ಶಿವಮೊಗ್ಗ:ರಾಜ್ಯದಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿ ಮತ್ತು ಧಾನ್ಯಗಳ ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೂಡಲೇ ಪಡಿತರ ಮಳಿಗೆಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಕೇಲ್ ಹಾಗೂ ಪಡಿತರ ಸಾಗಿಸುವ ಲಾರಿಗಳಲ್ಲಿ ಜಿಪಿಎಸ್ (GPS) ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ರಾಜ್ಯ ಪಡಿತರ ವಿತರಕರ ಸಂಘವು ಆಗ್ರಹಿಸಿದೆ.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ಟಿ. ಕೃಷ್ಣಪ್ಪ ಅವರು, ಹಲವಾರು ವರ್ಷಗಳಿಂದಲೂ ಈ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದೆ ಇಡುತ್ತಿದ್ದೇವೆ. ಕಳೆದ ವರ್ಷ ಈ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ₹30 ಕೋಟಿ ಹಣವನ್ನು ತೆಗೆದಿಟ್ಟಿತ್ತು. ಆದರೆ, ಈ ಯೋಜನೆ ಇನ್ನೂ ಕೂಡ ಜಾರಿಯಾಗಿಲ್ಲ. ಪಡಿತರ ಅಕ್ಕಿಯಲ್ಲಿ ನಡೆಯುವ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಬೇಕಾದರೆ, ಈ ಕುರಿತು ಮುಖ್ಯಮಂತ್ರಿಗಳು ಕೆಳ ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಕೃಷ್ಣಪ್ಪನವರು ಒತ್ತಾಯಿಸಿದರು.
Ration Dealers ಪ್ರಿಂಟರ್ ಮಿಷನ್ ಸದ್ಯಕ್ಕೆ ಬಳಕೆಗೆ ಇಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರವು ಈಗಾಗಲೇ ಎಲ್ಲಾ ಪಡಿತರ ಮಳಿಗೆಗಳಲ್ಲಿ ಪ್ರಿಂಟರ್ ಮಿಷನ್ ಅನ್ನು ಬಳಸಲು ಸೂಚಿಸಿದೆ. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಸದ್ಯಕ್ಕೆ ಇನ್ನೆರಡು ತಿಂಗಳುಗಳ ಕಾಲ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ, ಕಮಿಷನ್ ಹಣದ ಕುರಿತು ಪ್ರಸ್ತಾಪಿಸಿದ ಟಿ. ಕೃಷ್ಣಪ್ಪ ಅವರು, ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಮೂರು ತಿಂಗಳ ಹಾಗೂ ಕೇಂದ್ರ ಸರ್ಕಾರದ ನಾಲ್ಕು ತಿಂಗಳ ಕಮಿಷನ್ ಸೇರಿ ಒಟ್ಟು 450 ಕೋಟಿ ರೂಪಾಯಿ ರಾಜ್ಯಕ್ಕೆ ಕಮಿಷನ್ ಬರಬೇಕಿದೆ ಎಂದರು.
Ration Dealers Demand CCTV, GPS Installation


