shivamogga mahanagara palike : ಖಾತಾ ಅರ್ಜಿ ವಿಲೇವಾರಿಗೆ ಲೋಕಾಯುಕ್ತರ ಗಡುವು | ಶಿವಮೊಗ್ಗ ಪಾಲಿಕೆ ಆಯುಕ್ತರಿಗೆ ಸೂಚನೆ
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಾಕಿ ಉಳಿದಿರುವ ಇ-ಖಾತಾ ಮತ್ತು ಬಿ-ಖಾತಾ ಅರ್ಜಿಗಳನ್ನು ಒಂದು ವಾರದೊಳಗೆ ವಿಲೇವಾರಿ ಮಾಡುವಂತೆ ಲೋಕಾಯುಕ್ತ ಅಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ನಿನ್ನೆ ಮಧ್ಯಾಹ್ನದ ನಂತರ ಲೋಕಾಯುಕ್ತ ಅಧಿಕಾರಿಗಳು ಶಿವಮೊಗ್ಗ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಆಯುಕ್ತರಿಗೆ ಅಧಿಕಾರಿಗಳು ಈ ಸೂಚನೆಯನ್ನು ನೀಡಿದ್ದಾರೆ.
ಪರಿಶೀಲನೆ ವೇಳೆ ವಲಯ-03ಕ್ಕೆ ಸಂಬಂಧಿಸಿದಂತೆ ವಾರ್ಡ್‌ಗಳ ವಿಷಯ ನಿರ್ವಾಹಕರು, ಕಂದಾಯ ಅಧಿಕಾರಿಗಳು, ಕರವಸೂಲಿಗಾರರು, ಮತ್ತು ಡಿ.ಸಿ. ರೆವಿನ್ಯೂ/ಆರ್.ಓ. ರವರ ಹಾಜರಾತಿಯನ್ನು ಪರಿಶೀಲಿಸಲಾಯಿತು. ಅಲ್ಲದೆ, ವಿಷಯ ನಿರ್ವಾಹಕರು ಮತ್ತು ಕಂದಾಯ ಅಧಿಕಾರಿಗಳ ಬಳಿ ಬಾಕಿ ಇರುವ ಇ-ಖಾತಾ ಮತ್ತು ಬಿ-ಖಾತಾ ಅರ್ಜಿಗಳನ್ನು ಪರಿಶೀಲಿಸಿ, ಎಷ್ಟು ಅರ್ಜಿಗಳು ಮಂಜೂರಾಗಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.
shivamogga mahanagara palike : ಈ ಸಮಯದಲ್ಲಿ ಕಚೇರಿಯಲ್ಲಿ ಬೆರಳಣಿಕೆಯಷ್ಟು ಸಿಬ್ಬಂದಿಗಳು ಮಾತ್ರ ಹಾಜರಿದ್ದರು. ಉಳಿದ ಸಿಬ್ಬಂದಿಗಳು ಚಲನ ವಲನ ಪುಸ್ತಕದಲ್ಲಿ ಯಾವುದೇ ನಮೂದು ಇಲ್ಲದೆ ಗೈರಾಗಿದ್ದರು. ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು, ಮಹಾನಗರ ಪಾಲಿಕೆಯ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು.

shivamogga mahanagara palike ಇ-ಖಾತಾ ಮತ್ತು ಬಿ-ಖಾತಾ ಸಂಬಂಧ ಸ್ವೀಕರಿಸಿದ ಅರ್ಜಿಗಳ ವಿಲೇವಾರಿಯನ್ನು ಪರಿಶೀಲಿಸಿದಾಗ, ಸರಿಯಾದ ದಾಖಲೆಗಳನ್ನು ನಿರ್ವಹಿಸದೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಕಂಡುಬಂದಿದೆ. ಈ ಬಗ್ಗೆ ಲೋಕಾಯುಕ್ತರಿಗೆ ವರದಿ ಸಲ್ಲಿಸುವುದಾಗಿ ಮತ್ತು ಒಂದು ವಾರದೊಳಗೆ ಬಾಕಿ ಇರುವ ಇ-ಖಾತಾ ಮತ್ತು ಬಿ-ಖಾತಾ ಅರ್ಜಿಗಳನ್ನು ವಿಲೇವಾರಿಗೊಳಿಸಿ ಪಾಲನಾ ವರದಿಯನ್ನು ಸಲ್ಲಿಸಲು ಮಹಾನಗರ ಪಾಲಿಕೆಯ ಆಯುಕ್ತರಿಗೆ ಪೊಲೀಸ್ ಅಧೀಕ್ಷಕರು ಸೂಚನೆ ನೀಡಿದ್ದಾರೆ.