Rashtra Bhakta Balaga ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ಥಳೀಯ ಆಡಳಿತದ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಶಿವಮೊಗ್ಗ ನಗರವು ಸಮಸ್ಯೆಗಳ ಆಗರವಾಗುತ್ತಿದೆ. ಜನಪ್ರತಿನಿಧಿಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ದುರಾಡಳಿತದಿಂದ ನಗರಾಡಳಿತ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ರಾಷ್ಟ್ರ ಭಕ್ತ ಬಳಗದ ಪ್ರಮುಖರಾದ ಕೆ.ಇ. ಕಾಂತೇಶ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಉಪಯೋಗಕ್ಕಾಗಿ ಸರ್ಕಾರಿ ಹಣದಿಂದ ನಿರ್ಮಿಸಲಾದ ಹಲವು ವಾಣಿಜ್ಯ ಸಂಕೀರ್ಣಗಳು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ ಅವುಗಳನ್ನು ಫಲಾನುಭವಿಗಳಿಗೆ ವಿತರಿಸಿಲ್ಲ. ಇದರಿಂದ ಬಾಡಿಗೆ ರೂಪದಲ್ಲಿ ಪಾಲಿಕೆಗೆ ಬರಬಹುದಾಗಿದ್ದ ಕೋಟ್ಯಾಂತರ ರೂಪಾಯಿ ಹಣ ವ್ಯರ್ಥವಾಗುತ್ತಿರುವುದಲ್ಲದೆ, ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪುತ್ತಿವೆ ಎಂದು ದೂರಿದರು.

ಶಿವಪ್ಪ ನಾಯಕ ಹೂವಿನ ಮಾರುಕಟ್ಟೆ, ಗಾರ್ಡನ್ ಏರಿಯಾ ಮತ್ತು ಗಾಂಧಿನಗರ ವಾಣಿಜ್ಯ ಸಂಕೀರ್ಣಗಳು ಪಾಲಿಕೆಗೆ ಹಸ್ತಾಂತರಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಅವುಗಳಿಂದ ಬಾಡಿಗೆ ರೂಪದಲ್ಲಿ ಪಾಲಿಕೆಗೆ ಬರಬಹುದಾಗಿದ್ದ ಅಂದಾಜು11,51,00,000.00 ಕೋಟಿಯಷ್ಟು ಹಣವು ವ್ಯರ್ಥವಾಗಿದೆ. ಇದರ ಜೊತೆಗೆ, ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಕಟ್ಟಡವೂ ಪೂರ್ಣಗೊಂಡಿದ್ದು, ಅದನ್ನು ಇಲ್ಲಿಯವರೆಗೂ ವ್ಯಾಪಾರಿಗಳಿಗೆ ಹಂಚಿಕೆ ಮಾಡದಿರುವ ಮೂಲಕ ಸುಮಾರು 500 ಕುಟುಂಬಗಳ ದುಡಿಮೆಯನ್ನು ಪಾಲಿಕೆ ತನ್ನ ನಿರ್ಲಕ್ಷ್ಯತನದಿಂದ ಹಾಳುಮಾಡಿದೆ ಎಂದು ಅವರು ಆರೋಪಿಸಿದರು.
Rashtra Bhakta Balaga ಭ್ರಷ್ಟಾಚಾರ ಮತ್ತು ಕಾನೂನು ನಿರ್ಲಕ್ಷ್ಯದ ಆರೋಪ
ನಗರದಲ್ಲಿ ಜಾರಿಗೆ ಬಂದಿರುವ ಇ-ಸ್ವತ್ತು ವ್ಯವಸ್ಥೆಯ ನೋಂದಣಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಲಂಚ ಕೊಟ್ಟರೂ ಕೆಲಸವಾಗುತ್ತಿಲ್ಲ ಎಂಬ ದೂರುಗಳು ಸರ್ವೇ ಸಾಮಾನ್ಯವಾಗಿವೆ. ಪಾಲಿಕೆಯ ಆಯುಕ್ತರೇ ಏಜೆಂಟರನ್ನು ನೇಮಿಸಿಕೊಂಡು, ಅವರ ಮೂಲಕ ಹೋದವರಿಗೆ ಮಾತ್ರ ಇ-ಸ್ವತ್ತು ಯಾವುದೇ ತೊಂದರೆ ಇಲ್ಲದೆ ಆಗುತ್ತದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಆದ್ದರಿಂದ ಇ-ಸ್ವತ್ತು ನೋಂದಣಿಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಸತಿ ರಹಿತ ಬಡವರಿಗಾಗಿರುವ ಆಶ್ರಯ ಯೋಜನೆಯ ಮನೆಗಳಿಗಾಗಿ ನಗರದ ಕಡು ಬಡವರು ಸಾಲ ಮಾಡಿ ಸರ್ಕಾರಕ್ಕೆ ಹಣ ಸಂದಾಯ ಮಾಡಿ ಹಲವು ವರ್ಷಗಳು ಕಳೆದರೂ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿದ್ದರೂ, ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡದಿರುವುದರಿಂದ ಬಡವರು ಮನೆಯೂ ಸಿಗದೆ, ಹಣವೂ ಇಲ್ಲದೆ ಕಂಗಾಲಾಗಿದ್ದಾರೆ. ಸಂಬಂಧಪಟ್ಟ ಸಚಿವರು ಮನೆಗಳನ್ನು ಪೂರ್ಣಗೊಳಿಸುವ ಬರವಸೆಯನ್ನು ನೀಡಿದ್ದರೂ ಅದು ಈಡೇರಿಲ್ಲ.
Rashtra Bhakta Balaga ಇದಲ್ಲದೆ, ನಗರದ ರಸ್ತೆಗಳೆಲ್ಲಾ ಗುಂಡಿ ಬಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, 24/7 ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಳೆಯ ಪಾಲಿನ ನೀರೂ ಇಲ್ಲದೆ, ಈಗಿನ 24/7 ನೀರಿನ ಸರಬರಾಜೂ ಇಲ್ಲದೆ ಜನರು ತೊಂದರೆಗೊಳಗಾಗಿದ್ದಾರೆ. ಇದರೊಂದಿಗೆ, ಬೀದಿ ನಾಯಿಗಳ ಕಾಟ, ಬೀದಿ ದೀಪದ ತೊಂದರೆ ಮತ್ತು ಸ್ವಚ್ಛತೆಯ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಶಿವಮೊಗ್ಗದ ಜನತೆ ಪರಿತಪಿಸುತ್ತಿದ್ದಾರೆ ಎಂದು ಕಾಂತೇಶ್ ಅವರು ತಿಳಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಬಾಕಿ ಉಳಿದಿರುವ ವಾಣಿಜ್ಯ ಸಂಕೀರ್ಣಗಳನ್ನು 15 ದಿನದೊಳಗೆ ಬಾಡಿಗೆಗೆ ನೀಡಬೇಕು ಎಂದು ರಾಷ್ಟ್ರ ಭಕ್ತ ಬಳಗವು ಪಾಲಿಕೆಗೆ ಅಂತಿಮ ಗಡುವು ನೀಡುತ್ತಿದೆ. 15 ದಿನದೊಳಗೆ ವಾಣಿಜ್ಯ ಸಂಕೀರ್ಣಗಳನ್ನು ಬಾಡಿಗೆಗೆ ನೀಡದಿದ್ದರೆ, ಪಾಲಿಕೆಯನ್ನು ಮುತ್ತಿಗೆ ಹಾಕಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ರಾಷ್ಟ್ರ ಭಕ್ತ ಬಳಗದ ಪ್ರಮುಖ ಕೆ.ಇ. ಕಾಂತೇಶ್ ಎಚ್ಚರಿಸಿದರು.
Rashtra Bhakta Balaga ಈ ಎಲ್ಲಾ ಸಮಸ್ಯೆಗಳನ್ನು ಅರಿಯಲು ರಾಷ್ಟ್ರ ಭಕ್ತರ ಬಳಗದ ಕಾರ್ಯಕರ್ತರು ನಗರದ ಎಲ್ಲಾ ವಾರ್ಡ್‌ಗಳಲ್ಲಿ ತಲಾ 20 ಸದಸ್ಯರ ತಂಡವನ್ನು ರಚಿಸಿಕೊಂಡು, ಸಾರ್ವಜನಿಕರನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರಕ್ಕಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರಲಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪಾಲಿಕೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಹರಿಸದಿದ್ದರೆ, ಡಿಸೆಂಬರ್ ತಿಂಗಳ ಕೊನೆಯವರೆಗೂ ಕಾಲಾವಕಾಶ ನೀಡಿ, ನಂತರ ಜನವರಿ ತಿಂಗಳ 2ನೇ ತಾರೀಖಿನಿಂದ ರಾಷ್ಟ್ರ ಭಕ್ತರ ಬಳಗವು ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
Rashtra Bhakta Balaga Gives 15-Day Ultimatum


