ಇಂದು ಶಿಕಾರಿಪುರ ಬಂದ್, ಕಾರಣವೇನು, ಹೇಗಿದೆ ಪರಿಸ್ಥಿತಿ  

prathapa thirthahalli
Prathapa thirthahalli - content producer

Shikaripur Bandh : ಶಿಕಾರಿಪುರ: ತಾಲ್ಲೂಕಿನ ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರದ ತೆರವು ಮತ್ತು ಹೆಚ್ಚುವರಿ ಟೋಲ್ ಶುಲ್ಕ ವಿರೋಧಿಸಿ ಇಂದು  ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಕರೆಯ ಮೇರೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

Shikaripur Bandh ಬಂದ್‌ಗೆ ಪ್ರಮುಖ ಕಾರಣಗಳು

ಶಿವಮೊಗ್ಗ-ಶಿಕಾರಿಪುರ-ಆನವಟ್ಟಿ ರಾಜ್ಯ ಹೆದ್ದಾರಿಯಲ್ಲಿ ಕೇವಲ 56 ಕಿ.ಮೀ. ಅಂತರದಲ್ಲಿ ಎರಡು ಟೋಲ್ ಸಂಗ್ರಹ ಕೇಂದ್ರಗಳನ್ನು (ಕಲ್ಲಾಪುರ ಮತ್ತು ಕುಟ್ರಳ್ಳಿ ಬಳಿ) ನಿರ್ಮಿಸಿರುವುದು ಜನರ ಪ್ರಮುಖ ಆಕ್ಷೇಪವಾಗಿದೆ. ನಿಯಮದ ಪ್ರಕಾರ, 60 ಕಿ.ಮೀ. ಅಂತರಕ್ಕೆ ಕೇವಲ ಒಂದು ಟೋಲ್ ಇರಬೇಕು.

ರಾಜ್ಯ ಹೆದ್ದಾರಿ ನಿಯಮ 4ರ ಪ್ರಕಾರ ವಿಧಿಸಬೇಕಾದ ಶುಲ್ಕಕ್ಕಿಂತ ದುಪ್ಪಟ್ಟು ದರವನ್ನು ವಾಹನಗಳಿಂದ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಾಗೆಯೇ ಕಾರು, ಜೀಪ್‌ಗಳಿಗೆ 39 ರೂಪಾಯಿ ಪಡೆಯುವ ಬದಲು 70 ರೂಪಾಯಿ  ವಸೂಲಿ ಮಾಡಲಾಗುತ್ತಿದ್ದು, ಇದು ಸಾಮಾನ್ಯ ಪ್ರಯಾಣಿಕರಿಗೆ ಮತ್ತು ಖಾಸಗಿ ಬಸ್ ನಿರ್ವಾಹಕರಿಗೆ ತೀವ್ರ ಹೊರೆಯಾಗಿದೆ.

ತಾಲ್ಲೂಕಿನ 100ಕ್ಕೂ ಹೆಚ್ಚು ಗ್ರಾಮಗಳ ರೈತರು ಕೃಷಿ ಉತ್ಪನ್ನಗಳನ್ನು ಸಂತೆ ಮತ್ತು ಪಟ್ಟಣಕ್ಕೆ ಸಾಗಿಸಲು ಟೋಲ್ ಪ್ಲಾಜಾ ದಾಟಲೇಬೇಕು. ಅಷ್ಟೇ ಅಲ್ಲದೆ, 7 ರಿಂದ 10 ಕಿ.ಮೀ. ಅಂತರದ ಪ್ರಯಾಣಕ್ಕೂ ಶುಲ್ಕ ಪಾವತಿಸಬೇಕಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟೋಲ್ ಬಳಿ ಸರ್ವೀಸ್ ರಸ್ತೆ, ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳು ಇಲ್ಲದಿರುವುದು ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Shikaripur Bandh ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆಯಿಂದಲೇ ಶಿಕಾರಿಪುರ ಪಟ್ಟಣದಲ್ಲಿ ಬೆಂಬಲ ವ್ಯಕ್ತವಾಗಿದೆ.ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಪಟ್ಟಣದಾದ್ಯಂತ ತಮಟೆ ಬಾರಿಸುವ ಮೂಲಕ ಬಂದ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಬಸ್ ನಿಲ್ದಾಣದ ಬಳಿ ಜಾಗೃತಿ ನಡೆಸಲಾಗಿದೆ. 

ಬೆಳಗ್ಗೆಯಿಂದ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಕಚೇರಿಗೆ ತೆರಳುವವರು ಪ್ರಯಾಣಿಸಿದ್ದಾರೆ. ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ. ಆದರೂ, ಮಧ್ಯಾಹ್ನದ ಬಳಿಕ ಅಂಗಡಿ-ಮುಂಗಟ್ಟುಗಳು ಮುಚ್ಚುವ ಸಾಧ್ಯತೆ ಇದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕುಟ್ರಳ್ಳಿ ಟೋಲ್ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಟೋಲ್ ಗೇಟ್‌ನಿಂದ ಎರಡೂ ಬದಿ ನೂರು ಮೀಟರ್ ವ್ಯಾಪ್ತಿಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

Malenadu Today Malenadu Today

Share This Article