ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 26 2025 : ಶಿವಮೊಗ್ಗದಲ್ಲಿ ನಡೆಯುತ್ತಿರುವ ಜಾತಿಗಣತಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಹಾಗೂ ಸವಾಲುಗಳು ಕಂಡುಬರುತ್ತಿರುವ ನಡುವೆ ಜಿಲ್ಲಾಡಳಿತ ಜಾತಿಗಣಿಯಲ್ಲಿ ಪಾಲ್ಗೊಳ್ಳದ ಅಧಿಕಾರಿಯೊಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ. ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಮೊದಲೇ ಜಿಲ್ಲಾಡಳಿತ ತಿಳಿಸಿತ್ತಷ್ಟೆ ಅಲ್ಲದೆ, ಈ ಸಂಬಂಧ ಗುರುದತ್ತ ಹೆಗಡೆಯವರು ಶಿಸ್ತುಕ್ರಮದ ಎಚ್ಚರಿಕೆಯನ್ನು ಖುದ್ದಾಗಿ ನೀಡಿದ್ದರು. ಇದೀಗ ಓರ್ವ ಅಧಿಕಾರಿಯನ್ನು ಅಮಾನತ್ತು ಮಾಡಿದೆ. ಈ ಸಂಬಂಧ ಹೊರಬಿದ್ದ ಆದೇಶದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ತೊಡಕುಂಟು ಮಾಡಿದ ಮತ್ತು ಮೇಲಾಧಿಕಾರಿಗಳ ಆದೇಶಗಳನ್ನು ನಿರ್ವಹಿಸದೆ ಉದ್ಧಟತನದಿಂದ ವರ್ತಿಸಿದ ಆರೋಪದ ಮೇಲೆ, ಹೊಸನಗರ ತಾಲ್ಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ (ಬಿ.ಆರ್.ಸಿ ಕೇಂದ್ರ) ರಂಗನಾಥ್ ಎಂ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ
ಇನ್ನೂ ಆದೇಶದಲ್ಲಿ ಮುಂದುವರಿದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22, 2025 ರಿಂದ ಅಕ್ಟೋಬರ್ 7, 2025 ರೊಳಗೆ ಮುಕ್ತಾಯಗೊಳಿಸಬೇಕಾಗಿರುವ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದ ನೋಡಲ್ ಅಧಿಕಾರಿಯನ್ನಾಗಿ ರಂಗನಾಥ್ ಎಂ. ಅವರನ್ನು ನೇಮಿಸಲಾಗಿತ್ತು. ಆದರೆ, ಸಮೀಕ್ಷಾ ಕಾರ್ಯದ ಪ್ರಮುಖ ಭಾಗವಾದ ‘ಶ್ಯಾಡೋ ಏರಿಯಾಗಳಿಗೆ ಮೇಲ್ವಿಚಾರಕರು ಹಾಗೂ ಗಣತಿದಾರರ (ಶಿಕ್ಷಕರು) ನೇಮಕಾತಿ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಇದ್ದರೂ ಸಹ, ಅವರು ತಮ್ಮ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯದೆ ರಜೆ ಅರ್ಜಿ ಸಲ್ಲಿಸಿ ಕರ್ತವ್ಯದಿಂದ ಅನಧಿಕೃತವಾಗಿ ಗೈರುಹಾಜರಾಗಿದ್ದರು ಎಂದು ಆರೋಪಿಸಲಾಗಿದೆ.
ಅಧಿಕಾರಿಗಳು ಕರೆ ಮಾಡಿದರೂ ದೂರವಾಣಿ ಕರೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯತನ ತೋರಿದ್ದಾರೆ. ಈ ನಡವಳಿಕೆಯಿಂದಾಗಿ ಶ್ಯಾಡೋ ಏರಿಯಾಗಳಲ್ಲಿ ಶಿಕ್ಷಕರನ್ನು ಗಣತಿದಾರರಾಗಿ ನೇಮಕ ಮಾಡಲು ಸಾಧ್ಯವಾಗದೆ, ಹೊಸನಗರ ತಾಲ್ಲೂಕಿನಲ್ಲಿ ಸಮೀಕ್ಷೆಯ ಪ್ರಗತಿಯು ಕುಂಠಿತಗೊಳ್ಳಲು ರಂಗನಾಥ್ ಎಂ. ಅವರು ನೇರ ಕಾರಣರಾಗಿದ್ದಾರೆ ಎಂದು ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ
ತಹಶೀಲ್ದಾರ್ ಅವರು ಈ ನೌಕರರಿಗೆ 24 (ಇಪ್ಪತ್ತನಾಲ್ಕು) ಗಂಟೆಗಳೊಳಗಾಗಿ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಕಾರಣ ಕೇಳಿ ತಿಳುವಳಿಕೆ ಜಾರಿಗೊಳಿಸಿದ್ದರೂ, ಅದಕ್ಕೆ ಅಧಿಕಾರಿಯು ಯಾವುದೇ ಉತ್ತರವನ್ನು ನೀಡಲಿಲ್ಲ.ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ (ಭಾ.ಆ.ಸೇ.) ಅವರು ತಮ್ಮ ಆದೇಶದಲ್ಲಿ ನೌಕರರ ಈ ನಡವಳಿಕೆಯು ಸರ್ಕಾರಿ ಸೇವೆಯಲ್ಲಿನ ನಿರ್ಲಕ್ಷ್ಯತನ, ಬೇಜವಾಬ್ದಾರಿತನ ಮತ್ತು ಉದ್ಧಟತನವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೌಕರರು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 2021 ರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದರಿಂದ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ, ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10(1)(ಎ) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ನೀಡಿದ್ದಾರೆ. ಅಲ್ಲದೆ ಅಮಾನತ್ತಾದ ಅಧಿಕಾರಿ ವಿರುದ್ಧ ನಿಯಮಾನುಸಾರ ಇಲಾಖಾ ವಿಚಾರಣೆ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ (ಶಿವಮೊಗ್ಗ) ಸೂಚಿಸಲಾಗಿದೆ.
ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shimoga DC Suspends BRC Officer Ranganath M for Obstructing Caste Census Work