ಬೆಂಗಳೂರು : ಭಾರತೀಯ ರೈಲ್ವೆ ಇಲಾಖೆಯು ದೇಶದಾದ್ಯಂತ ಇರುವ ನಿರುದ್ಯೋಗಿ ಯುವಜನತೆಗೆ ಈ ಹೊಸ ವರ್ಷದಲ್ಲಿ ಬೃಹತ್ ಉದ್ಯೋಗಾವಕಾಶವೊಂದನ್ನು ಕಲ್ಪಿಸಿದೆ.
ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ‘ಡಿ’ ವಿಭಾಗದಲ್ಲಿ ಒಟ್ಟು 22,000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಅತಿ ಹೆಚ್ಚು ಅಂದರೆ 11,000 ಟ್ರ್ಯಾಕ್ ಮೇಂಟೇನರ್ ಹಾಗೂ 5,000 ಪಾಯಿಂಟ್ಸ್ಮನ್ ಹುದ್ದೆಗಳು ಲಭ್ಯವಿವೆ.
ಇವುಗಳ ಜೊತೆಗೆ ಸಹಾಯಕ ಸಿ ಆಂಡ್ ಡಬ್ಲ್ಯೂ ಮತ್ತು ಎಸ್ ಆಂಡ್ ಟಿ ಸೇರಿದಂತೆ ವಿವಿಧ ತಾಂತ್ರಿಕೇತರ ವಿಭಾಗಗಳಲ್ಲಿಯೂ ಸಾವಿರಾರು ಅವಕಾಶಗಳಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10ನೇ ತರಗತಿ (ಎಸ್ಎಸ್ಎಲ್ಸಿ) ಅಥವಾ ಐಟಿಐ ಉತ್ತೀರ್ಣರಾಗಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 33 ವರ್ಷದೊಳಗಿರಬೇಕು ಹಾಗೂ ಸರ್ಕಾರದ ನಿಯಮದಂತೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000 ರೂಪಾಯಿಗಳ ಆರಂಭಿಕ ವೇತನದೊಂದಿಗೆ ಕೇಂದ್ರ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರೆಯಲಿವೆ. ಆಸಕ್ತರು ಜನವರಿ 31 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 2, 2026 ಕೊನೆಯ ದಿನಾಂಕವಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

RRB Group D Recruitment Apply for 22,000 Posts

