ಸಾಗರದ ಮಾರಿಕಾಂಬಾ ಜಾತ್ರೆ, ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತರು, ವಿಡಿಯೋ ನೋಡಿ 

ಶಿವಮೊಗ್ಗ    : ಒಂಬತ್ತು ದಿನಗಳ ಕಾಲ ನಡೆಯಲಿರುವ ಸಾಗರದ ಮಾರಿಕಾಂಬಾ ದೇವಿಯ ಜಾತ್ರೆ ರಂಗೇರಿದ್ದು, ಜನರು ಭಕ್ತಿಯ ಸಾಗರದಲ್ಲಿ ಮಿಂದೆದ್ದಿದ್ದಾರೆ. ಜನಪದ ಹಾಗೂ ಶಾಸ್ತ್ರೀಯ ವಿಧಿವಿಧಾನದಂತೆ ಹಬ್ಬಕ್ಕೆ ಚಾಲನೆ ದೊರೆತಿದೆ. ಬ್ರಾಹ್ಮಿ ಮುಹೂರ್ತದಲ್ಲಿ ತವರು ಮನೆ ದೇವಸ್ಥಾನದಲ್ಲಿ ಮಾರಿಕಾಂಬಾ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಆರಂಭಿಸಲಾಯಿತು. ಭಕ್ತರು ಜಾತಿಮತ ಭೇದಭಾವವಿಲ್ಲದೆ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

Sagara Marikamba Jatre 2026 ನಾಡಿನಲ್ಲಿಯೇ ಪ್ರಸಿದ್ಧವಾಗಿರುವ ಸಾಗರದ ಮಾರಿಕಾಂಬಾ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಮೊದಲ ದಿನ ಮಾರಿಕಾಂಬಾ ದೇವಿಗೆ ಮಾಂಗಲ್ಯ ತರುವ ಶಾಸ್ತ್ರ ನಡೆಯಿತು. ಬೆಳಗ್ಗೆ ಐದು ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ತವರು ಮನೆ ದೇವಸ್ಥಾನದಲ್ಲಿ ಮಾರಿಕಾಂಬಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಆರಂಭಿಸಲಾಯಿತು. ನಂತರ ರಾತ್ರಿ ಮಾರಿಕಾಂಬಾ ದೇವಿಯ ಜಾತ್ರೆಯ ಅಂಗವಾಗಿ ರಾಜಬೀದಿ ಉತ್ಸವ ಹಾಗೂ ದೇವಿಯ ದಂಡಿನ ಮೆರವಣಿಗೆ ರಾತ್ರಿಯಿಂದ ಬೆಳಗಿನ ಜಾವದವರೆಗೆ ವಿಜೃಂಭಣೆಯಿಂದ ನಡೆಯಿತು. ಪೋತರಾಜನಿಂದ ಚಾಟಿ ಸೇವೆ ನಡೆದ ನಂತರ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ಜರುಗಿತು.

Sagara Marikamba Jatre 2026 ಇದೇ ಸಂದರ್ಭದಲ್ಲಿ ಅಸಾದಿಯರು ದೇವಿಯನ್ನು ಹೊರಡಿಸಲು ಬೈಗುಳ ಹೇಳುವ ಶಾಸ್ತ್ರ ಕೂಡ ನಡೆಯಿತು. ರಾತ್ರಿಪೂರ್ತಿ ನಡೆದ ಉತ್ಸವದಲ್ಲಿ ವಿವಿಧ ಜನಪದ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು. ದೇವಿಯ ವಿಗ್ರಹವನ್ನು ರಥಕ್ಕೆ ಏರಿಸುತ್ತಿದ್ದಂತೆ ಹರಕೆ ಹೊತ್ತ ಭಕ್ತರು ಕೋಳಿಗಳನ್ನು ಹಾರಿಸುವ ಮೂಲಕ ಹರಕೆ ತೀರಿಸಿದರು. ದೇವಿಯು ಗಂಡನ ಮನೆ ಪ್ರವೇಶಿಸುತ್ತಿದ್ದಂತೆ ಉಪ್ಪಾರ ಹಾಗೂ ಕುರುಬ ಸಮಾಜದ ಘಟೇವುಗಳ ಆಗಮನವಾಯಿತು. ನಂತರ ದೇವಿಯನ್ನು ಮನೆ ತುಂಬಿಸಿಕೊಳ್ಳುವ ಹಾಗೂ ಚರಗ ಬೀರುವ ಶಾಸ್ತ್ರ ನಡೆದು ಪೂಜಾ ಕಾರ್ಯಕ್ರಮ ನಡೆಯಿತು. ತುಲಾಭಾರ, ಸೊಪ್ಪಿನುಡಿಗೆ ಸೇವೆ ಸೇರಿದಂತೆ ಭಕ್ತರು ವಿವಿಧ ರೀತಿಯ ಹರಕೆ ತೀರಿಸಿದರು.

ಮಾರಿ ಹಬ್ಬದಲ್ಲಿ ವಿಶೇಷವಾಗಿ ಎಲ್ಲಾ ಸಮಾಜದವರಿಂದಲೂ ಪೂಜಾ ಕಾರ್ಯಗಳು ನಡೆಯುವುದು ಇಲ್ಲಿನ ವಿಶೇಷತೆಗಳಲ್ಲೊಂದು. ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವಿಗೆ ಮಡಿವಾಳ ಸಮಾಜದವರಿಂದ ಮೇಲ್ಕಟ್ಟು ಕಟ್ಟಲಾಗುತ್ತದೆ. ಗುಡಿಗಾರರಿಂದ ಕೋರೆಹಲ್ಲು ಹಚ್ಚಲ್ಪಡುತ್ತದೆ. ಈ ಹಿಂದೆ ಉಪ್ಪಾರರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದ ಒಂಬತ್ತು ಘಟೇವುಗಳನ್ನು ಮೆರವಣಿಗೆಯಲ್ಲಿ ತಂದು ಶ್ರೀದೇವಿಯ ಎದುರಿನಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಿಯ ಮುಂಭಾಗದಲ್ಲಿ ಕಟ್ಟಿದ ಪರದೆಯನ್ನು ತೆಗೆಯುವುದರ ಮೂಲಕ ಶ್ರೀದೇವಿಗೆ ದೀಪದ ಜ್ವಾಲೆ ಬೀಳುವಂತೆ ಮಾಡಿ ಜೀವಕಳೆ ತುಂಬಲಾಗುತ್ತದೆ.

ಈ ದೀಪವು ಮುಂದೆ ದೇವಿಯನ್ನು ಬಿಡುವವರೆಗೂ ಇರಬೇಕೆಂಬುದು ಇಲ್ಲಿನ ಪ್ರತೀತಿ. ಛಲವಾದಿ ಮತ್ತು ಅಸಾದಿ ಸಮಾಜದವರು ತರುವ ಕುಂಬ ದೀಪವನ್ನು ಈ ಮೊದಲು ಪ್ರತಿಷ್ಠಾಪಿಸಿದ ದೀಪದ (ಘಟೇವು) ಹಿಂಭಾಗದಲ್ಲಿಟ್ಟು ಪೂಜಿಸಲಾಗುವುದು. ಉಪ್ಪಾರರು ತರುವ ಬಲಿಯನ್ನವನ್ನು ಛಲವಾದಿ ಸಮಾಜದವರು ದೇವಿಯ ರಥ ಬಂದ ದಾರಿಯುದ್ದಕ್ಕೂ ಬೀರುವ ಸಂಪ್ರದಾಯ ನಡೆಯುತ್ತದೆ. ಕೊನೆಯ ದಿನ ದೇವಿಯನ್ನು ವನಕ್ಕೆ ಬಿಟ್ಟ ಸಂದರ್ಭದಲ್ಲಿ ಸಮಗಾರ ಸಮಾಜದವರು ದೀವಟಿಗೆ ಮತ್ತು ಕುರುಬ ಸಮಾಜದವರು ಚೌಟಿಕೆಗಳನ್ನು ತರುತ್ತಾರೆ. ಕಂಚುಗಾರರು ಮೊಸರನ್ನ ನೈವೇದ್ಯ ಮಾಡುತ್ತಾರೆ. ಭೋವಿ ಸಮಾಜದವರು ದೇವಿಯ ವಿಗ್ರಹವನ್ನು ಕಳಚುವುದು ಮಾರಿಹಬ್ಬದ ಸಂಪ್ರದಾಯಗಳಲ್ಲಿ ಒಂದಾಗಿದೆ.

ಮಾರಿ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಾಗಿರದೆ ಅಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಭಾವೈಕ್ಯತೆ ಹಾಗೂ ಬಾಂಧವ್ಯಗಳ ಬೆಸುಗೆ ಇದೆ. ಕಲೆಗಳ ಅನಾವರಣ, ಸಂಪ್ರದಾಯಗಳ ಸಮಷ್ಟಿ ಮತ್ತು ಸೌಹಾರ್ದತೆಯ ಸಂಕೇತವಾಗಿ ಆಚರಿಸಲ್ಪಡುವ ಸಾಗರದ ಮಾರಿಕಾಂಬಾ ಜಾತ್ರೆ ಜನರ ಮನದಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತದೆ. ಸತತವಾಗಿ ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ ಒಂದು ರೀತಿಯ ವಿಶಿಷ್ಟವಾದ ಪರಂಪರೆಯನ್ನು ಬಿಂಬಿಸುತ್ತದೆ. ಜಾತಿಮತ ಭೇದದ ಚೌಕಟ್ಟನ್ನು ಮೀರಿ ಮಾನವತಾವಾದವನ್ನು ಎತ್ತಿ ಹಿಡಿಯುವಂತಹ ಜಾತ್ರೆ ಇದಾಗಿದೆ.

Sagara Marikamba Jatre 2026 Full Details

Sagara Marikamba Jatre 2026 Full Details
Sagara Marikamba Jatre 2026 Full Details
shivamogga car decor sun control house
shivamogga car decor sun control house
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು