Shivamogga cyber crime :ಶಿವಮೊಗ್ಗ: ಆನ್‌ಲೈನ್ ಗೇಮಿಂಗ್ ಮೂಲಕ ಸುಲಭವಾಗಿ ಲಾಭ ಗಳಿಸುವ ಆಸೆಗೆ ಬಿದ್ದು, ಶಿವಮೊಗ್ಗದ ವ್ಯಕ್ತಿಯೊಬ್ಬರು ಬರೋಬ್ಬರಿ 22,19,572 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿರುವ ವಂಚನೆಯ ಘಟನೆ ಬೆಳಕಿಗೆ ಬಂದಿದೆ.
ನಗರದ ನಿವಾಸಿಯೊಬ್ಬರು ಅಪರಿಚಿತ ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಹೂಡಿ ಲಾಭ ಗಳಿಸುವ ಉದ್ದೇಶದಿಂದ ಆರಂಭದಲ್ಲಿ ಫೋನ್‌ಪೇ ಮೂಲಕ 300 ಹಣವನ್ನು ಆನ್‌ಲೈನ್‌ನಲ್ಲಿ ಠೇವಣಿ ಮಾಡಿದ್ದರು.
ಇದಾದ ನಂತರ, ಆ ಆ್ಯಪ್‌ಗೆ ಸಂಬಂಧಿಸಿದವರು ಎಂದು ಹೇಳಿಕೊಂಡ ಅಪರಿಚಿತರು ವಾಟ್ಸ್‌ಆ್ಯಪ್ ಮೂಲಕ ದೂರುದಾರರಿಗೆ ಕರೆ ಮಾಡಿದ್ದಾರೆ. ಆಟದಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಬೋನಸ್ ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಇದನ್ನು ನಂಬಿದ ವ್ಯಕ್ತಿ, ತಮ್ಮ ಬ್ಯಾಂಕ್ ಖಾತೆಯಿಂದ ಒಟ್ಟು 22,19,572 ಲಕ್ಷ ರೂಪಾಯಿ ಹಣವನ್ನು ಹಂತ ಹಂತವಾಗಿ ಅವರ ಖಾತೆಗೆ ವರ್ಗಾಯಿಸಿದ್ದಾರೆ.
ಆದರೆ, ಆನ್‌ಲೈನ್ ಗೇಮಿಂಗ್‌ನಲ್ಲಿ ಹಾಕಿದ ಹಣದ ಬಗ್ಗೆ ದೂರುದಾರರು ಫೋನ್ ಮೂಲಕ ಸಂದೇಶ ಕಳುಹಿಸಿ ಕೇಳಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ತಮ್ಮ ಪರಿಚಯಸ್ಥರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಆನ್‌ಲೈನ್ ಗೇಮಿಂಗ್ ಆಟದಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ, ಮೋಸದಿಂದ 22,19,572 ಲಕ್ಷ ರೂ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದವರನ್ನು ಪತ್ತೆ ಮಾಡಿ, ತಮ್ಮ ಹಣವನ್ನು ವಾಪಸ್ಸು ಕೊಡಿಸಬೇಕೆಂದು ದೂರುದಾರರು ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

