಲೆನ್ಸ್ ಸಹ ಇಲ್ಲಿಗೆ ಬರೋದಿಲ್ಲ. ಕೇಳಿದರೆ, ಆ ರಸ್ತೆಯಲ್ಲಿ ಬಂದರೆ ವಾಹನಗಳ ಜೀವವೂ ಹೋಗುತ್ತೆ ಎನ್ನುತ್ತಾರೆ. ಅಷ್ಟರಮಟ್ಟಿಗೆ ಇಲ್ಲಿನ ರಸ್ತೆ ಕೆಸರು ಗದ್ದೆ ಆಗಿರುತ್ತದೆ. ಮಳೆ ಜಾಸ್ತಿ ಬಂದರೆ, ದಾರಿಯುದ್ದಕ್ಕೂ ನಾಲ್ಕು ಚೀಲ ಆಗುವಷ್ಟು ಭತ್ತ ಬೆಳೆಯಬಹುದು.
ಗ್ರಾಮಸ್ಥರು ಅನೇಕ ಬಾರಿ ರಸ್ತೆ ಅಭಿವೃದ್ದಿ ಮಾಡಿಕೊಡುವಂತೆ ಸಂಬಂಧ ಪಟ್ಟ ಇಲಾಖೆ ಪತ್ರವನ್ನು ಬರೆದಿದ್ದರು. ಆದರೆ, ಯಾರು ಸಹ ಕೇಳಲು ಬಂದಿಲ್ಲ ತೀರಾ ಇತ್ತೀಚೆಗೆ ಜೂನ್ 25 ರಂದು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಭೇಟಿಕೊಟ್ಟು, ಅನುದಾನ ಕೊಟ್ಟರೆ, ರಸ್ತೆ ನಿರ್ಮಿಸುವುದಾಗಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಷ್ಟು ಬಿಟ್ಟರೆ, ಈ ಭಾಗದ ಜನರ ರಸ್ತೆ ಸಮಸ್ಯೆ ಕೇಳೋರು ಯಾರು ಇಲ್ಲದಂತಾಗಿದೆ. ಬಹುಶಃ ಈ ರಸ್ತೆ ನಿರ್ಮಾಣಕ್ಕೂ ಸಹ ಮುಖ್ಯಮಂತ್ರಿಗಳು ಅಥವಾ ಪ್ರಧಾನಿಯವರು ಸೂಚನೆ ಕೊಡಬೇಕೇನೋ?


