ಪ್ರತಿಭಟನೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ ನೇಪಾಳ ಮಾದರಿ ಹೋರಾಟ: ಮಾರುತಿ ಗುರೂಜಿ ಎಚ್ಚರಿಕೆ

prathapa thirthahalli
Prathapa thirthahalli - content producer

Sharavathi pumped storage ಸಾಗರ :ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಸಾಗರದಲ್ಲಿ ಹನ್ನೆರಡು ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವು ಅಕ್ಟೋಬರ್ 15 ರಂದು ಅಂತಿಮಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಗೇರುಸೊಪ್ಪೆ ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಅವರು, ಸರ್ಕಾರವು ಪ್ರತಿಭಟನೆಗಳನ್ನು ಕಡೆಗಣಿಸಿದರೆ, ಯುವ ಸಮೂಹವು ನೇಪಾಳ ಮಾದರಿ ಹೋರಾಟವಾಗಿ ಪರಿವರ್ತಿಸಬೇಕಾಗುತ್ತದೆ ಎಂದು ಗುಡುಗಿದರು.

Sharavathi pumped storage ಸಮಾವೇಶದ ಮೊದಲು ಅವೈಜ್ಞಾನಿಕ ಯೋಜನೆಯ ಅಣಕು ಶವ ಯಾತ್ರೆಯನ್ನು ಸಾಗರದ ಪ್ರಮುಖ ರಸ್ತೆಯಲ್ಲಿ ನಡೆಸಲಾಯಿತು. ನಗರಸಭೆ ಆವರಣದಲ್ಲಿ ನಡೆದ ಸಮಾವೇಶದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಗುರೂಜಿ, “ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಶವ ಅನಾಥವಾಗಿದೆ. ಯೋಜನೆಯನ್ನು ರೂಪಿಸಿದವರು, ಸರ್ಕಾರದ ಪ್ರತಿನಿಧಿಗಳು ಅಥವಾ ಗುತ್ತಿಗೆದಾರರು ಯಾರೂ ಇಲ್ಲಿಗೆ ಬರಲಿಲ್ಲ. ಇದರರ್ಥ ಇದು ಸರ್ಕಾರದ್ದೇ ಯೋಜನೆಯಲ್ಲ. ಈ ಯೋಜನೆ ಮತ್ತೆ ಭೂಮಿಗೆ ಬರುವುದು ಬೇಡ ಎಂಬ ಕಾರಣಕ್ಕಾಗಿ ಶವ ಸಂಸ್ಕಾರ ನಡೆಸಿ ಮುಕ್ತಿ ಕಾಣಿಸಿದ್ದೇವೆ” ಎಂದು ಮಾರ್ಮಿಕವಾಗಿ ಹೇಳಿದರು.

- Advertisement -

ಗುರೂಜಿ ಅವರು ಯೋಜನೆಯ ಬಗ್ಗೆ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. “ಸರ್ಕಾರ ಇದುವರೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಡಿಪಿಆರ್ ಪ್ರತಿ ನೀಡಿಲ್ಲ. ಯಾವುದೇ ಪ್ರಮುಖ ಇಲಾಖೆಗಳ ಅನುಮತಿ ಅಥವಾ ಸುಪ್ರೀಂಕೋರ್ಟ್ ಆದೇಶವನ್ನೂ ಪಡೆದಿಲ್ಲ. ಆದ್ದರಿಂದಲೇ, ಸರ್ಕಾರ ಮತ್ತು ಗುತ್ತಿಗೆದಾರರು ನಮ್ಮ ೪೮ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡುತ್ತಿದ್ದಾರೆ” ಎಂದು ಅವರು ಆರೋಪಿಸಿದರು.

Sharavathi pumped storage ಹಣ ಹೊಡೆಯುವ ಹುನ್ನಾರವೇ ಯೋಜನೆ?

ಯಾವ ಉದ್ದೇಶಕ್ಕಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಪ್ರಶ್ನಿಸಿದ ಗುರೂಜಿ, “ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ನಾವು ಗೋವಾ, ಮಹಾರಾಷ್ಟ್ರ, ಒರಿಸ್ಸಾ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುತ್ತಿದ್ದೇವೆ. ವಿದ್ಯುತ್ ಕೊರತೆಯಿಲ್ಲದಿದ್ದರೂ, ಭವಿಷ್ಯದ ಉದ್ದೇಶದಿಂದ ಯೋಜನೆ ಎನ್ನುವ ಸರ್ಕಾರದ ಹೇಳಿಕೆ ಸುಳ್ಳು. ಇದು ಕೇವಲ ಹಣ ಹೊಡೆಯುವ ಹುನ್ನಾರ” ಎಂದು ಗಂಭೀರ ಆರೋಪ ಮಾಡಿದರು.

ಪ್ರತಿಭಟನೆಯನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ ಎಂದು ಘೋಷಿಸಿದ ಗುರೂಜಿ, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ವಿಧಾನಸೌಧ, ಮತ್ತು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುವುದಾಗಿ ತಿಳಿಸಿದರು. ಜೊತೆಗೆ, ಸುಪ್ರೀಂಕೋರ್ಟ್‌ನ ಹಸಿರು ಪೀಠಕ್ಕೂ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. “ಯೋಜನೆಯ ಯಾವುದೇ ದಾಖಲೆ ನೀಡಿದರೂ ತಕ್ಷಣ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ. ಯಾವ ಬೆಲೆ ತೆತ್ತಾದರೂ ಹೋರಾಟದ ಮೂಲಕ ಯೋಜನೆ ಕೈಬಿಡುವವರೆಗೂ ಹೋರಾಟ ಮುಂದುವರಿಸುತ್ತೇವೆ” ಎಂದು ಗುಡುಗಿದರು.

ಪ್ರತಿಭಟನೆಯ ನಂತರ ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ, ಕರ್ನಾಟಕ ಮುಖ್ಯಮಂತ್ರಿ ಮತ್ತು ಇಂಧನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುವ ಕಾರಣ ತಕ್ಷಣ ಯೋಜನೆ ಕೈಬಿಡುವಂತೆ ಒತ್ತಾಯಿಸಲಾಗಿದೆ. ಈಗಾಗಲೇ ಬೃಹತ್ ಯೋಜನೆಗಳಿಂದ ಪಶ್ಚಿಮಘಟ್ಟಗಳಲ್ಲಿ ಭಾರಿ ಪ್ರಮಾಣದ ಅರಣ್ಯ ನಾಶವಾಗಿದ್ದು, 400 ಎಕರೆ ಸಂರಕ್ಷಿತ ಪರಿಸರವನ್ನು ನಾಶಪಡಿಸುವ ಈ ಯೋಜನೆಯನ್ನು ಕೈಬಿಡಬೇಕು. ವಿದ್ಯುತ್ ಉತ್ಪಾದನೆಗೆ ಪರಿಸರಕ್ಕೆ ಮಾರಕವಾಗದ ಪರ್ಯಾಯ ಆಧುನಿಕ ಮಾರ್ಗಗಳು ಮತ್ತು ತಂತ್ರಜ್ಞಾನಗಳು ಲಭ್ಯವಿರುವಾಗ ಜಲವಿದ್ಯುತ್ ಯೋಜನೆ ಬೇಡ. ಅಲ್ಲದೆ, ಲಿಂಗಿನಮಕ್ಕಿ, ತಲಕಳಲೆ, ಜೋಗ್ ವಿದ್ಯುತ್ ಉತ್ಪಾದನಾ ಘಟಕಗಳ ಸುತ್ತಮುತ್ತಲಿನ 20 ಕಿ.ಮೀ. ಪ್ರದೇಶದಲ್ಲಿ ಯಾವುದೇ ಬೃಹತ್ ಯೋಜನೆಗಳನ್ನು ಕೈಗೊಳ್ಳದಂತೆ ಕೆಆರ್‌ಎಸ್ ಮಾದರಿಯಲ್ಲಿ ಶರಾವತಿ ಯೋಜನಾ ಪ್ರದೇಶಕ್ಕೂ ನಿಷೇಧ ಹೇರುವ ಮೂಲಕ ಪರಿಸರ ಸಂರಕ್ಷಣೆ ಮಾಡುವಂತೆ ಮನವಿ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *