ಸಾಗರ, : ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಚಂದ್ರಮಾವಿನ ಕೊಪ್ಪಲು ಎಂಬಲ್ಲಿ ರೈಲಿನ ಅಡಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಗಳಿಂದಲೇ ಆಪರೇಷನ್ ಮೊಬೈಲ್ ! ಸಿಕ್ತು 10 ಸಾವಿರ ಬಹುಮಾನ
ತಾಳಗುಪ್ಪದಿಂದ ಮೈಸೂರಿನತ್ತ ಸಾಗುತ್ತಿದ್ದ ರೈಲು ಸಂಖ್ಯೆ 16205 ಚಂದ್ರಮಾವಿನ ಕೊಪ್ಪಲು ಸಮೀಪಿಸುತ್ತಿದ್ದಂತೆ, 61 ವರ್ಷದ ವ್ಯಕ್ತಿಯೊಬ್ಬರು ಹಳಿಗಳ ಮೇಲೆ ಜಿಗಿದು ಸಾವಿಗೆ ಶರಣಾಗಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರೈಲಿನಲ್ಲಿದ್ದ ಲೋಕೋ ಪೈಲೆಟ್ ಸಮಯ ಪ್ರಜ್ಞೆ ಮೆರೆದು ತಕ್ಷಣವೇ ಬ್ರೇಕ್ ಹಾಕಿದ್ದರಿಂದ ಆಗಬಹುದಾದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ರೈಲು ಹಳಿಯ ಮೇಲೆ ವ್ಯಕ್ತಿ ಬಿದ್ದಿರುವುದನ್ನು ಗಮನಿಸಿದ ಲೋಕೋ ಪೈಲೆಟ್ ಮತ್ತು ಗಾರ್ಡ್, ಕೂಡಲೇ ರೈಲನ್ನು ನಿಲ್ಲಿಸಿ ಕೆಳಗಿಳಿದು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿದ್ದ ಖಾಸಗಿ ಆಂಬ್ಯುಲೆನ್ಸ್ ಮಾಲೀಕ ಗಂಗಾಧರ್ ಅವರ ನೆರವಿನೊಂದಿಗೆ ಗಾಯಾಳು ವ್ಯಕ್ತಿಯನ್ನು ತಕ್ಷಣವೇ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ತಳಲೆ ಪಂಚಾಯಿತಿ ವ್ಯಾಪ್ತಿಯ ಮೂಗದತ್ತಿ ಗ್ರಾಮದ ನಿವಾಸಿ ಎಸ್. ನರೇಂದ್ರ ಎಂದು ಗುರುತಿಸಲಾಗಿದೆ. ಆದರೆ, ಅವರ ಬಳಿ ಪತ್ತೆಯಾದ ಚಾಲನಾ ಪರವಾನಗಿಯಲ್ಲಿ ಉಡುಪಿ ಜಿಲ್ಲೆಯ ಬಡಗಬೆಟ್ಟು ಕುಕ್ಕಿಕಟ್ಟೆಯ ವಿಳಾಸವಿರುವುದು ಕಂಡುಬಂದಿದ್ದು, ಇದು ಪೊಲೀಸರಲ್ಲಿ ಗೊಂದಲ ಮೂಡಿಸಿದೆ. ಈ ನಿಟ್ಟಿನಲ್ಲಿ ರೈಲ್ವೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ವ್ಯಕ್ತಿಯ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
