Shimoga Airport : ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಕೇವಲ ಒಂದು ವಿಮಾನ ಮಾತ್ರ ಸಂಚರಿಸುತ್ತಿದ್ದು, ಅದು ಕೂಡ ಆಗಾಗ್ಗೆ ರದ್ದುಗೊಳ್ಳುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ಪ್ರಸ್ತುತ ಈ ವಿಮಾನ ನಿಲ್ದಾಣವು ತಮಿಳುನಾಡು, ಆಂಧ್ರಪ್ರದೇಶ ಮತ್ತು ಗೋವಾಗೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದು ಸಂತಸದ ಸಂಗತಿ. ಆದರೆ ಇಲ್ಲಿಂದ ತಮಿಳರಿಗೆ, ತೆಲುಗಿನವರಿಗೆ ಮತ್ತು ಗೋವಾಗೆ ಪ್ರಯಾಣಿಸುವವರಿಗೆ ಮಾತ್ರ ಹೆಚ್ಚು ಅನುಕೂಲವಾಗುತ್ತಿದೆ. ಆದರೆ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ ಒಂದು ವಿಮಾನ ಮಾತ್ರ ಸಂಚರಿಸುತ್ತಿದೆ, ಆದರೆ ಚೆನ್ನೈ ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಗೆ ಎರಡೆರಡು ವಿಮಾನಗಳು ಸಂಚರಿಸುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಸಂಚರಿಸುವ ವಿಮಾನ ಸೇವೆಯು ಸರಿಯಾಗಿ ಲಭ್ಯವಾಗುತ್ತಿಲ್ಲ. ಬೆಂಗಳೂರಿನ ವಿಮಾನ ರದ್ದಾಗಿದೆ. ಇದು ತಿಂಗಳಿಗೆ ಕನಿಷ್ಠ 10 ಬಾರಿಯಾದರೂ ರದ್ದಾಗುತ್ತದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ವಿಮಾನವೂ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಲು ಕೂಡ ಹಿಂಜರಿಯುತ್ತಿದ್ದಾರೆ. ವಿಮಾನ ಹೋಗುತ್ತದೆಯೋ ಇಲ್ಲವೋ ಎಂಬ ಗೊಂದಲ ಜನರಲ್ಲಿ ಮೂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಂದಿನ ಬೆಂಗಳೂರು-ಶಿವಮೊಗ್ಗ ವಿಮಾನದಲ್ಲಿಯೂ ಅರ್ಧದಷ್ಟು ಸೀಟುಗಳು ಸಹ ಭರ್ತಿಯಾಗಿಲ್ಲ. ನಿರಂತರವಾಗಿ ಬೆಂಗಳೂರಿಗೆ ಸಂಚರಿಸಲು ಕನಿಷ್ಠ 2 ವಿಮಾನಗಳು ಬೇಕು ಎಂಬುದು ನಮ್ಮ ಬೇಡಿಕೆ. ಬೆಂಗಳೂರಿಗೆ ನಮ್ಮ ರಾಜ್ಯದ ಜನರಿಗೆ ಓಡಾಡಲು ಆದ್ಯತೆಯ ಮೇಲೆ ವಿಮಾನ ಇರಬೇಕಿತ್ತು ಎಂದು ಶಾಸಕರು ಆಗ್ರಹಿಸಿದರು.
ಈ ಸಮಸ್ಯೆಗಳ ಕುರಿತು ಸಂಸದರು ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕುಳಿತು ಮಾತನಾಡಬೇಕು. ತಾವು ಈ ವಿಚಾರವನ್ನು ಈಗಾಗಲೇ ಸಚಿವರಾದ ಎಂ.ಬಿ. ಪಾಟೀಲ್ ಅವರ ಬಳಿಯೂ ಪ್ರಸ್ತಾಪಿಸುವುದಾಗಿ ಹೇಳಿದರು. ಸಂಸದ ರಾಘವೇಂದ್ರ ಅವರು ವಿಮಾನ ನಿಲ್ದಾಣದ ಕುರಿತು ನಿಗಾ ವಹಿಸಬೇಕು. ವಿಮಾನಯಾನವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ಕೇಂದ್ರ ಸರ್ಕಾರವೂ ಮಧ್ಯಪ್ರವೇಶಿಸಿ ಇದನ್ನು ಸರಿಪಡಿಸಬೇಕು ಎಂದರು.